
ಗದಗ: ತಾಲ್ಲೂಕಿನ ಬಳಗಾನೂರು ಗ್ರಾಮದ ಚಿಕೇನಕೊಪ್ಪ ಚನ್ನವೀರ ಶರಣರ ಮಠದಲ್ಲಿ ಚನ್ನವೀರ ಶರಣರ 31ನೇ ಪುಣ್ಯಸ್ಮರಣೋತ್ಸವ, ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಮಹಾತ್ಮರ ಜೀವನ-ದರ್ಶನ, ಪ್ರವಚನ ಮಂಗಲೋತ್ಸವ ಜರುಗಿತು.
ಹೂವಿನಹಡಗಲಿ ಗವಿಮಠದ ಹಿರಿಯ ಶಾಂತವೀರ ಸ್ವಾಮೀಜಿ ಮಾತನಾಡಿ, ‘ಶರಣರ ನುಡಿ ನಮ್ಮ ಮನುಷ್ಯ ಬದುಕಿಗೆ ಸಂಜೀವಿನಿ. ಅವರ ನಡೆಚೆನ್ನ, ನುಡಿಚೆನ್ನ, ಕೃತಿಚೆನ್ನವಾಗಿತ್ತು. ಅವರ ಸ್ಮರಣೆಯ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಂಡು ಸಾರ್ಥಕತೆ ಪಡೆಯಬೇಕು’ ಎಂದರು.
‘ಶರಣರ ಜಾತ್ರೆಯ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರ ಇಮ್ಮಡಿಗೊಳಿಸುವ ಕಾರ್ಯ ನಡೆಯುತ್ತಿರುವುದು ಉತ್ತಮ ಬೆಳೆವಣೆಗೆಯಾಗಿದೆ’ ಎಂದರು.
ಸಮ್ಮುಖ ವಹಿಸಿದ್ದ ರಬಕವಿ-ಸಂಶಿಯ ಬ್ರಹ್ಮಾನಂದಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ‘ಶರಣರ ಜಾತ್ರೆ ಅಪರೂಪ ಮತ್ತು ಅದ್ಭುತವಾಗಿದೆ. ಜೀವನ ಸಾರ್ಥಕತೆಗೆ ಏನು ಬೇಕು ಎಂಬುದನ್ನು ಚಿಂತನೆಗೆ ಒಳಪಡಿಸುತ್ತದೆ. ಭಕ್ತರಿಗೆ ಶರಣರ ಅನುಭಾವದ ಬೆಳಕು ಸದಾಕಾಲ ಬೆಳಗುವಂತೆ ಮಾಡಿಕೊಳ್ಳುವುದು, ಶರಣರ ವಿಚಾರಗಳನ್ನು, ಆದರ್ಶಗಳನ್ನು ಮನದಲ್ಲಿಟ್ಟುಕೊಂಡು ಹೋಗುವುದರ ಜತೆಗೆ ಸರಿಯಾದ ಕ್ರಮದಲ್ಲಿ ಜೀವನ ನಿರ್ವಹಿಸಲು ಮಹಾತ್ಮರ ಜೀವನ ದರ್ಶನ ಪೂರಕವಾಗಿದೆ’ ಎಂದರು.
ಬಳೂಟಿಗಿ ಹಿರೇಮಠದ ಅನುಭಾವಿಗಳಾದ ಶಿವಕುಮಾರ ಸ್ವಾಮೀಜಿ ಪ್ರವಚನದ ಮಂಗಲದ ನುಡಿಗಳನ್ನಾಡಿದರು.
ಇದೇ ಸಂದರ್ಭದಲ್ಲಿ ವಸಂತಗೌಡ ಪೊಲೀಸಪಾಟೀಲ ಕುಟುಂಬ ವರ್ಗದವರಿಂದ ಹಾಗೂ ಮರಿಯಪ್ಪ ಮೇಗಲಮನಿ ಸ್ಮರಣಾರ್ಥ ಸಂತೋಷಕುಮಾರ ಹಟ್ಟಿಮನಿ, ದಿ. ಶಾಂತಾ ಯಲ್ಲಪ್ಪ ರಾಜೂರ ಸ್ಮರಣಾರ್ಥ ಮಹಾಂತೇಶ ಇಟಗಿ ಕವಲೂರ ಅವರಿಂದ ಮುಂಡಗೋಡದ ನಾಗಪ್ಪ ಕಾಮತ ಸ್ಮರಣಾರ್ಥ ಮಂಜುನಾಥ ಕಾಮತ ಅವರಿಂದ ಶಿವಶಾಂತವೀರ ಶರಣರ ತುಲಾಭಾರದ ಭಕ್ತಿಸೇವೆ ಜರುಗಿತು.
ಸೋಮನಾಳದ ಶರಣು ಕೆ. ಹಿರೇಮಠ ಹಾಗೂ ಪಂಚಾಕ್ಷರಿ ಹೂಗಾರ ಅವರಿಂದ ಸಂಗೀತ ಸೇವೆ ನಡೆಯಿತು. ಶಿವಶರಣಗೌಡ ಯರಡೋಣಿ ಸ್ವಾಗತಿಸಿದರು. ಶಿವಲಿಂಗ ಶಾಸ್ತ್ರೀಗಳು ಸಿದ್ದಾಪೂರ ನಿರೂಪಿಸಿದರು. ಶಿವು ಗಣಾಚಾರಿ ವಂದಿಸಿದರು.
ಜನರ ಮನಸ್ಸನ್ನು ಅಧ್ಯಾತ್ಮದ ಕಡೆಗೆ ಸೆಳೆಯಲು ಶರಣರ ಸ್ಮರಣೆ ಪ್ರವಚನ ಚಿಂತನೆ ಹೆಚ್ಚು ಪರಿಣಾಮಕಾರಿಯಾಗಿದೆ. ಈ ದಿಸೆಯಲ್ಲಿ ಬಳೂಟಿಗಿಯ ಶಿವಕುಮಾರ ಮಹಾಸ್ವಾಮಿಗಳು ಒಂದು ವಿಶೇಷ ಪ್ರಯತ್ನ ಮಾಡಿದ್ದಾರೆ–ಶಿವಶಾಂತವೀರ ಶರಣರು ಬಳಗಾನೂರು ಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.