ADVERTISEMENT

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕುತಂತ್ರ: ಎಐಸಿಸಿ ಮಾನವ ಹಕ್ಕುಗಳ ಸಮಿತಿ ಒತ್ತಾಯ

ರಾಷ್ಟ್ರಪತಿ ಮಧ್ಯಸ್ಥಿಕೆಗೆ ಎಐಸಿಸಿ ಮಾನವ ಹಕ್ಕುಗಳ ಸಮಿತಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 13:04 IST
Last Updated 19 ಆಗಸ್ಟ್ 2024, 13:04 IST
ಎಐಸಿಸಿ ಮಾನವ ಹಕ್ಕುಗಳ ಸಮಿತಿ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಶಿರಹಟ್ಟಿಯ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು
ಎಐಸಿಸಿ ಮಾನವ ಹಕ್ಕುಗಳ ಸಮಿತಿ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಶಿರಹಟ್ಟಿಯ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು   

ಶಿರಹಟ್ಟಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತರಾತುರಿಯಲ್ಲಿ ತನಿಖೆಗೆ ಅನುಮತಿ ನೀಡಿದ ರಾಜ್ಯಪಾಲರು, ಕೂಡಲೇ ತಮ್ಮ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಎಐಸಿಸಿ ಮಾನವ ಹಕ್ಕುಗಳ ಸಮಿತಿ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಸಂಘಟನೆಗಳ ಅಧ್ಯಕ್ಷ ಸಂತೋಷ ಕುರಿ ಮಾತನಾಡಿ, ‘ಮುಡಾ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಒಬ್ಬ ಖಾಸಗಿ ವ್ಯಕ್ತಿಯ ದೂರಿನನುಸಾರ ಕಳಂಕರಹಿತ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಅನುಮತಿ ನೀಡಿದ್ದು, ಅವರ ಪದವಿಗೆ ಚ್ಯುತಿ ಬಂದಂತಾಗಿದೆ. ಮೈತ್ರಿ ಪಕ್ಷಗಳ ರಾಜಕೀಯ ಷಡ್ಯಂತ್ರವನ್ನು ರಾಜ್ಯದ ಜನತೆ ಎಂದೂ ಒಪ್ಪುವುದಿಲ್ಲ. ತನಿಖೆ ಹೆಸರಿನಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಹಿಂದ ನಾಯಕನ ಶಕ್ತಿ ಹತ್ತಿಕ್ಕಲು ಬಿಜೆಪಿ ಹಾಗೂ ‌ಜೆಡಿಎಸ್ ಕುತಂತ್ರ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಬೇಕೆಂಬ ದುರಾಸೆಯಿಂದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರು ಹೊಂಚು ಹಾಕುತ್ತಿದ್ದಾರೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವುದು ಖಂಡನೀಯ. ಕೂಡಲೇ ಈ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಯಲ್ಲಪ್ಪಗೌಡ ಅಣ್ಣಿಗೇರಿ, ಶಿವಪುತ್ರಪ್ಪ ಮಳ್ಳಣ್ಣವರ, ಕರಿಯಪ್ಪ ಬಳೂಟಗಿ, ಚಂದ್ರು ಜೋಗೇರ, ಜಗದೀಶ್ ಇಟ್ಟೇಕಾರ, ಹನುಮಂತ ಹಾಲಪ್ಪನವರ, ದೇವಪ್ಪ ಇಟ್ಟೇಕಾರ, ಪರಶುರಾಮ ಕುರಿ, ಮೌಲಾಸಾಬ, ಈರಣ್ಣ ಕೋಟಿ, ಬಸವರಾಜ ಜಾಲವಾಡಗಿ, ನಾಗೇಶ ಬಕ್ಸದ, ರಮೇಶ ಗೂಳಪ್ಪನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.