ADVERTISEMENT

ಮುಂಡರಗಿ: ಬೆಲೆ ಏರಿಕೆ ಖಂಡಿಸಿ ಬಿಜೆಪಿಗರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:50 IST
Last Updated 8 ಏಪ್ರಿಲ್ 2025, 15:50 IST
ಮುಂಡರಗಿಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು
ಮುಂಡರಗಿಯಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು   

ಮುಂಡರಗಿ: ರಾಜ್ಯ ಕಾಂಗ್ರೆಸ್ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಬದುಕಿನೊಂದಿಗೆ ಆಟವಾಡುತ್ತಲಿದೆ ಎಂದು ಆರೋಪಿಸಿ ಶಾಸಕ ಡಾ.ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಪಟ್ಟಣದ ಕೇಂದ್ರ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿದರು. ತಹಶೀಲ್ದಾರ್‌ ಕಾರ್ಯಾಲಯದ ಮುಂದಿನ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ವಿದ್ಯುತ್ ದರ, ಬಸ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ ಹೆಚ್ಚಳ, ಪಹಣಿ ಶುಲ್ಕ ಮೊದಲಾದವುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿದೆ. ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಕಾನೂನು ಬಾಹಿರವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ADVERTISEMENT

ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಬಾರದೆಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಸರ್ಕಾರವು ಮುಸ್ಲಿಂ ಗುತ್ತಿಗೆದಾರರಿಗೆ ಶೇ 4ರಷ್ಟು ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಸರ್ಕಾರ ತಕ್ಷಣ ಧರ್ಮಾಧಾರಿತವಾಗಿ ನೀಡಿರುವ ಮೀಸಲಾತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳಿಗಾಗಿ ದಲಿತರ ಅಭಿವೃದ್ಧಿಗೆ ಮೀಸಲಿದ್ದ ಹಣವನ್ನು ದುರುಪಯೋಗ ಮಾಡಿದೆ. ಇದರಿಂದ ದಲಿತರು ಅಭಿವೃದ್ಧಿಯಿಂದ ವಂಚಿತರಾಗುವಂತಾಗಿದೆ. ಸರ್ಕಾರವು ಮುಸ್ಲಿಂ ಓಲೈಕೆ ಮಾಡುತ್ತಿದ್ದು, ಹಿಂದುಗಳನ್ನು ದ್ವಿತಿಯ ದರ್ಜೆಯ ನಾಗರಿಕರಂತೆ ಕಾಣುತ್ತಿದೆ. ಇದರಿಂದ ಸಮಾಜದಲ್ಲಿ ಆಶಾಂತಿ ಹಾಗೂ ಅಸಮಾನತೆ ಮೂಡುತ್ತಲಿದೆ ಎಂದು ಆರೋಪಿಸಿದರು.

ಸದನದಿಂದ ಶಾಸಕರನ್ನು ಅಮಾನತ್ತು ಮಾಡಿರುವ ಆದೇಶವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ತಾಲ್ಲೂಕಿನ ಶಿಂಗಟಾಲೂರ ಹುಲಿಗುಡ್ಡ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ಜಮೀನನ್ನು ಕಳೆದುಕೊಂಡ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಕಾಲುವೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ ಬಿದರಹಳ್ಳಿ ಗ್ರಾಮದ ಬಿದರಳೆಮ್ಮ ದೇವಸ್ಥಾನ ಮತ್ತು ಗುಮ್ಮಗೋಳ ಗೋಣಿ ಬಸವೇಶ್ವರ ದೇವಸ್ಥಾನದ ಸುತ್ತಲೂ ತಡೆಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಎರ್ರಿಸ್ವಾಮಿ.ಪಿ.ಎಸ್. ಮನವಿ ಸ್ವೀಕರಿಸಿದರು. ಶಾಸಕ ಡಾ.ಚಂದ್ರು ಲಮಾಣಿ, ಬಿಜೆಪಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಕಾರ್ಯದರ್ಶಿ ಪ್ರಶಾಂತ ಗುಡದಪ್ಪನವರ, ಮುಖಂಡರಾದ ಕೊಟ್ರೇಶ ಅಂಗಡಿ, ಕುಮಾರಸ್ವಾಮಿ ಹಿರೇಮಠ, ಎಚ್.ವಿರುಪಾಕ್ಷಗೌಡ, ಮಂಜುನಾಥ ಮುಧೋಳ, ಜ್ಯೋತಿ ಹಾನಗಲ್ಲ, ವೀಣಾ ಬೂದಿಹಾಳ, ಪವಿತ್ರಾ ಕಲ್ಲಕುಟಗರ, ಶಿವನಗೌಡ ಗೌಡರ, ಶಿವು ಕುರಿ, ನಾಗರಾಜ ಮುರಡಿ, ಯಲ್ಲಪ್ಪ ಗಣಾಚಾರಿ, ಮಾರುತಿ ನಾಗರಹಳ್ಳಿ, ಶ್ರೀನಿವಾಸ ಅಬ್ಬಿಗೇರಿ, ರಮೇಶ ಹುಳಕಣ್ಣವರ, ಪವನ ಚೋಪ್ರಾ, ದ್ರುವಕುಮಾರ ಹೂಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.