ADVERTISEMENT

ದಣಿವರಿಯದ ವೃದ್ಧ ಸಹೋದರರು

ಮಾದರಿಯಾದ ಯಲ್ಲಾಪುರ ತಾಂಡಾದ ನಿವಾಸಿಗಳು

ನಾಗರಾಜ ಎಸ್‌.ಹಣಗಿ
Published 9 ಮೇ 2021, 4:27 IST
Last Updated 9 ಮೇ 2021, 4:27 IST
ಬದು ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿರುವ ಹೊಲದಲ್ಲಿ ಗುಂಡಿ ತೆಗೆಯುತ್ತಿರುವ ಶಂಕ್ರಪ್ಪ, ಪಾಂಡಪ್ಪ ಲಮಾಣಿ ಸಹೋದರರು
ಬದು ನಿರ್ಮಾಣಕ್ಕಾಗಿ ಭೂಮಿ ಅಗೆಯುತ್ತಿರುವ ಹೊಲದಲ್ಲಿ ಗುಂಡಿ ತೆಗೆಯುತ್ತಿರುವ ಶಂಕ್ರಪ್ಪ, ಪಾಂಡಪ್ಪ ಲಮಾಣಿ ಸಹೋದರರು   

ಲಕ್ಷ್ಮೇಶ್ವರ: ಪ್ರತಿ ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರು ಕೆಲಸ ಅರಸಿ ಊರು ಬಿಟ್ಟು ಬೇರೆ ಬೇರೆ ಊರುಗಳಿಗೆ ಗುಳೆ ಹೋಗುವುದು ಸಾಮಾನ್ಯ. ಆ ಸಮಯದಲ್ಲಿ ವಯೋವೃದ್ಧರು ಮಾತ್ರ ಊರಲ್ಲಿಯೇ ಇರುತ್ತಿದ್ದರು. ಆದರೆ ಗುಳೆ ತಪ್ಪಿಸುವ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ಅವರ ಊರಲ್ಲಿಯೇ ಕೆಲಸ ಕೊಡಬೇಕು ಎಂಬ ಉದ್ದೇಶದಿಂದ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲಾಗಿದ್ದು, ಇದು ಗ್ರಾಮೀಣ ಭಾಗದ ಜನತೆಗೆ ನಿಜಕ್ಕೂ ವರದಾನವಾಗಿದೆ.

ಯೋಜನೆ ಅನುಷ್ಠಾನಕ್ಕೆ ಬಂದಾಗಿನಿಂದ ಎಲ್ಲ ಗ್ರಾಮಗಳಲ್ಲಿ ಜನರಿಗೆ ಕೈ ತುಂಬ ಕೆಲಸ ಸಿಕ್ಕಿದೆ. ದಿನವೊಂದಕ್ಕೆ ₹ 289 ಕೂಲಿ ನೇರವಾಗಿ ದುಡಿಮೆಗಾರರ ಖಾತೆಗೆ ಜಮೆ ಆಗುತ್ತಿದೆ. ಊರಲ್ಲಿಯೇ ಕೆಲಸ ಸಿಕ್ಕಿದ್ದು ಮಹಿಳೆಯರು ಮತ್ತು ವಯೋವೃದ್ಧರಿಗೆ ಅನುಕೂಲ ಆಗಿದೆ.

ಸಮೀಪದ ದೊಡ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲ್ಲಾಪುರ ತಾಂಡಾದ ನಿವಾಸಿಗಳಾದ 80ರ ಹರೆಯದ ಶಂಕ್ರಪ್ಪ ಶಿವಪ್ಪ ಲಮಾಣಿ ಹಾಗೂ 75 ವಯಸ್ಸಿನ ಪಾಂಡಪ್ಪ ಶಿವಪ್ಪ ಲಮಾಣಿ ವೃದ್ಧ ಸಹೋದರರು ನರೇಗಾ ಯೋಜನೆಯಡಿ ದುಡಿಯುತ್ತಿದ್ದಾರೆ.

ADVERTISEMENT

ನಿಗದಿಪಡಿಸಿದಷ್ಟು ಕೆಲಸವನ್ನು ಮಾಡುವ ಸಹೋದರರು ಇತರ ಕಾರ್ಮಿಕರಿಗೆ ಸ್ಫೂರ್ತಿಯಾಗಿದ್ದಾರೆ. ಅಧಿಕಾರಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಗ್ರಾಮದಲ್ಲಿ ನಡೆಯುತ್ತಿರುವ ಬದು ನಿರ್ಮಾಣ ಕಾಮಗಾರಿಯಲ್ಲಿ ಅವರು ಸದ್ಯಕ್ಕೆ ಕೆಲಸ ಮಾಡುತ್ತಿದ್ದಾರೆ.

‘ಬ್ಯಾಸಿಗಿ ಬಂತಂದ್ರ ನಮ್ಮೂರನ್ಯಾಗ ಕೆಲಸ ಬಂದ್ ಅಕ್ಕಿದ್ದವು. ಆವಾಗ ಎಲ್ಲಾದರೂ ದುಡ್ಯಾಕ ಬ್ಯಾರೆ ಕಡೆ ಹೊಕ್ಕಿದ್ವಿ. ಆದರೀಗ ದಿನಾಲೂ ಕೆಲಸ ಕೊಡ್ತಾರ್ರೀ. ಹಿಂಗಾಗಿ ನಾವು ಬ್ಯಾರೆ ಊರಿಗೆ ಹೋಗದನ್ನು ಬಿಟ್ಟೇವೀ’ ಎಂದು ಸಹೋದರರು ಸಂತೋಷ ವ್ಯಕ್ತಪಡಿಸಿದರು.

‘ಶಂಕ್ರಪ್ಪ, ಪಾಂಡಪ್ಪ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಬೇಸರ ಎನ್ನುವುದೇ ಇಲ್ರೀ’ ಎಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಶಿವಕುಮಾರ ವಾಲಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.