ಗದಗ: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿ, ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿಗಣತಿ ವರದಿ ಅವೈಜ್ಞಾನಿಕವಾಗಿದೆ ಎಂದು ನೇಕಾರ ಸಮುದಾಯ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಸೋಮಶೇಖರ ಹೇಳಿದರು.
‘ರಾಜ್ಯದಲ್ಲಿರುವ ನೇಕಾರ ಸಮುದಾಯಗಳ ಜನಸಂಖ್ಯೆಯನ್ನು ದಾಖಲಿಸುವಲ್ಲಿ ಆಯೋಗವು ಕೈಗೊಂಡಿರುವ ಕ್ರಮವು ಸರಿಯಾಗಿಲ್ಲ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
‘ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿನ ಅಂಕಿ-ಅಂಶಗಳು ಸಮುದಾಯಕ್ಕೆ ದೊಡ್ಡ ಆಘಾತ ನೀಡಿದೆ. ಜಾತಿಗಣತಿಯಲ್ಲಿ ಕೇವಲ 9 ಲಕ್ಷ ಜನಸಂಖ್ಯೆ ನಮೂದಿಸಲಾಗಿದೆ. ನೇಕಾರ ಸಮುದಾಯ ಒಕ್ಕೂಟದಿಂದ ನಾವೇ ಸಮೀಕ್ಷೆ ಮಾಡಲು ನಿರ್ಧರಿಸಿದ್ದೇವೆ. ನೇಕಾರರ ಜಾತಿಗಣತಿಗಾಗಿ ಆ್ಯಪ್ ಸಿದ್ದಪಡಿಸಿದ್ದೇವೆ’ ಎಂದರು.
ರಾಜ್ಯದ ನೇಕಾರ ಸಮುದಾಯವು ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇಕಾರ ಸಮುದಾಯಗಳ ಮಠಾಧೀಶರು, ರಾಜಕೀಯ ಮುಖಂಡರು, ಸಮಾಜದ ಗಣ್ಯರು ಐದಾರು ಸಭೆಗಳನ್ನು ನಡೆಸಿ ಮರು ಸಮೀಕ್ಷೆಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ಗದ್ದಿ ಮಾತನಾಡಿ, ‘ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯದ ನಿಖರ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಆ್ಯಪ್ ಅನ್ನು ಸಿದ್ದಪಡಿಸಿದೆ. ಈ ಆ್ಯಪ್ ಮೂಲಕ ರಾಜ್ಯದಲ್ಲಿರುವ ನೇಕಾರರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರಮಾಹಿತಿ ಒದಗಿಸಲು ಅನುಕೂಲ ಕಲ್ಪಿಸಲಾಗಿದೆ’ ಎಂದರು.
‘ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟವು ರಾಜ್ಯದಾದ್ಯಂತ ಜಿಲ್ಲಾವಾರು ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸಮುದಾಯದವರ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಿದ್ದು, ಸ್ಥಳೀಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮೂಲಕ ನೇಕಾರರನ್ನು ಸಂಪರ್ಕಿಸಿ, ಕುಟುಂಬ ಸದಸ್ಯರ ಅಂಕಿ ಅಂಶಗಳನ್ನು ಸಂಗ್ರಹಿಸಿ ಆ್ಯಪ್‌ನಲ್ಲಿ ದಾಖಲಿಸಲಾಗುವುದು’ ಎಂದರು.
ದಶರಥ ಕೊಳ್ಳಿ, ಮೈಲಾರಪ್ಪ, ಶ್ರೀನಿವಾಸ ಹುಬ್ಬಳ್ಳಿ, ತಾರಾಮತಿ, ರಾಮಕೃಷ್ಣಪ್ಪ ದೇವರಕೊಂಡಿ, ನಾಮದೇವ ಸೂರೆ, ನಿಂಗಪ್ಪ ಚೇಗೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.