ADVERTISEMENT

ಬೇಕರಿ ಉದ್ಯಮದಲ್ಲಿ ಮಾದರಿಯಾದ ಸಹೋದರರು

ಮುಂಡರಗಿ ಪಟ್ಟಣದಲ್ಲಿ 5 ಅಂಗಡಿಗಳು; 30 ಮಂದಿಗೆ ನೇರ ಉದ್ಯೋಗ

ಕಾಶಿನಾಥ ಬಿಳಿಮಗ್ಗದ
Published 5 ಡಿಸೆಂಬರ್ 2018, 17:21 IST
Last Updated 5 ಡಿಸೆಂಬರ್ 2018, 17:21 IST
ಮಹಾಂತೇಶ ಬೇಕರಿಯಲ್ಲಿ ಸ್ಥಾಪಿಸಿರುವ ಖಾರಾ ಹಾಗೂ ಖೋವಾ ತಯಾರಿಸುವ ಯಂತ್ರಗಳು
ಮಹಾಂತೇಶ ಬೇಕರಿಯಲ್ಲಿ ಸ್ಥಾಪಿಸಿರುವ ಖಾರಾ ಹಾಗೂ ಖೋವಾ ತಯಾರಿಸುವ ಯಂತ್ರಗಳು   

ಮುಂಡರಗಿ: ತಾಲ್ಲೂಕಿನ ಮುಂಡವಾಡ ಗ್ರಾಮದಿಂದ ಬರಿ ಕೈಯಲ್ಲಿ, ಸೈಕಲೇರಿ ಮುಂಡರಗಿ ಪಟ್ಟಣಕ್ಕೆ ಬಂದು, ಬೇಕರಿ ಪ್ರಾರಂಭಿಸಿ, ಪ್ರಸ್ತುತ 30 ಜನರಿಗೆ ನೇರ ಉದ್ಯೋಗ ನೀಡಿರುವ ನಾವಿ ಸಹೋದರರು ನವೋದ್ಯಮಿಗಳಿಗೆ ಸ್ಪೂರ್ತಿಯಾಗಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಚಂದ್ರಣ್ಣ, ಮಹಾಂತೇಶ, ಮಲ್ಲಿಕಾರ್ಜುನ ಹಾಗೂ ಶಿವಾನಂದ ಎಂಬ ನಾಲ್ಕು ಮಕ್ಕಳೊಂದಿಗೆ ಪಟ್ಟಣಕ್ಕೆ ಬಂದ ಈಶ್ವರಪ್ಪ ನಾವಿ ಅವರು ಪಟ್ಟಣದಲ್ಲಿ ಮಹಾಂತೇಶ ಸ್ವೀಟ್ ಮಾರ್ಟ್‌ ಹಾಗೂ ಮಹಾಂತೇಶ ಬೇಕರಿ ತೆರೆದರು. ಚಂದ್ರಣ್ಣ ಹಾಗೂ ಮಹಾಂತೇಶ ಕೇರಳದ ಕೊಚ್ಚಿ ಸೇರಿದಂತೆ ಹಲವೆಡೆ ಬೇಕರಿ ಉದ್ಯಮದಲ್ಲಿ ತರಬೇತಿ ಪಡೆದು ಬಂದಿದ್ದರಿಂದ ಗ್ರಾಹಕರಿಗೆ ಉತ್ತಮ ಗುಣಮಟ್ಟದ, ರುಚಿಯಾದ ತಿನಿಸುಗಳನ್ನು ಪೂರೈಸಲು ಸಾಧ್ಯವಾಯಿತು. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ, ಗುಣಮಟ್ಟದ ಉತ್ಪನ್ನಗಳನ್ನು ನೀಡಿದ್ದರಿಂದ ಇವರ ಬೇಕರಿ ಗ್ರಾಹಕರ ಮೆಚ್ಚುಗೆ, ವಿಶ್ವಾಸ ಗಳಿಸಿತು.

ಗ್ರಾಹಕರ ದಟ್ಟಣೆ ಹೆಚ್ಚಿದ ಬೆನ್ನಲ್ಲೇ, ಪಟ್ಟಣದಲ್ಲಿ ಮತ್ತೊಂದು ಅಂಗಡಿ ತೆರೆದರು. ಸದ್ಯ ಮುಂಡರಗಿ ಪಟ್ಟಣದ ಪ್ರಮುಖ ಭಾಗಗಳಲ್ಲಿ ಒಟ್ಟು ಐದು ಮಹಾಂತೇಶ ಸ್ವೀಟ್ ಮಾರ್ಟ್‌ಗಳು ತಲೆ ಎತ್ತಿವೆ. ಐದೂ ಅಂಗಡಿಗಳಲ್ಲಿ ನಿತ್ಯ ಭರ್ಜರಿ ವ್ಯಾಪಾರ ನಡೆಯುತ್ತಿದ್ದು, ನಾಲ್ವರು ಸಹೋದರರು ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿದ್ದಾರೆ. ಪರಿಶ್ರಮದ ಫಲವಾಗಿ ಮಾಸಿಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ADVERTISEMENT

ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಮಹಾಂತೇಶ ಬೇಕರಿ (ಶಾಂಭವಿ ಬೇಕರಿ ಎಂದು ಕರೆಯಲಾಗುತ್ತದೆ) ಇದ್ದು, ಇಲ್ಲಿ ಖೋವಾ ಸೇರಿದಂತೆ ಎಲ್ಲ ಬಗೆಯ ಸಿಹಿ ತಿನಿಸು ತಯಾರಿಸಲಾಗುತ್ತದೆ. ಇಲ್ಲಿಂದ ಪಟ್ಟಣದಲ್ಲಿರುವ ಉಳಿದ ಮಹಾಂತೇಶ ಬೇಕರಿಗಳಿಗೆ ಪೂರೈಸಲಾಗುತ್ತದೆ.

30 ಮಂದಿಗೆ ನೇರ ಉದ್ಯೋಗ ನೀಡಿರುವುದರ ಜತೆಯಲ್ಲೇ, ಬೇಕರಿಯಲ್ಲಿ ನಿತ್ಯ ಕೆಲಸಕ್ಕಾಗಿ ಹಲವು ಯುವಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರತಿ ನಿತ್ಯ ಒಂದು ಸಾವಿರ ಲೀಟರ್ ಹಾಲಿನ ಖೋವಾ, 3 ಕ್ವಿಂಟಲ್‌ ಖಾರಾ ಹಾಗೂ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ. ಬ್ಯಾಂಕ್ ಸಾಲದ ನೆರವಿನಿಂದ ಅಂದಾಜು ₹ 18 ಲಕ್ಷ ವೆಚ್ಚದಲ್ಲಿ ಖಾರ ತಯಾರಿಸುವ ಯಂತ್ರ ಹಾಗೂ ₹ 14 ಲಕ್ಷ ವೆಚ್ಚದಲ್ಲಿ ಖೋವಾ ತಯಾರಿಸುವ ಯಂತ್ರಗಳನ್ನು ಅಳವಡಿಸಲಾಗಿದೆ. ಕಾರ್ಮಿಕರೊಂದಿಗೆ ಈ ನಾಲ್ಕೂ ಮಂದಿ ಸಹೋದರರು ಹಾಗೂ ಅವರ ಪತ್ನಿಯರು ಕೆಲಸ ಮಾಡುತ್ತಾರೆ.

*
ಯಾವುದೇ ಉದ್ಯಮದಲ್ಲಿ ಮುಂದೆ ಬರಬೇಕು ಎಂದರೆ ಕಾಯಕದಲ್ಲಿ ಶ್ರದ್ಧೆ ಹಾಗೂ ಪರಿಶ್ರಮ ಇರಬೇಕು. ಕಷ್ಟಪಟ್ಟು ದುಡಿದರೆ ಖಂಡಿತ ಯಶಸ್ಸು ದೊರೆಯುತ್ತದೆ.
-ಮಹಾಂತೇಶ ನಾವಿ, ಬೇಕರಿ ಉದ್ಯಮಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.