ADVERTISEMENT

ಕೆಲವರ ಅವಿವೇಕ; ನೂರಾರು ಜನಕ್ಕೆ ಸಂಕಟ

ಗದಗ ಬಸ್‌ ನಿಲ್ದಾಣದಲ್ಲಿ ಶುಚಿತ್ವದ ಕೊರತೆ; ಪ್ರಯಾಣಿಕರಿಗೆ ಕಿರಿಕಿರಿ

ಸತೀಶ ಬೆಳ್ಳಕ್ಕಿ
Published 5 ಡಿಸೆಂಬರ್ 2020, 3:01 IST
Last Updated 5 ಡಿಸೆಂಬರ್ 2020, 3:01 IST
ಗದಗ ಬಸ್‌ ನಿಲ್ದಾಣ
ಗದಗ ಬಸ್‌ ನಿಲ್ದಾಣ   

ಗದಗ: ನಗರದ ಬಸ್‌ ನಿಲ್ದಾಣದಲ್ಲಿನ ಅಶುಚಿತ್ವ ಪ್ರಯಾಣಿಕರಿಗೆ ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತಿದೆ. ಗುಟ್ಕಾ ಜಗಿದು ನಿಲ್ದಾಣದೊಳಗೆ ಉಗಿಯುವವರಿಗೆ ದಂಡ ಹಾಕಬೇಕು, ಪಾರಿವಾಳದ ಗೂಡುಗಳನ್ನು ತೆರವುಗೊಳಿಸಿ ನಿಲ್ದಾಣ ಗಲೀಜಾಗುವುದನ್ನು ತಪ್ಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಅತ್ಯಂತ ಸುಸಜ್ಜಿತವಾಗಿ ನಿರ್ಮಾಣವಾಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣ ಜನರ ಅವಿವೇಕತನದಿಂದ ಗಲೀಜಾಗಿದೆ. ಗುಟ್ಕಾ, ತಂಬಾಕು ಜಗಿದು ಬಸ್‌ ನಿಲ್ದಾಣದ ಗೋಡೆಗಳ ಮೇಲೆ ಉಗುಳಿರುವುದು ಕಣ್ಣಿಗೆ ರಾಚುತ್ತದೆ. ಹಾಗೆಯೇ, ನಿಲ್ದಾಣದ ಚಾವಣಿಯಲ್ಲಿ ಗೂಡು ಕಟ್ಟಿರುವ ಪಾರಿವಾಳದ ಹಿಕ್ಕೆಗಳು ಕೂಡ ನಿಲ್ದಾಣವನ್ನು ಗಬ್ಬೆಬ್ಬಿಸಿವೆ. ನಿಲ್ದಾಣಕ್ಕೆ ಬರುವ ಹೊಸಬರಿಗೆ ಈ ನೋಟ ಬೇಸರ ತರಿಸುತ್ತದೆ.

ನಿಲ್ದಾಣದ ಹೊರಭಾಗದಲ್ಲಿ ಪೊಲೀಸ್‌ ಇಲಾಖೆ ನೋ–ಪಾರ್ಕಿಂಗ್‌ ಬ್ಯಾನರ್‌ ತೂಗು ಬಿಟ್ಟಿದ್ದರೂ ಬೈಕ್‌ಗಳು ಅಡ್ಡಾದಿಡ್ಡಿಯಾಗಿ ನಿಂತಿರುತ್ತವೆ. ಎಲ್ಲೆಂದರಲ್ಲಿ ಎಸೆದ ನೀರಿನ ಬಾಟಲಿಗಳು, ತಂಪು ಪಾನೀಯದ ಟೆಟ್ರಾ ಪ್ಯಾಕ್‌ಗಳು, ಕುರುಕುಲು ತಿನಿಸಿನ ಪೊಟ್ಟಣಗಳು ಹಾಗೂ ‘ಗುಟ್ಕಾದ ಕೆಂಪನೆಯ ಉಗುಳು’ ನಿಲ್ದಾಣದ ಅಂದಗೆಡಿಸಿವೆ.

ADVERTISEMENT

‘ನಾವು ಮಲೆನಾಡಿನವರು. ನೆಂಟರ ಮನೆಗೆಂದು ಇದೇ ಮೊದಲಬಾರಿಗೆ ಗದಗಕ್ಕೆ ಬಂದಿದ್ದೇವೆ. ನಗರದ ಬಸ್‌ ನಿಲ್ದಾಣದಲ್ಲಿ ಇಳಿದ ತಕ್ಷಣ ಒಬ್ಬ ವ್ಯಕ್ತಿ ಗುಟ್ಕಾ ಜಗಿದು ಬಾಯ್ತುಂಬಿಕೊಂಡಿದ್ದ ಉಗುಳನ್ನು ಅಲ್ಲೇ ಉಗಿದ. ಆ ದೃಶ್ಯ ನೋಡಿ ವಾಂತಿ ಬರುವಂತಾಯಿತು. ಥೂ ಅಸಹ್ಯ’ ಎಂದು ಮುಖಕಿವುಚಿದರು ಹಿರಿಯರಾದ ಶಿವಮೊಗ್ಗದ ರಂಗಸ್ವಾಮಿ ದಂಪತಿ.

ನಿಲ್ದಾಣದ ಒಳಭಾಗದಲ್ಲಿರುವ ಶೌಚಾಲಯದ ಸ್ಥಿತಿ ಆಯೋಮಯವಾಗಿದೆ. ‘ಅವಸರ’ದಲ್ಲಿರುವ ಪ್ರಯಾಣಿಕರು ಅನಿವಾರ್ಯವಾಗಿ ಅದೇ ಶೌಚಾಲಯ ಬಳಸುತ್ತಾರೆ. ಶೌಚಕ್ಕೆ ಹಣ ತೆಗೆದುಕೊಂಡರೂ ಶುಚಿತ್ವ ಕೇಳುವಂತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಅಧ್ವಾನದಿಂದ ಕೂಡಿದೆ. ನೀರಿನ ಕಟ್ಟೆಗಳ ಮೇಲೂ ಉಗುಳಿನ ಕೆಂಪು ರಾಚುತ್ತದೆ. ನೀರಿನ ಕಟ್ಟೆಗಳು ಮುರಿದು ಬಿದ್ದಿವೆ. ಬಾಯಾರಿಕೆ ಆದರೆ ಪ್ರಯಾಣಿಕರು ಹಣ ಪಾವತಿಸಿ ನೀರು ಕೊಂಡು ಕುಡಿಯುವ ಅನಿವಾರ್ಯತೆ ಇದೆ. ಪ್ರಯಾಣಿಕರು ಕುಳಿತುಕೊಳ್ಳಲು ಅಳವಡಿಸಿರುವ ಕುರ್ಚಿಗಳು ಮುರಿದಿವೆ. ಅವುಗಳ ರಿಪೇರಿ ಕೂಡ ಆಗಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಈ ನಿಲ್ದಾಣದೊಳಗೆ ಅಚ್ಚುಕಟ್ಟಾಗಿ ಇರುವುದು ಪುಟ್ಟ ಗ್ರಂಥಾಲಯ ಒಂದೇ!

ಉಗುಳುವ ಮುನ್ನ ಯೋಚಿಸಿ: ಡಿಸಿ

‘ಬಸ್‌ ನಿಲ್ದಾಣವನ್ನು ಸ್ವಚ್ಛವಾಗಿಡುವ ಕೆಲಸವನ್ನು ಗುತ್ತಿಗೆ ನೀಡಲಾಗಿದ್ದು, ಶುಚಿತ್ವ ಕಾಪಾಡಲು ಗುತ್ತಿಗೆದಾರರು ಪ್ರತಿ ಎರಡು ಗಂಟೆಗೊಮ್ಮೆ ನಿಲ್ದಾಣ ಸ್ವಚ್ಛಗೊಳಿಸುತ್ತಾರೆ’ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಫ್‌.ಸಿ.ಹಿರೇಮಠ ತಿಳಿಸಿದರು.

‘ದಿನದಲ್ಲಿ ಎರಡು ಬಾರಿ ಗದಗ ಬಸ್‌ ನಿಲ್ದಾಣಕ್ಕೆ ಭೇಟಿ ನೀಡುತ್ತೇನೆ. ಗುತ್ತಿಗೆದಾರರು ಕೂಡ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ನಿಲ್ದಾಣವನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಪ್ರಯಾಣಿಕರಲ್ಲಿ ಅರಿವಿನ ಕೊರತೆ ಕಾಡುತ್ತಿದೆ. ಗುಟ್ಕಾ ಜಗಿದು ಎಲ್ಲೆಂದರಲ್ಲಿ ಉಗಿಯುತ್ತಾರೆ. ಹೀಗೆ ಉಗಿಯುವ ಮುನ್ನ ಯೋಚಿಸಬೇಕು. ಸಾವಿರಾರು ಜನರು ಬಂದು ಹೋಗುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಮನೋಭಾವ ನಮ್ಮೊಳಗೆ ಮೂಡಬೇಕು. ಆಗ ಮಾತ್ರ ಎಲ್ಲವೂ ಸರಿಹೋಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.