ADVERTISEMENT

ಗದಗ | ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಮೊದಲ ದಿನ ಸುಸೂತ್ರ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 2:52 IST
Last Updated 23 ಸೆಪ್ಟೆಂಬರ್ 2025, 2:52 IST
ಗದಗ ತಹಶೀಲ್ದಾರ್‌ ಕಚೇರಿಯಲ್ಲಿ ಗಣತಿದಾರರಿಗೆ ಅಧಿಕಾರಿಗಳು ಸೋಮವಾರ ಕಿಟ್‌ ವಿತರಣೆ ಮಾಡಿದರು
ಗದಗ ತಹಶೀಲ್ದಾರ್‌ ಕಚೇರಿಯಲ್ಲಿ ಗಣತಿದಾರರಿಗೆ ಅಧಿಕಾರಿಗಳು ಸೋಮವಾರ ಕಿಟ್‌ ವಿತರಣೆ ಮಾಡಿದರು   

ಗದಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಕೆಲವು ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿ ಗಣತಿಯು ಮೊದಲದಿನ ಸುಸೂತ್ರವಾಗಿ ನಡೆಯಿತು.  

‘ಪೂರ್ವನಿಗದಿಯಂತೆ ಗದಗ ಗ್ರಾಮೀಣ ವಲಯದ ಗಣತಿದಾರರಿಗೆ ಭಾನುವಾರವೇ ಕಿಟ್‌ಗಳನ್ನು ವಿತರಿಸಬೇಕಿತ್ತು. ಆದರೆ, ಕಿಟ್‌ ಬರುವುದು ತಡವಾಗಿದ್ದರಿಂದ ಸೋಮವಾರ ವಿತರಣೆ ಮಾಡಲಾಗಿದೆ’ ಎಂದು ಉಪವಿಭಾಗಾಧಿಕಾರಿ ಗಂಗಪ್ಪ ಎಂ. ತಿಳಿಸಿದ್ದಾರೆ.

ಗಣತಿದಾರರು ಸಮೀಕ್ಷೆಯ ಕಿಟ್‌ ಪಡೆಯಲು ಸೋಮವಾರ ಗದಗ ತಹಶೀಲ್ದಾರ್‌ ಕಚೇರಿ ಎದುರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಕಿಟ್‌ ಪಡೆದುಕೊಂಡು ಗಣತಿಗೆ ಹೋಗುವ ಮುನ್ನ ಕೆಲವು ಗಣತಿದಾರರಿಗೆ ಆ್ಯಪ್‌ನಲ್ಲಿ ಸಮಸ್ಯೆ ಎದುರಾಯಿತು. ಕೆಲವರಿಗೆ ಒಟಿಪಿ ಬರಲಿಲ್ಲ. ಕೆಲವರಿಗೆ ಅಪ್‌ಡೇಟ್‌ ಕೇಳಿತು. ಅಪ್‌ಡೇಟ್‌ ಮಾಡಿದರೆ ಆ್ಯಪ್‌ ತನ್ನಿಂದತಾನೇ ಡಿಲೀಟ್‌ ಆಯ್ತು. ಬಳಿಕ ಅವರು ಆ್ಯಪ್‌ ಮತ್ತೇ ಇನ್‌ಸ್ಟಾಲ್‌ ಮಾಡಿಕೊಂಡು ಗಣತಿಗೆ ತೆರಳಿದರು. 

ADVERTISEMENT

‘ಸಮೀಕ್ಷೆ ಸೋಮವಾರದಿಂದ ಆರಂಭಗೊಂಡಿದ್ದು, ಮೊದಲದಿನ ಎಲ್ಲೂ ತಾಂತ್ರಿಕ ದೋಷಗಳು ಕಂಡುಬಂದಿಲ್ಲ. ಕೆಲವೆಡೆ ಒಟಿಪಿ ಸಮಸ್ಯೆ ಎದುರಾಗಿತ್ತು. ಅದನ್ನು ಐದು ನಿಮಿಷದಲ್ಲೇ ಬಗೆಹರಿಸಲಾಯಿತು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೆಹಬೂಬ್‌ ತುಂಬರಮಟ್ಟಿ ತಿಳಿಸಿದ್ದಾರೆ.

‘ಒಬ್ಬ ಗಣತಿದಾರರಿಗೆ ಒಂದು ದಿನಕ್ಕೆ ಇಷ್ಟೇ ಮನೆಗಳನ್ನು ಭೇಟಿ ನೀಡಬೇಕು ಎಂದು ಗುರಿ ನಿಗದಿ ಮಾಡಿಲ್ಲ. ಒಟ್ಟಾರೆ, ಸೆ.22ರಿಂದ ಅ.7ರ ಒಳಗಡೆ ಒಬ್ಬ ಗಣತಿದಾರರ ಲಾಗಿನ್‌ಗೆ 120ರಿಂದ 150 ಮನೆಗಳು ಬರಲಿವೆ. ಗಣತಿದಾರರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ’ ಎಂದು ತಿಳಿಸಿದರು. 

‘ಒಂದು ಮನೆಯಲ್ಲಿ ಗಣತಿಗೆ ಕನಿಷ್ಠ 40 ನಿಮಿಷಗಳು ಬೇಕಾಗಲಿದೆ. ಗಣತಿ ವೇಳೆ ಗಣತಿದಾರರು 60 ಪ್ರಶ್ನೆಗಳನ್ನು ಕೇಳುತ್ತಾರೆ. 40 ವೈಯಕ್ತಿಕ ಪ್ರಶ್ನೆಗಳು, ಇನ್ನುಳಿದ 20 ಪ್ರಶ್ನೆಗಳು ಕುಟುಂಬಕ್ಕೆ ಸಂಬಂಧಪಟ್ಟವು’ ಎಂದು ತಿಳಿಸಿದರು. 

‘ದಿನಕ್ಕೆ 20 ಮನೆಗಳ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದು ಗಣತಿದಾರರಿಗೆ ನಾವು ಮೌಖಿಕವಾಗಿ ತಿಳಿಸಿದ್ದೇವೆ. ಇದು ರಾಜ್ಯ ಸರ್ಕಾರದ ಗುರಿ ನಿಗದಿ ಅಲ್ಲ. ಗಣತಿದಾರರು ಸಮೀಕ್ಷೆಗೆ ಸಂಬಂಧಿಸಿದಂತೆ ಕೌತುಕದಿಂದ ಇದ್ದಾರೆ. ಪ್ರಶ್ನಾವಳಿಗಳು ಚೆನ್ನಾಗಿವೆ. ಸಮೀಕ್ಷೆ ಸರಳವಾಗಿ ನಡೆಯುತ್ತಿದೆ’ ಎಂದರು.

‘ಗದಗ ಜಿಲ್ಲೆಯಲ್ಲಿ 2,601 ಬ್ಲಾಕ್‌ಗಳು ರಚಿತವಾಗಿವೆ. 3,154 ಸಿಬ್ಬಂದಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ. ಇವರಲ್ಲಿ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ, ಜಿಲ್ಲಾಡಳಿತದ ಸಿಬ್ಬಂದಿ ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ’ ಎಂದು ತಿಳಿಸಿದರು.

ಕಿಟ್‌ ಪಡೆದುಕೊಂಡು ಗಣತಿಗೆ ತೆರಳಿದ ಸಮೀಕ್ಷೆಗೆ ನಿಯೋಜಿತದೊಂಡ ಸಿಬ್ಬಂದಿ

ಗಣತಿದಾರರಿಗೆ ಎರಡು ಹಂತದ ತರಬೇತಿ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸೋಮವಾರದಿಂದ ಚಾಲನೆ ಸಿಕ್ಕಿದ್ದು ಗಣತಿದಾರರಿಗೆ ಕಿಟ್‌ಗಳನ್ನು ವಿತರಿಸಲಾಗಿದೆ. ಗಣತಿಗೂ ಮೊದಲು ಸಮೀಕ್ಷೆದಾರರಿಗೆ ಎರಡು ಹಂತದಲ್ಲಿ ತರಬೇತಿ ನೀಡಲಾಗಿದೆ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಬಸವರಾಜ ಬಳ್ಳಾರಿ ತಿಳಿಸಿದ್ದಾರೆ. ‘ಗದಗ ತಾಲ್ಲೂಕಿನಲ್ಲಿ 945 ಮಂದಿ ಶಿಕ್ಷಕರು ಭಾಗಿಯಾಗಿದ್ದಾರೆ. ಕಿಟ್‌ನಲ್ಲಿ ಕೈಪಿಡಿ ಕ್ಯಾಪ್‌ ದೃಢೀಕರಣ ಪತ್ರ ಐಡಿ ಕಾರ್ಡ್‌ ಹೊಂದಿದೆ. ಎಲ್ಲರೂ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದು ಯಾವ ಮನೆ ಸಮೀಕ್ಷೆ ಮಾಡಬೇಕು ಎಂಬುದು ಅದರಲ್ಲೇ ತೋರಿಸುತ್ತದೆ. ಹೊಸ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡವರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಎಲ್ಲರೂ ಗಣತಿಯಲ್ಲಿ ತೊಡಗಿದ್ದಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.