ADVERTISEMENT

ನಾಮಫಲಕಗಳು ಕನ್ನಡದಲ್ಲಿ ರಾರಾಜಿಸಲಿ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಲೇಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 5:42 IST
Last Updated 28 ಫೆಬ್ರುವರಿ 2021, 5:42 IST
ಗದುಗಿನ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶನಿವಾರ ನಡೆದ ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು
ಗದುಗಿನ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಶನಿವಾರ ನಡೆದ ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಉದ್ಘಾಟಿಸಿದರು   

ಗದಗ: ‘ಉತ್ತರ ಕರ್ನಾಟಕ ಭಾಗದ ಕನ್ನಡ ಭಾಷೆಗೆ ಅದರದ್ದೇ ಆದ ಗತ್ತು, ಗಮ್ಮತ್ತು ಇದೆ. ಆ ದೇಸಿ ಸೊಗಡನ್ನು ಉಳಿಸಿಕೊಳ್ಳುವ ಮೂಲಕ, ಮಾತೃಭಾಷೆಯನ್ನು ಜೀವನದ್ದುದ್ದಕ್ಕೂ ಬಳಸಬೇಕು’ ಎಂದು ಜಿಲ್ಲಾ ಉಸ್ತವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಗದಗ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ ಇಂದು ಅನ್ಯಭಾಷೆಗಳ ಹಾವಳಿ ಹೆಚ್ಚಾಗಿದೆ. ನಾವೆಲ್ಲರೂ ಮಾತೃಭಾಷೆಯಾದ ಕನ್ನಡವನ್ನು ಕಲಿತು ಅಭಿಮಾನದಿಂದ ಮಾತನಾಡುವ ಮೂಲಕ ಕನ್ನಡ ಭಾಷೆಯನ್ನು ಉಳಿಸುವ ಸಂಕಲ್ಪ ಮಾಡಬೇಕು. ಸಾಹಿತ್ಯಿಕ ವಲಯದಲ್ಲಿ ಗದಗ ಜಿಲ್ಲೆ ಕಂಗೊಳಿಸುತ್ತಿದೆ. ಕನ್ನಡ ಸಾಹಿತ್ಯಕ್ಕೆ ಜಿಲ್ಲೆಯ ಕವಿ, ಸಾಹಿತಿಗಳ ಕೊಡುಗೆಯನ್ನು ಮರೆಯಲಾಗದು’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಈವರೆಗೆ ಎಂಟು ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಉತ್ತಮವಾಗಿ ಆಯೋಜಿಸಲಾಗಿದೆ. ಮುಂಡರಗಿ, ಲಕ್ಷ್ಮೇಶ್ವರ, ಗದಗ, ಗಜೇಂದ್ರಗಡ, ರೋಣ, ಶಿರಹಟ್ಟಿ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನು ಆಯೋಜಿಸಿ ಯಶಸ್ವಿಗೊಳಿಸಲಾಗಿದೆ’ ಎಂದರು.

ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ‘ಕನ್ನಡದ ವೈಭವ ನಾಶವಾಗುತ್ತಿದೆ. ಎಲ್ಲ ಭಾಷೆಗಳ ಜಾಗವನ್ನು ಇಂದು ಇಂಗ್ಲಿಷ್‌ ಆಕ್ರಮಿಸಿಕೊಳ್ಳುತ್ತಿದೆ. ಹೀಗಾಗಿ ಇಂಗ್ಲಿಷ್‌ ತನ್ನ ಸಾಮ್ರಾಜ್ಯವನ್ನು ಪ್ರತಿ ಮನೆ, ಪ್ರತಿ ವ್ಯಕ್ತಿಗಳಲ್ಲಿ ಸ್ಥಾಪಿಸಿಕೊಂಡಿದೆ. ಕನ್ನಡ ನಾಡಿನಲ್ಲೇ ಕನ್ನಡಕ್ಕೆ ಜೀವಂತಿಕೆ ಇಲ್ಲ ಎಂದಾದರೆ; ಇನ್ನೆಲ್ಲಿಗೆ ಹೋಗಲಿಕ್ಕೆ ಸಾಧ್ಯ. ಕರ್ನಾಟಕದಲ್ಲಿ ಕನ್ನಡ ಬೆಳೆಸಬೇಕು. ರಾಜ್ಯದಲ್ಲಿರುವ ನಾಮಫಲಕಗಳೆಲ್ಲವೂ ಕನ್ನಡದಲ್ಲಿ ಇರಬೇಕು’ ಎಂದು ಆಗ್ರಹಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣು ಗೋಗೇರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಧ್ವಜಾರೋಹಣ, ತಾಯಿ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಗರದ ಕಿತ್ತೂರ ಚನ್ನಮ್ಮ ವೃತ್ತದಿಂದ ಆರಂಭವಾಗಿ ಮಹಾವೀರ ವೃತ್ತ, ಟಿಪ್ಪು ಸುಲ್ತಾನ್ ವೃತ್ತದ ಮಾರ್ಗವಾಗಿ ಸಾಹಿತ್ಯ ಭವನ ತಲುಪಿತು.

ಸಮ್ಮೇಳನಾಧ್ಯಕ್ಷ ರವೀಂದ್ರ ಕೊಪ್ಪರ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಈರಪ್ಪ ನಾಡಗೌಡ್ರ, ಉಪಾಧ್ಯಕ್ಷೆ ಮಂಜುಳಾ ಹುಲ್ಲೆಣ್ಣವರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್‌ ಎನ್., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಗುಂಜೀಕರ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹಿರಿಯ ಸಾಹಿತಿ ಎಂ.ಡಿ.ಗೋಗೇರಿ ಇದ್ದರು.

ಗೌಣವಾಗಿ ಉಳಿದ ಪ್ರತಿಭೆ ಹೊರತನ್ನಿ
‘ಇಂದಿಗೂ ಗೌಣವಾಗಿಯೇ ಉಳಿದಿರುವ ಜಿಲ್ಲೆಯ ಅನೇಕ ಪ್ರತಿಭಾವಂತ ಕವಿ, ಸಾಹಿತಿಗಳನ್ನು ಗುರುತಿಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್‌ ಮಾಡಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಹೇಳಿದರು.

‘ಗದಗ-ಬೆಟಗೇರಿ ಅವಳಿ ನಗರದ ಉದ್ಯಾನಗಳಲ್ಲಿ ಈ ಹಿಂದೆ ನಡೆಯುತ್ತಿದ್ದ ಉದಯರಾಗ, ಸಂಧ್ಯಾರಾಗ ಕಾರ್ಯಕ್ರಮಗಳು ಪುನರಾರಂಭ ಆಗಬೇಕಿದೆ. ಗದಗ ಜಿಲ್ಲೆ ಹಲವು ವಿಷಯಗಳಲ್ಲಿ ಪ್ರಥಮ ಎನಿಸಿಕೊಂಡಿದೆ. ಇಲ್ಲಿ ದೊಡ್ಡದು ಸೃಷ್ಟಿಯಾಗುತ್ತಿದೆ. ಆದರೆ, ಸಣ್ಣದರ ಕಡೆಗೆ ಗಮನ ಹರಿಸುತ್ತಿಲ್ಲ. ಸಾಹಿತಿಗಳು ಪ್ರಶ್ನೆ ಕೇಳುವ ಜಾಗೃತ ಮನಸ್ಸು ಹೊಂದಬೇಕು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲೆಯ ಹಲವು ಗ್ರಾಮಗಳಲ್ಲಿರುವ ಪುರಾತನ ದೇವಸ್ಥಾನಗಳ ಪುನಶ್ಚೇತನ ಕಾರ್ಯವಾಗಬೇಕಿದೆ. ಜಿಲ್ಲೆಯಲ್ಲಿರುವ ಸಾಹಿತಿಗಳನ್ನು ಗುರುತಿಸಿ ಅವರ ಭಾವಚಿತ್ರಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಚುರ ಪಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.