ಲಕ್ಷ್ಮೇಶ್ವರ: ತಾಲ್ಲೂಕಿನ ಉಂಡೇನಹಳ್ಳಿ ಗ್ರಾಮದ ರೈತ ಬಸವರಾಜ ಈರಪ್ಪ ಅಂಗಡಿ 2021ರಲ್ಲಿ 400 ಅಡಿ ಆಳದವರೆಗೆ ಕೊಳವೆಬಾವಿ ಕೊರೆಸಿದ್ದರೂ ನೀರು ಸಿಕ್ಕಿರಲಿಲ್ಲ. ಆದರೆ, ಇದೀಗ ಅದೇ ಕೊಳವೆಬಾವಿಯಲ್ಲಿ ನೀರು ಉಕ್ಕುತ್ತಿರುವುದು ಅಕ್ಕಪಕ್ಕದ ರೈತರಲ್ಲಿ ಅಚ್ಚರಿ ಮೂಡಿಸಿದೆ.
ಕೊಳವೆಬಾವಿ ಕೊರೆಸಿದ ಸಂದರ್ಭದಲ್ಲಿ ನೀರು ಸಿಗದ ಕಾರಣಕ್ಕೆ ರೈತ ಬಸವರಾಜ ಅವರಿಗೆ ನಿರಾಶೆ ಆಗಿತ್ತು. ಆದರೆ, ಅವರು ಹೇಗಾದರೂ ಮಾಡಿ ಆ ಕೊಳವೆಬಾವಿಯಲ್ಲಿ ನೀರು ಬರುವಂತೆ ಮಾಡಲೇಬೇಕು ಎಂದು ಪಣ ತೊಟ್ಟಿದ್ದರು.
ಮೊದಲಿನಿಂದಲೂ ಸಾವಯವ ಕೃಷಿ ಮಾಡುತ್ತಿರುವ ಈ ರೈತ ಕೊಳವೆಬಾವಿಯಿಂದ ಸ್ವಲ್ಪ ದೂರದಲ್ಲಿ ಎರಡು ಕೃಷಿಹೊಂಡಗಳನ್ನು ನಿರ್ಮಿಸಿದರು. ಎರಡ್ಮೂರು ವರ್ಷಗಳಿಂದ ಸುರಿದ ನಿರಂತರ ಮಳೆಗೆ ಎರಡೂ ಕೃಷಿಹೊಂಡಗಳು ತುಂಬುವುದರೊಂದಿಗೆ ಭೂಮಿಯಲ್ಲಿ ಅಂತರ್ಜಲ ಕೂಡ ಹೆಚ್ಚಾಯಿತು. ಇದರ ಪರಿಣಾಮವೇ ಇಂದು ಅವರು ಕೊರೆಸಿದ ಕೊಳವೆಬಾವಿಯಲ್ಲಿ ನೀರು ತನ್ನಷ್ಟಕ್ಕೆ ತಾನೇ ಚಿಮ್ಮುತ್ತಿದೆ.
ರೈತ ಬಸವರಾಜ ಕೊರೆಸಿದ ಕೊಳವೆಬಾವಿಯಲ್ಲಿ ಈಗ ನೀರು ಉಕ್ಕುತ್ತಿರುವುದು ಇತರೇ ರೈತರಲ್ಲಿ ಅರಿವು ಮೂಡಿಸಿದೆ. ತಾವೂ ಕೊರೆಸಿದ ಕೊಳವೆಬಾವಿಯಲ್ಲಿ ನೀರು ಬರುವಂತೆ ಮಾಡಲು ಕೃಷಿಹೊಂಡಗಳ ಮೊರೆ ಹೋಗುತ್ತಿದ್ದಾರೆ.
ತಾಲ್ಲೂಕಿನ ದೊಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಂಡೇನಹಳ್ಳಿ ಭೂಮಿ ನೀರಾವರಿಗೆ ಅತ್ಯಂತ ಸೂಕ್ತವಾಗಿದೆ. ಈ ಕಾರಣಕ್ಕಾಗಿ ಇಲ್ಲಿನ ಬಹುತೇಕ ರೈತರು ತಮ್ಮ ಹೊಲಗಳಲ್ಲಿ ಕೊಳವೆಬಾವಿ ಕೊರೆಸಿದ್ದಾರೆ. ಇಡೀ ತಾಲ್ಲೂಕಿನಲ್ಲಿಯೇ ಉಂಡೇನಹಳ್ಳಿಯಲ್ಲಿ 400ರ ಸಮೀಪ ಕೊಳವೆಬಾವಿಗಳು ಇವೆ. ಆದರೆ, ನಿರಂತರ ನೀರನ್ನು ಬಳಸುವುದರಿಂದ ಅಂತರ್ಜಲಮಟ್ಟ ಕುಸಿದು ಬಹಳಷ್ಟು ಕೊಳವೆಬಾವಿಗಳು ಬತ್ತಿವೆ. ಮಳೆಗಾಲದಲ್ಲಿ ಮಳೆನೀರನ್ನು ಭೂಮಿಯಲ್ಲಿ ಇಂಗುವಂತೆ ಮಾಡಿದರೆ ಮತ್ತೆ ಅಂತರ್ಜಲ ಮರುಪೂರಣ ಆಗುತ್ತದೆ ಎಂಬುದಕ್ಕೆ ರೈತ ಬಸವರಾಜ ಅಂಗಡಿ ಅವರ ಕೊಳವೆಬಾವಿ ಸಾಕ್ಷಿಯಾಗಿದೆ.
‘ಕೃಷಿಹೊಂಡ ಮಾಡಿಕೊಂಡಿದ್ದರಿಂದ ನಮ್ಮ ಕೊಳವೆಬಾವಿಯಲ್ಲಿ ನೀರು ಬರಲು ಅನುಕೂಲವಾಗಿದೆ’ ಎಂದು ರೈತ ಬಸವರಾಜ ಅಂಗಡಿ ಖುಷಿ ವ್ಯಕ್ತಪಡಿಸಿದ್ದಾರೆ.
ನಮ್ಮ ಊರಲ್ಲಿ ಸಾಕಷ್ಟು ಕೊಳವೆಬಾವಿಗಳು ಇವೆ. ಅವುಗಳಲ್ಲಿ ಅನೇಕ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಎಲ್ಲರೂ ಕೃಷಿಹೊಂಡ ನಿರ್ಮಿಸಿಕೊಂಡರೆ ಮತ್ತೆ ಕೊಳವೆಬಾವಿಗಳಲ್ಲಿ ನೀರು ಬರುವುದರ ಜೊತೆಗೆ ಅಂತರ್ಜಲ ಕೂಡ ಹೆಚ್ಚಾಗುತ್ತದೆಚಂದ್ರಶೇಖರ ಈಳಿಗೇರ ಗ್ರಾಮ ಪಂಚಾಯಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.