
ಲಕ್ಷ್ಮೇಶ್ವರ: ಪ್ರತಿದಿನ ಸಾವಿರಾರು ಜನ ಪ್ರಯಾಣಿಕರು ಸಂಚರಿಸುವ ಪಟ್ಟಣದ ಬಸ್ ನಿಲ್ದಾಣ ಹತ್ತು ಹಲವು ಸಮಸ್ಯೆಗಳಿಂದ ನರಳುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮೂಲಸೌಲಭ್ಯಗಳ ಕೊರತೆ ಪ್ರಯಾಣಿಕರನ್ನು ಕಾಡುತ್ತಿವೆ.
ಹಾವೇರಿ, ಗದಗ, ಹುಬ್ಬಳ್ಳಿ ಕಡೆಗೆ ಸಂಚರಿಸುವ ಪ್ರಯಾಣಿಕರಿಗೆ ಲಕ್ಷ್ಮೇಶ್ವರದ ಬಸ್ ನಿಲ್ದಾಣ ಕೇಂದ್ರ ಸ್ಥಾನವಾಗಿದ್ದು, ನಿಲ್ದಾಣ ಪ್ರಯಾಣಿಕರಿಂದ ತುಂಬಿರುತ್ತದೆ. ಇಲ್ಲಿ 69 ಬಸ್‍ಗಳಿದ್ದು, 67 ಶೆಡ್ಯೂಲ್‍ಗಳಲ್ಲಿ ಸಂಚರಿಸುತ್ತಿವೆ.
ನಿಲ್ದಾಣದಲ್ಲಿರುವ ಶೌಚಾಲಯ ಬಹಳ ಹಳೆಯದಾಗಿದ್ದು, ಸಾಕಷ್ಟು ಶಿಥಿಲಗೊಂಡಿದೆ. ಅಲ್ಲದೆ ಶೌಚಾಲಯ ತುಂಬಿ ಕೊಂಡಿದ್ದು, ಗಲೀಜು ಪಕ್ಕದ ಬಸವೇಶ್ವರ ನಗರದ ಕಡೆ ಹರಿಯುತ್ತಿದೆ. ಇದರಿಂದಾಗಿ ಬಸವೇಶ್ವರ ನಗರದ ನಿವಾಸಿಗಳು ಹಲವು ವರ್ಷಗಳಿಂದ ನಿಲ್ದಾಣದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಾರೆ. ಆದರೂ ಅಧಿಕಾರಿಗಳು ಹೊಸ ಶೌಚಾಲಯ ನಿರ್ಮಿಸಲು ಮುಂದಾಗದಿರುವುದು ಅವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಡಾದ ನಿಲ್ದಾಣ, ಸ್ವಚ್ಛತೆ ಮರೀಚಿಕೆ: ಸದ್ಯ ಈಗಿರುವ ನಿಲ್ದಾಣದ ದಕ್ಷಿಣ ದಿಕ್ಕಿಗೆ ನಿಲ್ದಾಣದಷ್ಟೇ ಖಾಲಿ ಜಾಗೆ ಇದೆ. ಆದರೆ, ಅಲ್ಲಿ ಗಿಡಗಳು, ಮುಳ್ಳಿನ ಕಂಟಿಗಳು ಬೆಳೆದಿದ್ದು, ಇಡೀ ಪ್ರದೇಶ ಕಾಡಿನಂತೆ ಗೋಚರಿಸುತ್ತಿದೆ. ಮಹಿಳೆಯರು ಮತ್ತು ಪುರುಷರು ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಕೆಲವರು ಶೌಚಕ್ಕೂ ಹೋಗುತ್ತಾರೆ. ಶೌಚಾಲಯದ ಸಿಬ್ಬಂದಿ ಹೆಚ್ಚಿನ ಹಣ ಪಡೆಯುವುದೇ ಇದಕ್ಕೆ ಕಾರಣವಾಗಿದೆ. ಅಲ್ಲದೆ ಪಶ್ಚಿಮ ದಿಕ್ಕಿನ ಕಾಂಪೌಂಡ್‌ವರೆಗೆ ಗಲೀಜು ನೀರು ಹರಿಯುತ್ತಿದ್ದು, ಇದು ಎಲ್ಲಿಂದ ಬರುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಈ ಎಲ್ಲ ಕಾರಣಗಳಿಂದಾಗಿ ನಿಲ್ದಾಣ ಗಬ್ಬೆದ್ದು ನಾರುತ್ತಿದೆ.
ಸಿಸಿಟಿವಿ ಕ್ಯಾಮೆರಾ ಸಮಸ್ಯೆ: ನಿಲ್ದಾಣದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ಸ್ಥಗಿತಗೊಂಡಿವೆ. ಇದರಿಂದಾಗಿ ನಿಲ್ದಾಣದಲ್ಲಿ ಕಳ್ಳತನ ನಡೆದರೂ ಪತ್ತೆ ಆಗದ ಪರಿಸ್ಥಿತಿ ಇದೆ. ಎರಡು ವಾರಗಳ ಹಿಂದಷ್ಟೆ ಕಳ್ಳರು ಮೂವರು ಮಹಿಳೆಯರ ಮಾಂಗಲ್ಯ ಸರಗಳನ್ನು ಹಾಡುಹಗಲೇ ಕಳವು ಮಾಡಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿದ್ದರೆ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿತ್ತು ಎಂದು ಪೊಲೀಸರು ಹೇಳಿದರು.
ಅಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ: ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಸಮರ್ಪಕವಾಗಿದೆ. ಶುದ್ಧ ನೀರಿನ ಘಟಕದ ಇದ್ದರೂ ಮೂರು ವರ್ಷಗಳಿಂದ ಬಂದ್ ಇತ್ತು. ಆದರೆ ಸದ್ಯ ಅದು ಕಾರ್ಯನಿರ್ವಹಿಸುತ್ತಿದೆ. ಆದರೆ, ಅದರ ಬಗ್ಗೆ ಪ್ರಯಾಣಿಕರಿಗೆ ಮಾಹಿತಿ ಇಲ್ಲ. ಇನ್ನು ನಿಲ್ದಾಣದಲ್ಲಿರುವ ಕುಡಿಯುವ ನೀರಿನ ತೊಟ್ಟಿ ಗಬ್ಬೆದ್ದು ಹೋಗಿದೆ. ಜನರು ಉಗುಳುವುದರಿಂದ ಅದು ಹೊಲಸಾಗಿದೆ. ಅದನ್ನು ಸ್ವಚ್ಛ ಮಾಡಿಲ್ಲ.
ಘಟಕದ ಬಸ್‍ಗಳು ಹೆಚ್ಚಾಗಿ ಹುಬ್ಬಳ್ಳಿ ಕಡೆ ಮಾತ್ರ ಸಂಚರಿಸುತ್ತಿದ್ದು, ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಬಸ್ ಕೊರತೆ ಇದೆ. ಅದರಲ್ಲೂ ಗದಗ, ಹಾವೇರಿ ಕಡೆ ಹೋಗುವ ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಬಸ್ ಇಲ್ಲದ ಕಾರಣ ಪ್ರತಿದಿನ ಪರದಾಡಬೇಕಾದ ಪರಿಸ್ಥಿತಿ ಇದ್ದು ವಾರದಲ್ಲಿ ಒಮ್ಮೆಯಾದರೂ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಯುವುದು ಸಾಮಾನ್ಯವಾಗಿದೆ.
ಪ್ರತಿದಿನ ಸಾವಿರಾರು ಜನರು ಬರುವ ನಿಲ್ದಾಣದಲ್ಲಿ ಕುಳಿತುಕೊಳ್ಳಲು ಸಾಕಷ್ಟು ಆಸನಗಳ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಜನರು ಗಂಟೆಗಟ್ಟಲೆ ನಿಂತಿರಬೆಕಾದ ಪರಿಸ್ಥಿತಿ ಇದೆ. ವೃದ್ಧರು, ಮಹಿಳೆಯರು, ಮಕ್ಕಳು ಸಿಕ್ಕ ಸಿಕ್ಕಲ್ಲಿ ಕುಳಿತುಕೊಳ್ಳುತ್ತಾರೆ.
ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದ ಕಾರಣ ಎಲ್ಲೆಂದರಲ್ಲಿ ಬೈಕ್ ಮತ್ತು ವಾಹನಗಳು ನಿಂತಿರುತ್ತವೆ. ಕೆಲವೊಮ್ಮೆ ಪ್ರಯಾಣಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಬೈಕ್‍ಗಳು ನಿಂತಿದ್ದರೂ ಸಹ ಅಧಿಕಾರಿಗಳು ಕಣ್ಮುಚ್ಚಿಕೊಂಡು ಕುಳಿತಿರುತ್ತಾರೆ. ಆದರೆ ಪ್ರಯಾಣಿಕರಿಗೆ ಇದರಿಂದ ತೊಂದರೆ ಆಗುತ್ತಿದೆ.
ನಮ್ಮೂರಿನ ಬಸ್ ನಿಲ್ದಾಣದಲ್ಲಿ ಸರಿಯಾದ ಸಿಸಿಟಿವಿ ಕ್ಯಾಮೆರಾ ಇಲ್ಲ. ಇದರಿಂದಾಗಿ ನಿಲ್ದಾಣದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಅಧಿಕಾರಿಗಳು ಕ್ರಮವಹಿಸಬೇಕು
–ಬಿ.ಎಸ್.ಬಾಳೇಶ್ವರಮಠ ವಕೀಲ ಲಕ್ಷ್ಮೇಶ್ವರ
ನಿಲ್ದಾಣದಲ್ಲಿ ಹೊಸ ಶೌಚಾಲಯ ನಿರ್ಮಿಸುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶುದ್ಧ ಕುಡಿಯುವ ನೀರು ಘಟಕ ಆರಂಭವಾಗಿದ್ದು ₹1ಕ್ಕೆ ಒಂದು ಲೀಟರ್ ನೀರು ಪಡೆದುಕೊಳ್ಳಬಹುದು
–ಸವಿತಾ ಆದಿ ಘಟಕ ವ್ಯವಸ್ಥಾಪಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.