ADVERTISEMENT

‘ಜೀವ ವೈವಿಧ್ಯ ರಕ್ಷಣೆ ಅಗತ್ಯ’

ಅಳಿವಿನಂಚನಲ್ಲಿರುವ ಕೆಂಪು ಚಿಟುವ ಪಕ್ಷಿ ನರಗುಂದದಲ್ಲಿ ಪ್ರತ್ಯಕ್ಷ !

ಬಸವರಾಜ ಹಲಕುರ್ಕಿ
Published 10 ಮೇ 2025, 5:23 IST
Last Updated 10 ಮೇ 2025, 5:23 IST
ನರಗುಂದ- ಬನಹಟ್ಟಿ ರಸ್ತೆಯಲ್ಲಿ ಪತ್ತೆಯಾದ ಅಳಿವಿನಂಚನಲ್ಲಿರುವ ಕೆಂಪು ಚಿಟುವ ಪಕ್ಷಿ.
ನರಗುಂದ- ಬನಹಟ್ಟಿ ರಸ್ತೆಯಲ್ಲಿ ಪತ್ತೆಯಾದ ಅಳಿವಿನಂಚನಲ್ಲಿರುವ ಕೆಂಪು ಚಿಟುವ ಪಕ್ಷಿ.   

ನರಗುಂದ: ಅಳಿವಿನಂಚಿನಲ್ಲಿರುವ ಕೆಂಪು ಚಿಟವ ಪಕ್ಷಿಯು(ಇಂಡಿಯನ್ ಕೌರ್ಸರ್) ಪಟ್ಟಣದ ಬನಹಟ್ಟಿ ರಸ್ತೆಯಲ್ಲಿ ಕಂಡುಬಂದಿದೆ.

ಸ್ಥಳೀಯ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ ಅವರು ಹಕ್ಕಿಗಳ ವೈವಿಧ್ಯತೆ(ಸ್ಥಳೀಯ ಮತ್ತು ವಲಸೆ ಹಕ್ಕಿಗಳ) ಗಣತಿ ಮಾಡುವ ಸಂದರ್ಭದಲ್ಲಿ ಕಂಡು ಬಂದಿದೆ. ಇದರ ವೈಜ್ಞಾನಿಕ ಹೆಸರು ಕರ್ಸೋರಿಯಸ್ ಕೊರೊಮ್ಯಾಂಡಲಿಕಸ್. ಗೌಜುಗ ಹಕ್ಕಿಗಿಂತ ಚಿಕ್ಕದಾದ ಕಂದು ಬಣ್ಣದ ಹಕ್ಕಿ ಇದಾಗಿದೆ. ಕಂದು ನೆತ್ತಿ , ಬಿಳಿ ಹುಬ್ಬು, ಕಣ್ಣಿನ ಕೆಳಗೆ ಇಳಿಬಿಟ್ಟ ಕಪ್ಪುಪಟ್ಟಿ, ಕತ್ತಿನ ಹಿಂಭಾಗ, ಬೆನ್ನು, ರೆಕ್ಕೆ ಹಾಗೂ ಬಾಲ ಕಡು ಬೂದುವಾಗಿರುತ್ತದೆ. ಗದ್ದ ಕತ್ತಿನ ಮುಂಭಾಗ ಎದೆ ಕಂದು ತಳಬಾಗವು ಕೆಂಪು ಮಿಶ್ರೀತ ಕಂದು, ಕೊಕ್ಕು ಹಾಗೂ ಕಾಲುಗಳು ಬೂದು ಬಣ್ಣದ್ದಾಗಿದೆ. ಇದರ ಆವಾಸ ಬಯಲು ಪ್ರದೇಶ ಮತ್ತು ನೆಲಹಕ್ಕಿ ಆಗಿದ್ದು ನೆಲವನ್ನು ಕೆದರಿ ಗೂಡು ನಿರ್ಮಿಸಿ ಮಾರ್ಚ್‌ನಿಂದ ಆಗಷ್ಟವರೆಗೂ ಸಂತಾನೊತ್ಪತ್ತಿ ಮಾಡುತ್ತದೆ. ಕಪ್ಪು ಚುಕ್ಕೆಗಳಿಂದ ಕೂಡಿದ 2-3 ಮೊಟ್ಟೆಗಳನ್ನಿಡುತ್ತದೆ.

ಆಹಾರ: ಇದರ ಪ್ರಮುಖ ಆಹಾರವೆಂದರೆ ಕೀಟಗಳಾದ ಜೀರುಂಡೆಗಳು, ಗೆದ್ದಲುಗಳು, ಕಂಬಳಿಹುಳುಗಳನ್ನು ಬಕ್ಷಿಸುವ ಮೂಲಕ ನೈಸರ್ಗಿಕ ಕೀಟನಿಯಂತ್ರಕವಾಗಿ ಕಾರ್ಯ ನಿರ್ವಹಿಸುತ್ತದೆ. ಗ್ಲೆರಿಯೋಲಿಡೇ ಕುಟುಂಬಕ್ಕೆ ಸೇರಿದ ಕೆಂಪು ಚಿಟುವ ಕಂಡು ಬಂದಿದ್ದು ವಿಶೇಷ.

ADVERTISEMENT

ಹಕ್ಕಿ ಸಂತತಿಗೆ ಇರುವ ಭೀತಿಗಳು: ಕೈಗಾರೀಕಿಕರಣ, ನಗರೀಕರಣದಿಂದಾಗಿ ಆವಾಸ ಸ್ಥಾನ ನಾಶವಾಗಿ ಹಕ್ಕಿಯ ಸಂತತಿ ಅಳುವಿನಂಚು ತಲುಪಿದೆ. ರೈತರ ಹೊಲಗದ್ದೆಗಳನ್ನು ಪ್ಲಾಟ್‌ಗಳನ್ನಾಗಿ ಪರಿವರ್ತಿಸುವುದು ಸಹ ಅವಾಸ ಸ್ಥಾನದ ನಾಶಕ್ಕೆ ಪ್ರಮುಖ ಕಾರಣವಾಗಿದೆ. ಹೊಲಗಳಲ್ಲಿ ಪೈರುಗಳಿಗೆ ಮೀತಿಮಿರಿ ಬಳಸುವ ರಸಾಯನಿಕ ಕೀಟನಾಶಕಗಳು ಸಹ ಇವುಗಳ ಸಂತಾನೋತ್ಮತ್ತಿ ಮತ್ತು ಮೊಟ್ಟೆ ಫಲವತ್ತತೆ ಮೇಲೆ ದುಷ್ಪರಿಣಾಮ ಬೀರಿದೆ.

‘ಈ ಪಕ್ಷಿಯು ರೈತರ ಬೆಳೆಗಳಿಗೆ ಮಾರಕವಾದ ಕೀಟಗಳನ್ನು ಭಕ್ಷಿಸುವ ಮೂಲಕ ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಸರಪಳಿಯ ಸಮತೋಲನದಲ್ಲಿಯು ಸಹ ಪ್ರಮುಖ ಪಾತ್ರ ವಹಿಸುವುದರಿಂದ ಈ ಹಕ್ಕಿಗಳ ಸಂರಕ್ಷಣೆ ಅಗತ್ಯ ಎಂದು ಮಂಜುನಾಥ್ ಹೇಳುತ್ತಾರೆ.

ಬಯಲುಸೀಮೆಯ ಕುರುಚಲು ಕಾಡುಗಳಲ್ಲಿ ಉತ್ತಮ ಹುಲ್ಲುಗಾವಲಿನ ಪರಿಸರ ವ್ಯವಸ್ಥೆ ಇರುವುದರಿಂದ ಕೆಂಪು ಚಿಟವ ಸ್ಥಳೀಯವಾಗಿ ವಲಸೆ ಬಂದಿದೆ ಈ ಹಕ್ಕಿಯು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಎಲ್ಲ ಶುಷ್ಕ ಅರಣ್ಯ ಪ್ರದೇಶ(ಕಪ್ಪತ್ತಗುಡ್ಡ ಒಳಗೊಂಡಂತೆ) ಎಲ್ಲ ಕಡೆ ಹಂಚಿಕೆಯಾಗಿದೆ. ನರಗುಂದ ತಾಲ್ಲೂಕಿನಲ್ಲಿ ಈ ಹಕ್ಕಿ ಇದೇ ಮೊದಲ ಬಾರಿಗೆ ಗೋಚರಿಸಿದೆ.

ವಿಪರೀತಿ ರಾಸಾಯನಿಕ ಕಳೆ ನಾಶಕ (ಹೆರ್ಬಿಸೈಡ್) ಬಳಕೆಯಿಂದ ನಾವು ನಮ್ಮ ಹುಲ್ಲುಗಾವಲು ಪರಿಸರವನ್ನು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ಪರಿಸರ ವ್ಯವಸ್ಥೆಗೆ ತೊಂದರೆ ಉಂಟಾಗಿದೆ
ಮಂಜುನಾಥ ಎಸ್ ನಾಯಕ ಜೀವ ವೈವಿಧ್ಯ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.