ADVERTISEMENT

ಅನ್ಯ ಧರ್ಮಕ್ಕೆ ಹೋದರೆ ವಿರೋಧ ಯಾಕೆ?

ಮತಾಂತರ ನಿಷೇಧ ಮಸೂದೆ ಕೈಬಿಡಿ: ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:50 IST
Last Updated 15 ಡಿಸೆಂಬರ್ 2021, 4:50 IST

ಗದಗ: ‘ದೇಶದಲ್ಲಿ ಬೇರೆ ಧರ್ಮದವರು ಹಿಂದೂ ಧರ್ಮಕ್ಕೆ ಬಂದರೆ ಯಾವುದೇ ವಿರೋಧವಿಲ್ಲ. ಆದರೆ ಹಿಂದೂ ಧರ್ಮದವರು ಅನ್ಯ ಧರ್ಮಕ್ಕೆ ಹೋದರೆ ವಿರೋಧ ಮಾಡುವುದು; ಅದಕ್ಕಾಗಿ ಕಾನೂನು ಜಾರಿಗೆ ತರುವುದು ಯಾವ ನ್ಯಾಯ? ಇಂತಹ ಕಾಯ್ದೆಗಳು ಸಂವಿಧಾನಕ್ಕೆ ಅಪಚಾರ’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಟೀಕಿಸಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಈ ನಾಡಿನಲ್ಲಿ ಅನೇಕರು ಬಸವ ತತ್ವ, ವಚನ ಪ್ರಚಾರ ಮಾಡುತ್ತಾರೆ. ಬೈಬಲ್ ಅಥವಾ ಕುರ್‌ಆನ್ ಹಿಡಿದು ಪ್ರಚಾರ ಮಾಡುವಂತಹ ವಾತಾವರಣ ಇಲ್ಲ. ರಾಜ್ಯ ಸರ್ಕಾರ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಸಂವಿಧಾನವು ನೀಡಿದ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವುದಾಗಿದೆ. ಆದ್ದರಿಂದ ಕೂಡಲೇ ಅದನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ಜನಪ್ರತಿನಿಧಿಗಳು ಸಂವಿಧಾನ ಓದಿಕೊಳ್ಳದ ಕಾರಣ ಇಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ. ಸಂವಿಧಾನ ನಮಗೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ನೀಡಿದ್ದು, ಪ್ರತಿಯೊಬ್ಬರೂ ತನಗೆ ಇಷ್ಟವಾದ ಧರ್ಮದ ಆಚರಣೆ, ಅನುಸರಣೆ ಹಾಗೂ ಪ್ರಚಾರದ ಸ್ವಾತಂತ್ರ್ಯವಿದೆ. ಹೀಗಿದ್ದರೂ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತರಲು ಹೊರಟಿರುವುದು ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ಆಹಾರ ಎಲ್ಲರ ಹಕ್ಕು. ಒಬ್ಬ ವ್ಯಕ್ತಿಗೆ ನೀನು ಇದನ್ನು ತಿನ್ನು, ಇದನ್ನು ತಿನ್ನಬೇಡ ಎಂದು ಹೇಳುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಒಂದರ್ಥದಲ್ಲಿ ಈ ಚರ್ಚೆಯೇ ಅನಗತ್ಯ. ಸರ್ಕಾರ ಜಾರಿಗೆ ತಂದಿರುವ ಮೊಟ್ಟೆ ವಿತರಣೆಯನ್ನು ಕಡ್ಡಾಯವಾಗಿ ಮುಂದುವರಿಸಬೇಕು’ ಎಂದು ಆಗ್ರಹಿಸಿದರು.

ಬಸವ ತತ್ವದ ಅನುಯಾಯಿ ಅಶೋಕ ಬರಗುಂಡಿ ಮಾತನಾಡಿ, ‘ಆಮಿಷಕ್ಕೆ ಒಳಗಾಗದಂತೆ ಸರ್ಕಾರ, ಧಾರ್ಮಿಕ ಮುಖಂಡರು, ಸ್ವಾಮೀಜಿಗಳು ಅವರನ್ನು ಬಲಿಷ್ಠಗೊಳಿಸಲಿ. ಒಂದೆಡೆ ಅನ್ನ, ಉದ್ಯೋಗ ಸಿಗದಂತೆ ಮಾಡಿ, ಮತ್ತೊಂದೆಡೆ ಮತಾಂತರಕ್ಕೆ ವಿರೋಧಿಸುತ್ತಾರೆ. ಈ ಕಾಯ್ದೆ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ’ ಎಂದು ಟೀಕಿಸಿದರು.

ಲೋಹಿಯಾ ತತ್ವದಲ್ಲಿ ಬೆಳೆದು ಬಂದ ಬೊಮ್ಮಾಯಿ ಅವರು ಇಂದು ಸಿಎಂ ಆದ ನಂತರ ತಮ್ಮೆಲ್ಲಾ ತತ್ವ ಸಿದ್ಧಾಂತಗಳನ್ನು ಬಿಟ್ಟು ಸಂವಿಧಾನಕ್ಕೆ ಮಾರಕವಾಗುವಂತಹ ಮಂತಾಂತರ ನಿಷೇಧ ಕಾನೂನು ಜಾರಿಗೆ ತರಲು ಮುಂದಾಗಿರುವುದು ಬೇಸರ ತರಿಸಿದೆ ಎಂದು ಹೇಳಿದರು.

ಶೇಖಣ್ಣ ಕವಳಿಕಾಯಿ, ಆನಂದ ಸಿಂಗಾಡಿ, ಮುತ್ತು ಬಿಳಿಯಲಿ, ಷರೀಫ ಬಿಳಿಯಲಿ, ಬಸು ಬಿಳಿಯಲಿ, ಮಾರುತಿ ಬಂಡಿವಡ್ಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.