ADVERTISEMENT

ಗಜೇಂದ್ರಗಡ | ಚರ್ಚ್‌ ನಿರ್ಮಾಣ ಕೈ ಬಿಡಲು ಒತ್ತಾಯ

ಮತಾಂತರಕ್ಕೆ ಯತ್ನ: ಆರೋಪ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:47 IST
Last Updated 6 ಡಿಸೆಂಬರ್ 2025, 2:47 IST
ಗಜೇಂದ್ರಗಡ ಸಮೀಪದ ಚಿಲ್‌ಝರಿ ಗ್ರಾಮದ ಹೊರವಲಯದಲ್ಲಿರುವ ಹೋಲಿ ಫ್ಯಾಮಿಲಿ (ಬೆಲ್ತಾನಿ) ಶಾಲೆಯ ಬಳಿ ಚರ್ಚ್‌ ನಿರ್ಮಾಣ ಹಾಗೂ ಕ್ರೈಸ್ತ ಪ್ರಾರ್ಥನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷದ್‌, ಭಜರಂಗದಳ ಕಾರ್ಯಕರ್ತರು ರಾಮಾಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಪಿಡಿಒ ಬಿ.ಎನ್.ಇಟಗಿಮಠ ಅವರಿಗೆ ಮನವಿ ಸಲ್ಲಿಸಿದರು
ಗಜೇಂದ್ರಗಡ ಸಮೀಪದ ಚಿಲ್‌ಝರಿ ಗ್ರಾಮದ ಹೊರವಲಯದಲ್ಲಿರುವ ಹೋಲಿ ಫ್ಯಾಮಿಲಿ (ಬೆಲ್ತಾನಿ) ಶಾಲೆಯ ಬಳಿ ಚರ್ಚ್‌ ನಿರ್ಮಾಣ ಹಾಗೂ ಕ್ರೈಸ್ತ ಪ್ರಾರ್ಥನಾ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ವಿಶ್ವಹಿಂದೂ ಪರಿಷದ್‌, ಭಜರಂಗದಳ ಕಾರ್ಯಕರ್ತರು ರಾಮಾಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಪಿಡಿಒ ಬಿ.ಎನ್.ಇಟಗಿಮಠ ಅವರಿಗೆ ಮನವಿ ಸಲ್ಲಿಸಿದರು   

ಗಜೇಂದ್ರಗಡ: ಸಮೀಪದ ಚಿಲ್‌ಝರಿ ಗ್ರಾಮದ ಹೊರ ವಲಯದಲ್ಲಿರುವ ಹೋಲಿ ಫ್ಯಾಮಿಲಿ (ಬೆಲ್ತಾನಿ) ಶಾಲೆಯ ಬಳಿ ಚರ್ಚ್‌ ನಿರ್ಮಾಣ, ಹಿಂದೂಗಳಿಗೆ ಆಸೆ ಆಮಿಷೆ ತೋರಿಸಿ ಮತಾಂತರಕ್ಕೆ ಯತ್ನ ಹಾಗೂ ಕ್ರೈಸ್ತ ಪ್ರಾರ್ಥನಾ ಚಟುವಟಿಕೆ ನಡೆಯುತ್ತಿದ್ದು, ಇದಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷದ್‌, ಭಜರಂಗದಳ ಕಾರ್ಯಕರ್ತರು ಶುಕ್ರವಾರ ರಾಮಾಪುರ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.

‘ಚಿಲ್‌ಝರಿ ಗ್ರಾಮದ ಹೊರ ವಲಯದಲ್ಲಿರುವ ಹೋಲಿ ಫ್ಯಾಮಿಲಿ ಶಾಲೆಯಲ್ಲಿನ ಕೆಲವು ಶಿಕ್ಷಕರು ಮತ್ತು ಸಿಬ್ಬಂದಿ ವಿದ್ಯಾರ್ಥಿಗಳಿಗೆ ಕ್ರಿಶ್ಚಿಯನ್‌ ಧರ್ಮದ ಕುರಿತು ಬೋಧಿಸುವುದರ ಜೊತೆಗೆ ಹಿಂದೂ ಕುಟುಂಬಗಳಿಗೆ ಮತಾಂತರಕ್ಕಾಗಿ ಆಮಿಷ ಒಡ್ಡುತ್ತಿದ್ದಾರೆ. ಅಲ್ಲದೆ ಶಾಲೆಯ ಆವರಣ ಹಾಗೂ ಶಾಲೆಯ ಸುತ್ತ ಅಕ್ರಮವಾಗಿ ಚರ್ಚ್‌ ಮತ್ತು ಪ್ರಾರ್ಥನಾ ಮಂದಿರದ ಕಟ್ಟಡ ಕಾಮಗಾರಿ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಚರ್ಚ್‌ ನಿರ್ಮಾಣದಿಂದ ಸಮಾಜದಲ್ಲಿ ಶಾಂತಿ ಕದಡುವ ವಾತಾವರಣವಿದ್ದು, ಗ್ರಾಮ ಪಂಚಾಯಿತಿಯವರು ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಬಾರದು’ ಎಂದು ಎರಡು ತಿಂಗಳ ಹಿಂದೆ ತಕರಾರು ಅರ್ಜಿ ಸಲ್ಲಿಸಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಚರ್ಚ್‌ ನಿರ್ಮಾಣ ಕಾಮಗಾರಿ ಕೈಬಿಡಬೇಕು. ಇದಕ್ಕೆ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕುʼ ಎಂದು ಕಾರ್ಯಕರ್ತರು ಆಗ್ರಹಿಸಿದರು.

ADVERTISEMENT

‘ಹಿಂದೂ ಸಂಘಟನೆಗಳ ಮುಖಂಡರಿಗೆ ಕ್ರಿಶ್ಚಿಯನ್‌ ಸಂಸ್ಥೆಗಳ ಪರವಾಗಿ ಹಲವು ಬೆದರಿಕೆ ಹಾಗೂ ಹಣದ ಆಮಿಷದ ಕರೆಗಳು ಬರುತ್ತಿವೆ. ಹೀಗಾಗಿ ಪೊಲೀಸ್‌ ಇಲಾಖೆ ತನಿಖೆ ನಡೆಸಬೇಕು. ಅಲ್ಲದೆ ಅಕ್ರಮ ಚರ್ಚ್‌ ನಿರ್ಮಾಣ ಕೈಬಿಡುವ ಕುರಿತು 7 ದಿನಗಳಲ್ಲಿ ಸರಿಯಾದ ಸ್ಪಂದನೆ ನೀಡದಿದ್ದಲ್ಲಿ ಸಂಘಟನೆಯಿಂದ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದುʼ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರವಿ ಕಲಾಲ, ಸಂಜೀವಕುಮಾರ ಜೋಷಿ, ಮಂಜುನಾಥ ಹೂಗಾರ, ಪ್ರಸಾದ ಬಡಿಗೇರ, ನಾಗರಾಜ ಜಾಡರ, ನಾಗು ಉಪ್ಪಾರ, ಮುತ್ತು ರಾಠೋಡ, ಮುತ್ತು ಚಿಟಗಿ, ಗಣೇಶ ದಿವಾಣದ, ನವೀನ ಕಲಾಲ, ಆಕಾಶ ಅಂಬೊರೆ, ರುದ್ರಮುನಿ ಹಿರೇಮಠ, ಅಶೋಕ ರಾಯಬಾಗಿ, ಅರ್ಪಿತ ಗೌಡರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.