ADVERTISEMENT

ಪ್ರತಿ ಗ್ರಾಮದಲ್ಲೂ ಸ್ಮಶಾನ ನಿರ್ಮಾಣಕ್ಕೆ ಕ್ರಮ

ಕೋವಿಡ್–19 ನಿರ್ವಹಣೆಗಾಗಿ ಗದಗ ಜಿಲ್ಲೆಗೆ ₹5.08 ಕೋಟಿ– ಸಚಿವ ಅಶೋಕ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:20 IST
Last Updated 18 ಸೆಪ್ಟೆಂಬರ್ 2020, 6:20 IST

ಗದಗ: ‘ರಾಜ್ಯದ ಪ್ರತಿ ಗ್ರಾಮದಲ್ಲೂ ಸ್ಮಶಾನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಗದಗ ಜಿಲ್ಲೆಯಲ್ಲಿ 111 ಗ್ರಾಮಗಳಿಗೆ ಸ್ಮಶಾನ ನಿರ್ಮಾಣಕ್ಕೆ ಭೂಮಿ ಅಗತ್ಯವಿದ್ದು, ಸರ್ಕಾರಿ ಜಮೀನುಗಳಿದ್ದಲ್ಲಿ ಕೂಡಲೇ ಮಂಜೂರು ಮಾಡಬೇಕು. ಅಗತ್ಯ ಬಿದ್ದಲ್ಲಿ ಖಾಸಗಿ ಜಮೀನು ಖರೀದಿಸಿ ಸ್ಮಶಾನ ನಿರ್ಮಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘9 ಲಕ್ಷ ಹೆಕ್ಟೇರ್‌ನಷ್ಟು ಭೂಮಿಗಾಗಿ ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವೆ ನಾಲ್ಕೈದು ದಶಕಗಳಿಂದಲೂ ವಿವಾದ ಇದೆ. ಸಚಿವರು ಮತ್ತು ಅಧಿಕಾರಿಗಳ ಮಟ್ಟದಲ್ಲಿ ಈಚೆಗೆ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬರಲಾಗಿದೆ. ಅದರಂತೆ 6 ಲಕ್ಷ ಹೆಕ್ಟೇರ್‌ ಭೂಮಿಯನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿದೆ. ಕಾನೂನಿನ ಅನುಸಾರವಾಗಿ ಅದು ಕಂದಾಯ ಇಲಾಖೆಗೆ ಹಸ್ತಾಂತರಗೊಂಡರೆ ಪ್ರತಿ ಗ್ರಾಮದಲ್ಲೂ ಸ್ಮಶಾನ ನಿರ್ಮಿಸಲು ಅನುಕೂಲವಾಗಲಿದೆ’ ಎಂದು ಅವರು ಹೇಳಿದರು.

ಅದೇರೀತಿ, 94ಸಿ ಅಡಿಯಲ್ಲಿ ಮನೆ ನಿರ್ಮಿಸಿಕೊಂಡವರು ಹಾಗೂ ಬಗರ್‌ ಹುಕುಂ ಯೋಜನೆ ಅಡಿಯಲ್ಲಿ ಜಮೀನು ಉಳುಮೆ ಮಾಡುತ್ತಿರುವವರ ಸಮಸ್ಯೆ ಕೂಡ ಬಗೆಹರಿಯಲಿದೆ. ಈ ವರ್ಷ ರಾಜ್ಯದ 130 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ತಾಲ್ಲೂಕುಗಳು ಎಂದು ಕಂದಾಯ ಇಲಾಖೆ ಘೋಷಿಸಿದೆ ಎಂದು ತಿಳಿಸಿದರು.

‘ಪ್ರವಾಹದಿಂದಾಗಿ ಜಿಲ್ಲೆಯ ನರಗುಂದ ಮತ್ತು ರೋಣ ತಾಲ್ಲೂಕಿನ ಒಟ್ಟು 14 ಗ್ರಾಮಗಳು ಹಾನಿಗೊಳಗಾಗಿವೆ. ಪ್ರವಾಹ ಹಾಗೂ ಮಳೆಯಿಂದಾಗಿ ಜಿಲ್ಲೆಯಲ್ಲಿ ₹158 ಕೋಟಿ ಹಾನಿ ಸಂಭವಿಸಿದೆ. ಪ್ರಾಕೃತಿಕ ವಿಕೋಪಗಳ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಪಿ.ಡಿ.ಖಾತೆಯಲ್ಲಿ ₹12.87 ಕೋಟಿ ಹಣ ಇದೆ’ ಎಂದು ಹೇಳಿದರು.

ಕೋವಿಡ್–19 ನಿರ್ವಹಣೆಗಾಗಿ ರಾಜ್ಯ ಸರ್ಕಾರ ಗದಗ ಜಿಲ್ಲೆಗೆ ₹5.08 ಕೋಟಿ ಅನುದಾನ ಒದಗಿಸಿದೆ. ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 5 ಎಕರೆ, ಬೀಜ ನಿಗಮದ ರೋಣ ಶಾಖೆಗೆ 1.20 ಎಕರೆ ಕಂದಾಯ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ರಾಜ್ಯಕ್ಕೆ ₹628 ಕೋಟಿ ಪರಿಹಾರ ಬರಬೇಕಾಗಿದ್ದು, ಅದರಲ್ಲಿ ₹395 ಕೋಟಿ ಹಣವನ್ನು ಒಂದು ತಿಂಗಳ ಮುಂಚೆಯೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಲಖಮಾಪುರ ಗ್ರಾಮದ ಸೇತುವೆ ಹಾಗೂ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.