ADVERTISEMENT

ರೋಣ | ಅವ್ಯವಸ್ಥೆಯ ಆಗರ ಬೆಳವಣಿಕಿ ಗ್ರಾಮ

ಮೂಲಸೌಕರ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ನಿರಾಸಕ್ತಿ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 4:03 IST
Last Updated 6 ಆಗಸ್ಟ್ 2025, 4:03 IST
ಸದಾ ಬಾಗಿಲು ಮುಚ್ಚಿರುವ ಹಾಗೂ ಅಸ್ವಚ್ಛತೆಯಿಂದ ಕೂಡಿರುವ ಬೆಳವಣಿಕಿ ಗ್ರಾಮದ ಪಶು ಚಿಕಿತ್ಸಾಲಯ
ಸದಾ ಬಾಗಿಲು ಮುಚ್ಚಿರುವ ಹಾಗೂ ಅಸ್ವಚ್ಛತೆಯಿಂದ ಕೂಡಿರುವ ಬೆಳವಣಿಕಿ ಗ್ರಾಮದ ಪಶು ಚಿಕಿತ್ಸಾಲಯ   

ರೋಣ: ತಾಲ್ಲೂಕಿನ ಬೆಳವಣಿಕಿ ಗ್ರಾಮವು ರಸ್ತೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಠ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿರುವ ಗ್ರಾಮ ಪಂಚಾಯಿತಿ ಆಡಳಿತದ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

ಗ್ರಾಮದಲ್ಲಿ ಈಗಾಗಲೇ ಕೈಗೊಂಡಿರುವ ಜಲ್‌ಜೀವನ್‌ ಮಿಷನ್ (ಜೆಜೆಎಂ) ಕಾಮಗಾರಿಗಳು ಅಪೂರ್ಣಗೊಂಡಿದ್ದು, ಪ್ರತಿ ಮನೆಗೂ ನೀರು ತಲುಪಿಸಬೇಕಾದ ಯೋಜನೆಯೊಂದು ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಯೋಜನೆ ಅಡಿ ಮನೆಮನೆಗಳಿಗೂ ಕೊಳಾಯಿಗಳನ್ನು ಅಳವಡಿಸಿದ್ದರೂ, ನೀರು ಪೂರೈಕೆ ಆಗದ ಕಾರಣ ಕೊಳವೆಗಳು ಹಲವೆಡೆ ಕಿತ್ತು ಹೋಗಿದ್ದು ಮತ್ತೆ ಕೆಲವು ಸಂಪೂರ್ಣವಾಗಿ ಶಿಥಿಲವಾಗಿವೆ.

ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಉಂಟು ಮಾಡುತ್ತಿವೆ. ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದ್ದರೂ ಗ್ರಾಮ ಪಂಚಾಯಿತಿ ಮಾತ್ರ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ. ಜೆಜೆಎಂ ಕಾಮಗಾರಿಗಾಗಿ ಅಗೆದಿರುವ ರಸ್ತೆಗಳನ್ನು ಸರಿಪಡಿಸದೆ ಹಾಗೆಯೇ ಬಿಟ್ಟಿದ್ದು, ಗ್ರಾಮದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ತೀವ್ರ ಅಡೆತಡೆ ಉಂಟಾಗುತ್ತಿದೆ. ಸದ್ಯ ಮಳೆಗಾಲ ಪ್ರಾರಂಭವಾಗಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದ್ದು, ಗ್ರಾಮದ ಮಹಿಳೆಯರು ಮತ್ತು ಮಕ್ಕಳು ಈ ಕೆಸರು ರಸ್ತೆಯಲ್ಲಿ ನಿತ್ಯ ಓಡಾಡುವುದು ಅನಿವಾರ್ಯವಾಗಿದೆ.

ADVERTISEMENT

ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಬೇಕಾದ ನೀರಿನ ಘಟಕಗಳು ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು ಕುಡುಕರ ಅಡ್ಡೆಗಳಾಗಿ ಮಾರ್ಪಟ್ಟಿವೆ. ಘಟಕದ ವಿದ್ಯುತ್ ಉಪಕರಣಗಳು ಕಿತ್ತು ಹೋಗಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿವೆ.

ಉಪಯೋಗಕ್ಕೆ ಬಾರದ ಪಶು ಚಿಕಿತ್ಸಾಲಯ: ಬಹುತೇಕ ರೈತಾಪಿ ವರ್ಗದಿಂದ ಕೂಡಿರುವ ಬೆಳವಣಿಕಿ ಗ್ರಾಮದಲ್ಲಿ ರೈತರ ಅನುಕೂಲಕ್ಕಾಗಿ ಪಶು ಚಿಕಿತ್ಸಾಲಯವನ್ನು ಸರ್ಕಾರ ಸ್ಥಾಪಿಸಿದ್ದರೂ ಸೂಕ್ತ ನಿರ್ವಹಣೆ ಹಾಗೂ ಸಮರ್ಪಕ ಸಿಬ್ಬಂದಿ ಕೊರತೆಯಿಂದ ಚಿಕಿತ್ಸಾಲಯವು ಗ್ರಾಮದ ರೈತರ ಅನುಕೂಲಕ್ಕೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಇಷ್ಟೇ ಅಲ್ಲದೇ, ಗ್ರಾಮ ಆಡಳಿತ ಅಧಿಕಾರಿ ಕಚೇರಿಯೇ ಶಿಥಿಲಾವಸ್ಥೆ ತಲುಪಿದ್ದು, ಚಾವಣಿ ಉದುರಿ ಬೀಳುತ್ತಿದೆ. ಮಳೆ ಬಂದರೆ ಸೋರುವ ಹಂತ ತಲುಪಿದೆ. ಕನಿಷ್ಠ ಅದನ್ನಾದರೂ ಸುಧಾರಿಸುವ ಯೋಚನೆಯನ್ನು ಅಧಿಕಾರಿಗಳು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮಳೆ ನೀರಿನಿಂದ ಕೆಸರು ಗದ್ದೆಯಂತಾಗಿರುವ ಬೆಳವಣಿಕಿ ಗ್ರಾಮದ ಒಳ ರಸ್ತೆಗಳು
ಶಿಥಿಲಗೊಂಡಿರುವ ಬೆಳವಣಿಕಿಯ ಶುದ್ಧ ಕುಡಿಯುವ ನೀರಿನ ಘಟಕದ ಉಪಕರಣಗಳು
ಬೆಳವಣಿಕಿ ಗ್ರಾಮಕ್ಕೆ ಕನಿಷ್ಠ ಮೂಲಸೌಲಭ್ಯ ಕಲ್ಪಿಸುವಲ್ಲಿ ಸರ್ಕಾರ ಗ್ರಾಮ ಪಂಚಾಯಿತಿ ಆಡಳಿತ ವಿಫಲವಾಗಿವೆ
ರಮೇಶ ನಂದಿ ಸಂಚಾಲಕ ದಲಿತ ವಿದ್ಯಾರ್ಥಿ ಪರಿಷತ್ ಬೆಳವಣಿಕಿ
ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಎಸೆದಿರುವ ಮದ್ಯದ ಪ್ಯಾಕೆಟ್‌ಗಳು 

‘ಸಮಸ್ಯೆ ಬಗೆಹರಿಸಲು ಕ್ರಮ’

‘ಶುದ್ಧ ಕುಡಿಯುವ ನೀರಿನ ಘಟಕಗಳ ಟೆಂಡರ್ ಅವಧಿ ಮುಕ್ತಾಯವಾಗಿದ್ದು ಹೊಸ ಟೆಂಡರ್ ಕರೆಯಲು ಈಗಾಗಲೇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸೂಚಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ ಕಂದಕೂರ ತಿಳಿಸಿದ್ದಾರೆ. ‘ಗ್ರಾಮದ ವಿಸ್ತರಿತ ಪ್ರದೇಶಗಳಲ್ಲಿ ಗ್ರಾಮಸ್ಥರು ಹಕ್ಕುಪತ್ರ ಪಡೆಯದೇ ವಸತಿ ಪ್ರದೇಶ ನಿರ್ಮಾಣ ಮಾಡಿಕೊಂಡಿದ್ದು ಅದರಿಂದಾಗಿ ರಸ್ತೆ ನಿರ್ಮಾಣ ಪ್ರಕ್ರಿಯೆಯಲ್ಲಿ ವಿಳಂಬವಾಗಿದೆ. ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ’ ಎಂದು ತಿಳಿಸಿದ್ದಾರೆ.

ಕಿತ್ತು ಹೋಗಿರುವ ಜೆಜೆಎಂ ಕೊಳಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.