ಮುಂಡರಗಿ: ‘ಪ್ರಕೃತಿಯೊಂದಿಗೆ ದೇಹವನ್ನು ಸದೃಢವಾಗಿ ಕಾಪಾಡಿಕೊಳ್ಳುವ ಶಕ್ತಿ ಮನುಷ್ಯನಿಗಿರಬೇಕು. ಪ್ರಕೃತಿಯಿಂದ ಬಂದ ಜೀವ ಒಂದಲ್ಲ ಒಂದು ದಿನ ಪ್ರಕೃತಿಯನ್ನು ಸೇರಲೇಬೇಕು. ಬದುಕಿರುವಷ್ಟು ದಿನ ಎಲ್ಲರೊಂದಿಗೆ ನಗು ನಗುತ್ತ ಬಾಳಬೇಕು. ಆ ಮೂಲಕ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕು’ ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ತೋಂಟದಾರ್ಯ ಶಾಖಾಮಠದಲ್ಲಿ ಬುಧವಾರ ರಾತ್ರಿ ಹಮ್ಮಿಕೊಂಡಿದ್ದ 60ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಇಲ್ಲಿ ಜನಿಸಿದವರೆಲ್ಲರೂ ಒಂದು ದಿನ ಸಾಯಲೇಬೇಕು. ಆದ್ದರಿಂದ ಮನುಷ್ಯ ತನ್ನ ಸಾವಿನ ಕುರಿತು ಸ್ಪಷ್ಟ ಅರಿವು ಹೊಂದಬೇಕು. ಶರಣರು ಮರಣವೇ ಮಹಾನವಮಿ ಎಂದು ಭಾವಿಸಿದ್ದರು. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಾವು ಅವನನ್ನು ಬಿಡುವುದಿಲ್ಲ. ದೇಹ ಅಶಾಶ್ವತವಾಗಿದ್ದು, ನಾವು ಬದುಕಿರುವಾಗ ಪರೋಪಕಾರಿಯಾಗಿ ಬದುಕಬೇಕು’ ಎಂದು ತಿಳಿಸಿದರು.
ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಮಾತನಾಡಿ, ‘ಶರಣರು ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದರು. ಬಸವಣ್ಣ ಸೇರಿದಂತೆ ಶರಣರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ವಚನಗಳಲ್ಲಿ ನಮ್ಮ ಹಲವು ಜ್ವಲಂತ ಸಮಸ್ಯೆಗಳಿಗೆ ಸ್ಪಷ್ಟ ಉತ್ತರಗಳಿವೆ. ನಮ್ಮನ್ನು ನಾವು ಅರಿತುಕೊಳ್ಳಲು ವಚನಗಳು ನೆರವಾಗುತ್ತವೆ’ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ಕಾವ್ಯಾ ಉಪ್ಪಾರ, ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿಜಯಲಕ್ಷ್ಮೀ ಗೊಂಡಬಾಳ, ಡಿಜಿಪಿ ಪ್ರಶಂಸಾ ಪ್ರಶಸ್ತಿ ಪುರಸ್ಕೃತ ಜಾಫರ್ ಬಚ್ಚೇರಿ, ಶಿವಾನುಭವದ ಭಕ್ತಿಸೇವೆ ವಹಿಸಿಕೊಂಡಿದ್ದ ಬಾಗಲಕೋಟೆಯ ಹಿರಿಯ ನ್ಯಾಯಾಧೀಶ ರಾಜಶೇಖರ ತಿಳಗಂಜಿ, ವಕೀಲೆ ಶೋಭಾ ತಿಳಗಂಜಿ ಅವರನ್ನು ಸನ್ಮಾನಿಸಲಾಯಿತು.
ಮಹಾಲಕ್ಷ್ಮೀ ಹಲವಾಗಲಿ ಧರ್ಮಗ್ರಂಥ ಪಠಿಸಿದರು. ಸಮರ್ಥ ಹಿರೇಹೊಳಿ ವಚನ ಚಿಂತನೆ ಮಾಡಿದರು. ಹಿರಿಯ ನ್ಯಾಯಾಧೀಶ ರಾಜಶೇಖರ ಮಾತನಾಡಿದರು. ಜಯಶ್ರೀ ಅಳವಂಡಿ, ನಯನಾ ಅಳವಂಡಿ ಹಾಗೂ ಶಿವಕುಮಾರ ಕುಸಬದ ಸಂಗೀತ ಸೇವೆ ನಡೆಸಿಕೊಟ್ಟರು.
ಡಾ.ನಿಂಗು ಸೊಲಗಿ, ಎಸ್.ಎಸ್.ಗಡ್ಡದ, ರುದ್ರಮುನಿ ದೇವರು, ಮುಖಂಡರಾದ ಕೊಟ್ರೇಶ ಅಂಗಡಿ, ಎಚ್. ವಿರೂಪಾಕ್ಷಗೌಡ್ರ, ದೇವಪ್ಪ ರಾಮೇನಹಳ್ಳಿ, ಫಾಲಾಕ್ಷಿ ಗಣದಿನ್ನಿ, ದೇವೇಂದ್ರಪ್ಪ ರಾಮೇನಹಳ್ಳಿ, ಎಸ್.ಎಸ್.ಗಡ್ಡದ, ವಿಶ್ವನಾಥ ಉಳ್ಳಾಗಡ್ಡಿ, ಬಿಸನಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.