ADVERTISEMENT

ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಶುರುವಾಗಿದೆ: ಬೊಮ್ಮಾಯಿ ಆರೋಪ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 16:29 IST
Last Updated 14 ಏಪ್ರಿಲ್ 2024, 16:29 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಗದಗ: ‘ದೇಶದಲ್ಲಿ ರಾಜಕಾರಣದ ಭಯೋತ್ಪಾದನೆ ಶುರುವಾಗಿದೆ. ಕಾಂಗ್ರೆಸ್‌ ಅಗ್ರ ನಾಯಕ ರಾಹುಲ್‌ ಗಾಂಧಿ ಮತ್ತು ಪಕ್ಷದ ಹಿರಿಯ ನಾಯಕರು ಹೋದಲ್ಲೆಲ್ಲಾ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ಜನಾಂಗದವರಲ್ಲಿ ಭಯ ಮೂಡಿಸುತ್ತಿದ್ದಾರೆ’ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ನಗರದಲ್ಲಿ ಭಾನುವಾರ ನಡೆದ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ ನಾಯಕರ ಮಾತುಗಳನ್ನು ಆಲಿಸಿದಾಗ ರಾಜಕಾರಣದ ಭಯೋತ್ಪಾದನೆ ಪ್ರಾರಂಭವಾಗಿದೆ ಅನಿಸುತ್ತದೆ’ ಎಂದರು.

‘ಬಿಜೆಪಿಗೆ ಬಹುಮತ ಸಿಕ್ಕರೆ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ರಾಜಕೀಯವಾಗಿ ಜನರಲ್ಲಿ ಭಯ ಹುಟ್ಟಿಸುವ ಕೆಲಸ ನಡೆಯುತ್ತಿದೆ. ಸಂವಿಧಾನ ಬದಲಾವಣೆ ಹೇಗೆ ಸಾಧ್ಯ? ಮೂಲ ಸ್ವರೂಪ ಬದಲಾವಣೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ನ ತೀರ್ಪೇ ಇದೆ. ಹೀಗಿರುವಾಗ ಯಾವುದೇ ಪಕ್ಷಕ್ಕೆ ಎಷ್ಟೇ ಬಹುಮತ ಬಂದರೂ ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಕಟ್ಟಿರುವ ಇಂಡಿಯಾ ಒಕ್ಕೂಟ ಅತ್ಯಂತ ಸ್ವಾರ್ಥದಿಂದ ಕೂಡಿದೆ. ಕಾಂಗ್ರೆಸ್‌ ನಾಯಕರಿಗೆ ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳುವ ಧೈರ್ಯ ಇಲ್ಲ. ಮಮತಾ ಬ್ಯಾನರ್ಜಿ ಅವರು ಖರ್ಗೆ ಅಭ್ಯರ್ಥಿ ಆಗಲಿ ಎಂದರು. ಆದರೆ, ಅದಕ್ಕೆ ಮೊದಲ ವಿರೋಧ ವ್ಯಕ್ತವಾಗಿದ್ದೇ ಕರ್ನಾಟಕದಲ್ಲಿ. ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಆಗಬೇಕು ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆದರೆ, ರಾಹುಲ್‌ ಗಾಂಧಿ ತಯಾರಿಲ್ಲ. ಮದುಮಗ ತಯಾರಿಲ್ಲದೇ ಮದುವೆ ಮಾಡುವುದಾದರೂ ಹೇಗೆ?’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.