ADVERTISEMENT

ಗದಗ: ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಅಷ್ಟಾಗಿ ಇಲ್ಲ -ಸಚಿವ ಸಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 4 ಮೇ 2021, 3:48 IST
Last Updated 4 ಮೇ 2021, 3:48 IST
ಸಚಿವ ಸಿ.ಸಿ.ಪಾಟೀಲ
ಸಚಿವ ಸಿ.ಸಿ.ಪಾಟೀಲ   

ಗದಗ: ‘ಸಾರ್ವಜನಿಕರು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕೈ ಜೋಡಿಸಬೇಕು’ ಎಂದು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದರು.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಜ್ಞರ ವರದಿ ಅನುಸಾರ ಮೇ 15ರ ವರೆಗೆ ಸೋಂಕಿನ ಪ್ರಮಾಣ ಅಧಿಕವಾಗುವ ಸಂಭವ ಇದೆ. ಆದ್ದರಿಂದ ಸಾರ್ವಜನಿಕರು ವಿನಾಕಾರಣ ಮನೆಯಿಂದ ಹೊರಬರಬಾರದು’ ಎಂದು ಹೇಳಿದರು.

‘ಸದ್ಯಕ್ಕೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಅಷ್ಟಾಗಿ ಇಲ್ಲ. ಸಣ್ಣ ಕೈಗಾರಿಕೆಗಳ ಜತೆಗೆ ಚರ್ಚಿಸಲಾಗುತ್ತಿದ್ದು ಜಂಬೋ ಸಿಲಿಂಡರ್ ಪೂರೈಕೆಗೆ ಪ್ರಯತ್ನ ನಡೆದಿದೆ.ಖಾಸಗಿ ಉದ್ಯಮಿಯೊಬ್ಬರು ಉಚಿತವಾಗಿ ಆಕ್ಸಿಜನ್ ಪೂರೈಸಲು ಮುಂದೆ ಬಂದಿದ್ದಾರೆ. ಅದಕ್ಕೆ ಸರ್ಕಾರದ ಮಟ್ಟದಲ್ಲಿ ಅನುಮೋದನೆ ಸಿಕ್ಕರೆ ಆಕ್ಸಿಜನ್ ಕೊರತೆ ಆಗದಂತೆ ಪರಿಸ್ಥಿತಿ ನಿಭಾಯಿಸಬಹುದು. ಜಿಲ್ಲಾ ಆಸ್ಪತ್ರೆಯಲ್ಲಿ ಈಗಿರುವ ಆಕ್ಸಿಜನ್ ಬೆಡ್ ಸೇರಿದಂತೆ ಹೆಚ್ಚುವರಿಯಾಗಿ 100 ಆಕ್ಸಿಜನ್ ಬೆಡ್ ವ್ಯವಸ್ಥೆಗೆ ಸಿದ್ಧತೆ ನಡೆದಿದೆ’ ಎಂದು ತಿಳಿಸಿದರು.

ADVERTISEMENT

‘ಸೋಂಕಿತರಿಗೆ ನೀಡುವ ರೆಮ್‌ಡಿಸಿವರ್‌ ಚುಚ್ಚುಮದ್ದು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸಂಗ್ರಹವಿದೆ. ಖಾಸಗಿ ಆಸ್ಪತ್ರೆಗಳಿಗೆ ಅಗತ್ಯದಷ್ಟು ಪೂರೈಕೆ ಆಗುತ್ತಿಲ್ಲ’ ಎಂದು ತಿಳಿಸಿದರು.

‘ಜಿಮ್ಸ್‌ನ ವೈದ್ಯಕೀಯ ಸಿಬ್ಬಂದಿಗೆ ಕಾರ್ಯಭಾರ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡುವ ಆಯಾ ತಾಲ್ಲೂಕಿನ ಸೋಂಕಿತರಿಗೆ ಅಲ್ಲೇ ಚಿಕಿತ್ಸೆ ಒದಗಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 900 ಬೆಡ್‌ಗಳ ಕೋವಿಡ್ ಕೇರ್‌ ಸೆಂಟರ್‌ಗಳನ್ನು ಆಯಾ ತಾಲ್ಲೂಕಿನಲ್ಲಿ ತೆರೆಯಲು ಸೂಚಿಸಿದ್ದು, ಪ್ರತಿ ಕೋವಿಡ್ ಕೇರ್‌ ಸೆಂಟರ್‌ಗೆ ಒಬ್ಬ ನೋಡೆಲ್ ಅಧಿಕಾರಿ ನೇಮಿಸುವಂತೆ ಸೂಚಿಸಲಾಗಿದೆ’ ಎಂದರು.

ವಾಸ್ತವ ಮರೆತಿರುವ ಕಾಂಗ್ರೆಸ್‌: ಸಚಿವ ಲೇವಡಿ
ಗದಗ:
‘ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೇರಿಲ್ಲ ಎಂಬ ಖುಷಿಯಲ್ಲಿ ಶೂನ್ಯಕ್ಕೆ ಜಾರಿ ಬಿದ್ದಿದ್ದೇವೆ ಎಂಬ ಸತ್ಯವನ್ನೇ ಕಾಂಗ್ರೆಸ್ ಮರೆತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಇಲ್ಲಿ ಲೇವಡಿ ಮಾಡಿದರು.

‘ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಅಸ್ಸಾಂನಲ್ಲಿ ಧೂಳಿಪಟವಾಗಿದೆ. ಕೇರಳದಲ್ಲಿ ಲೆಕ್ಕಕ್ಕಿಲ್ಲ, ಪುದುಚೇರಿಯಲ್ಲಿ ಹೀನಾಯ ಸೋಲುಂಡಿದೆ. ತಮಿಳುನಾಡಿನಲ್ಲೂ ಅದೇ ಪರಿಸ್ಥಿತಿ ಎದುರಿಸುತ್ತಿದೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.