ADVERTISEMENT

ಕೊಟ್ಟ ಮಾತಿನಂತೆ ‘ವಿಷನ್‌– 35’ಗೆ ಬದ್ಧ; ಅನಿಲ ಮೆಣಸಿನಕಾಯಿ

ಬಿಜೆಪಿ ತೆಕ್ಕೆಗೆ ಗದಗ–ಬೆಟಗೇರಿ ನಗರಸಭೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 8:30 IST
Last Updated 31 ಡಿಸೆಂಬರ್ 2021, 8:30 IST

ಗದಗ: ‘ಮಿಷನ್‌–30’ ಗುರಿಯಲ್ಲಿ ಹಿನ್ನಡೆ ಆಗಿದ್ದರೂ ಕೊಟ್ಟ ಮಾತಿನಂತೆ ‘ವಿಷನ್‌–35’ಗೆ ಬದ್ಧರಿದ್ದೇವೆ. ಗದಗ –ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಗೆದ್ದಿದ್ದರೂ, ಎಲ್ಲ 35 ವಾರ್ಡ್‌ಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಗದುಗಿನ ಇಬ್ಬರು ಪಾಟೀಲರ ಆಡಳಿತದಿಂದಾಗಿ ಗದಗ–ಬೆಟಗೇರಿ ನಗರಸಭೆ ದಿವಾಳಿ ಹಂತಕ್ಕೆ ಬಂದು ತಲುಪಿತ್ತು. ಅಭಿವೃದ್ಧಿ ಶೂನ್ಯವಾಗಿತ್ತು. ಅವರಿಗೆ ಹುಲಕೋಟಿ ಗ್ರಾಮವನ್ನು ನಂ.1 ಆಗಿಸುವ ಇಚ್ಛೆ ಮಾತ್ರ ಇತ್ತು. ಆ ಬದ್ಧತೆ ಗದಗ–ಬೆಟಗೇರಿ ನಗರದ ಬಗ್ಗೆ ಇರಲಿಲ್ಲ’ ಎಂದು ದೂರಿದರು.

‘ಕಾಂಗ್ರೆಸ್‌ ಆಡಳಿತದಿಂದ ಬೇಸತ್ತಿದ್ದ ಜನರು ಬಿಜೆಪಿಗೆ ಮತ ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಗದಗ–ಬೆಟಗೇರಿ ನಗರದ ಇಪ್ಪತ್ತು ಸಾವಿರ ಮನೆಗಳಿಗೆ ಭೇಟಿ ನೀಡಿ, ಜನರ ಕಷ್ಟ ಆಲಿಸಿದ್ದೇವೆ. ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ ನೇತೃತ್ವದಲ್ಲಿ ಗದಗ ಬೆಟಗೇರಿ ಚಿತ್ರಣ ಬದಲಾಗಲಿದೆ’ ಎಂದು ಹೇಳಿದರು.

ADVERTISEMENT

‘ರಿಂಗ್ ರೋಡ್ ಕಾಮಗಾರಿ ಪೂರ್ಣಗೊಳಿಸುವುದು, ಗದಗ ಬೆಟಗೇರಿ ಯುಜಿಡಿ ಸಮಸ್ಯೆ ಬಗೆಹರಿಸುವುದು, ಸಮರ್ಪಕ ನೀರು ಪೂರೈಕೆ, ಹದಗೆಟ್ಟ ಚರಂಡಿ, ರಸ್ತೆಗಳ ದುರಸ್ತಿ ನಮ್ಮ ಆದ್ಯತೆಯಾಗಿದೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಈ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆದಿದ್ದು, ಅವುಗಳನ್ನು ಕೂಡ ಬಯಲಿಗೆಳೆಯಲಾಗುವುದು’ ಎಂದು ಹೇಳಿದರು.

‘ನಗರಸಭೆಯಲ್ಲಿ ಫಾರ್ಮ್ ನಂ‌.3 ಪಡೆಯಲು ಕಾಂಗ್ರೆಸ್‌ ದಲ್ಲಾಳಿಗಳೇ ಬೇಕಿತ್ತು. ಇದನ್ನು ಬಂದ್‌ ಮಾಡುವೆವು. ಬಡವರಿಗೆ ಹಕ್ಕುಪತ್ರಗಳನ್ನು ವಿತರಿಸುವುದಾಗಿ ಕಾಂಗ್ರೆಸ್‌ನವರು ಇಪ್ಪತ್ತು ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಅರ್ಹರನ್ನು ಗುರುತಿಸಿ ಮನೆ ಹಂಚಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು’ ಎಂದು ಹೇಳಿದರು.

‘ಪಕ್ಷದಿಂದ ಗೆದ್ದಿರುವ ಎಲ್ಲರೂ ಅಪ್ಪಟ ಬಿಜೆಪಿಗರು. ಅವರ ರಕ್ತದಲ್ಲೇ ಬಿಜೆಪಿ ಇದೆ. ನಮ್ಮವರನ್ನು ಹೈಜಾಕ್‌ ಮಾಡುವ ಅವಕಾಶ ಕಾಂಗ್ರೆಸ್‌ಗೆ ಕೊಡುವುದಿಲ್ಲ. ನಮ್ಮದು ಯುವ ಪಡೆಯಾಗಿದ್ದು, ಘಟಾನುಘಟಿಗಳಿಗೆ ಸೋಲಿನ ರುಚಿ ಉಣಬಡಿಸಿದ್ದಾರೆ. ಪಕ್ಷೇತರವಾಗಿ ಗೆದ್ದಿರುವ ಇಬ್ಬರು ಅಭ್ಯರ್ಥಿಗಳು ಕೂಡ ನಮ್ಮನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ಬಿಜೆಪಿಯಲ್ಲಿ ಗುಂಪುಗಾರಿಕೆ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಸಿ.ಪಾಟೀಲ, ಶಾಸಕರಾದ ಕಳಕಪ್ಪ ಬಂಡಿ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ, ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಮಾಳಶೆಟ್ಟಿ ಎಲ್ಲರೂ ಒಟ್ಟಾಗಿ ನಡೆದಿದ್ದರಿಂದ ಗದಗ–ಬೆಟಗೇರಿ ಬಿಜೆಪಿ ತೆಕ್ಕೆಗೆ ಸೇರಿದೆ’ ಎಂದು ಹೇಳಿದರು.

‘ಗದಗ ಬೆಟಗೇರಿ ನಗರಸಭೆಯಲ್ಲಿ ಹಲವು ವರ್ಷಗಳಿಂದ ಬೇರುಬಿಟ್ಟಿರುವ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸಿ, ಭ್ರಷ್ಟರಹಿತ ಆಡಳಿತ ನೀಡಲು ಪ್ರಯತ್ನಿಸಲಾಗುವುದು. ಅಭಿವೃದ್ಧಿಗೆ ಮಹತ್ವ ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.