
ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‍ಗೆ ಶುಕ್ರವಾರ ಶಾಸಕ ಡಾ.ಚಂದ್ರು ಲಮಾಣಿ ಅವರು ಪೌರ ಕಾರ್ಮಿಕರೊಂದಿಗೆ ದಿಡೀರ್ ಭೇಟಿ ನೀಡಿ ಕಾರ್ಮಿಕರೊಂದಿಗೆ ಉಪಾಹಾರ ಸೇವಿಸಿದರು. ಅಲ್ಲಿನ ಅವ್ಯವಸ್ಥೆ ಕಂಡು ಪುರಸಭೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
‘ಕಡಿಮೆ ಹಣದಲ್ಲಿ ಬಡವರಿಗೆ, ಕಾರ್ಮಿಕರಿಗೆ ಗುಣಮಟ್ಟದ ಉಪಾಹಾರ ಕೊಡಬೇಕು ಎಂಬ ಉದ್ಧೇಶದಿಂದ ಸರ್ಕಾರ ಇಂದಿರಾ ಕ್ಯಾಂಟೀನ್ ಶುರು ಮಾಡಿದೆ. ಆದರೆ ಲಕ್ಷ್ಮೇಶ್ವರದ ಕ್ಯಾಂಟೀನ್‍ನಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಈ ಕುರಿತು ಬಹಳ ದಿನಗಳಿಂದ ದೂರುಗಳು ಬಂದಿದ್ದವು. ಸರ್ಕಾರ ಪೌರ ಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್‍ನಿಂದಲೇ ಬೆಳಗಿನ ಉಪಾಹಾರ ಪೂರೈಸಬೇಕು ಎಂದು ನಿರ್ದೇಶನ ನೀಡಿದೆ. ಆದರೆ ಇಲ್ಲಿನ ಉಪಾಹಾರ ಯಾವುದಕ್ಕೂ ಬೇಡ. 300 ಜನರಿಗೆ ಉಪಾಹಾರ ಕೊಡಬೇಕಾದವರು ಕೇವಲ 50 ಜನಕ್ಕೆ ಪೂರೈಸಿ ಪುರಸಭೆಯಿಂದ ಪೂರ್ಣ ಬಿಲ್ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಪುರಸಭೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಒಂದು ಉಪಾಹಾರಕ್ಕೆ ಜನರಿಂದ ಐದು ರೂಪಾಯಿ ತೆಗೆದುಕೊಳ್ಳುತ್ತಾರೆ. ಆದರೆ ಸರ್ಕಾರ 30-35 ರೂಪಾಯಿ ಕ್ಯಾಂಟೀನ್ ನಡೆಸುವವರಿಗೆ ಪಾವತಿಸುತ್ತದೆ. ಇಷ್ಟು ಹಣ ಕೊಟ್ಟರೆ ಖಾಸಗಿ ಹೋಟೇಲ್‍ನಲ್ಲಿ ಎರಡು ಬಾರಿ ಉತ್ತಮ ಉಪಾಹಾರ ಸೇವಿಸಬಹುದು. ಕ್ಯಾಂಟೀನ್ ನಡೆಸುವವರು ಈಗಲಾದರೂ ಸರ್ಕಾರ ನಿಗದಿಪಡಿಸಿದಷ್ಟು ಗುಣಮಟ್ಟದ ಉಪಾಹಾರವನ್ನು ವಿತರಿಸಲು ಮುಂದಾಗಲಿ’ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಗಂಗಾಧರ ಮೆಣಸಿನಕಾಯಿ, ಬಸವರಾಜ ಕಲ್ಲೂರ, ಪೌರ ಕಾರ್ಮಿಕರು, ಜಗದೀಶಗೌಡ ಪಾಟೀಲ, ವಿಶಾಲ ಬಟಗುರ್ಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.