ADVERTISEMENT

ಟೀಕಿಸುವವರಿಗೆ ಜನಸೇವೆಯ ಅಸ್ತ್ರ ಬಳಸಿ: ಸಚಿವ ಎಚ್‌.ಕೆ.ಪಾಟೀಲ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:41 IST
Last Updated 13 ಜುಲೈ 2025, 4:41 IST
ಗದಗ ಜಿಲ್ಲಾ ಕಾಂಗ್ರೆಸ್‌ ಯುವ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೃಷ್ಣಗೌಡ ಎಚ್‌.ಪಾಟೀಲ ಅವರಿಗೆ ನಿಕಟಪೂರ್ವ ಅಧ್ಯಕ್ಷ ಅಶೋಕ ಮಂದಾಲಿ ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಧ್ವಜ ಹಸ್ತಾಂತರಿಸಿದರು 
ಗದಗ ಜಿಲ್ಲಾ ಕಾಂಗ್ರೆಸ್‌ ಯುವ ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕೃಷ್ಣಗೌಡ ಎಚ್‌.ಪಾಟೀಲ ಅವರಿಗೆ ನಿಕಟಪೂರ್ವ ಅಧ್ಯಕ್ಷ ಅಶೋಕ ಮಂದಾಲಿ ಶನಿವಾರ ನಡೆದ ಪದಗ್ರಹಣ ಸಮಾರಂಭದಲ್ಲಿ ಧ್ವಜ ಹಸ್ತಾಂತರಿಸಿದರು    

ಗದಗ: ‘ಮಾತಿಗೆ ಮಾತು ಕೊಡುವುದು ಕಾಂಗ್ರೆಸ್‌ ನೀತಿಯಲ್ಲ. ಟೀಕೆ ಮಾಡುವವರ ಬಗ್ಗೆ ಅತಿಯಾದ ಲಕ್ಷ್ಯ ಕೊಡಬೇಡಿ. ಆದರೆ, ಸಮಯ ಬಂದಾಗ ತಕ್ಕ ಉತ್ತರ ಕೊಡಲು ಸಿದ್ಧರಾಗಿರಬೇಕು. ಟೀಕಾಕಾರರನ್ನು ನಮ್ಮ ಶ್ರೇಷ್ಠ ಕೆಲಸಗಳ ಮೂಲಕ ಬಾಗುವಂತೆ ಮಾಡಬೇಕು’ ಎಂದು ಸಚಿವ ಎಚ್‌.ಕೆ.ಪಾಟೀಲ ಯುವ ನಾಯಕರಿಗೆ ಸಲಹೆ ನೀಡಿದರು.

ನಗರದ ವಿವೇಕಾನಂದ ಸಭಾ ಭವನದಲ್ಲಿ ಶನಿವಾರ ನಡೆದ ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಯುವ ಧ್ವನಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಯುವಜನರು ವರ್ತಮಾನ ಮತ್ತು ಭವಿಷ್ಯದ ಯಜಮಾನರು. ಜನಸೇವೆ ಮಾಡುವುದು ಹೇಗೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಯೋಚಿಸಬೇಕು. ಜನಸೇವೆಯೇ ಪ್ರಮುಖ ಅಸ್ತ್ರವಾಗಬೇಕು. ಪ್ರತಿ ಹಂತದಲ್ಲೂ ದೇಶ ಕಟ್ಟುವುದರ ಬಗ್ಗೆ ಯೋಚಿಸಬೇಕು. ಈ ರೀತಿಯ ಕೆಲಸಗಳ ಮೂಲಕ ತೃಪ್ತಿ ಕಾಣಬೇಕು’ ಎಂದು ಹೇಳಿದರು.

ADVERTISEMENT

‘ಜನರನ್ನು ವಿಭಜಿಸಿ ರಾಜಕಾರಣ ಮಾಡುವುದು ಬಿಜೆಪಿ ನಿಲುವು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವುದು ಕಾಂಗ್ರೆಸ್‌ನ ನಿಲುವು. ವಿಭಜಿತ ರಾಜಕಾರಣಕ್ಕೆ ಕಾಂಗ್ರೆಸ್‌ ಯಾವುತ್ತೂ ಅವಕಾಶ ಕೊಡುವುದಿಲ್ಲ. ಸೇವಾ ಚಟುವಟಿಕೆಗಳ ಮೂಲಕ ಗದಗ ಜಿಲ್ಲೆಯನ್ನು ಶಾಂತಿಯ ತೋಟ ಮಾಡಬೇಕು. ಗದಗ ಜಿಲ್ಲಾ ಯುವ ಘಟಕ ರಾಜ್ಯಕ್ಕೆ ಮಾದರಿಯಾಗಬೇಕು. ಭವಿಷ್ಯದಲ್ಲಿ ಶಕ್ತಿಶಾಲಿ ನಾಯಕರಾಗಿ ಬೆಳೆಯಬೇಕು’ ಎಂದರು.

ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿ, ‘ಮುಂದಿನ ನಾಯಕತ್ವ ಬೆಳೆಸಲು ಯುವ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಸಂವಿಧಾನದ ಆಶಯದಂತೆ ಜಾತ್ಯತೀತ, ಸಮ ಸಮಾಜ ನಿರ್ಮಾಣದ ಬದ್ಧತೆ ಹೊಂದಬೇಕು. ಜತೆಗೆ ದೇಶದ ರಾಜಕೀಯ ಇತಿಹಾಸವನ್ನು ಓದಿ ಅರ್ಥೈಸಿಕೊಳ್ಳಬೇಕು. ಕಾಂಗ್ರೆಸ್‌ ಪಕ್ಷದ ಹೋರಾಟ, ಬಿಜೆಪಿ– ಆರ್‌ಎಸ್‌ಎಸ್‌ನ ಇತಿಹಾಸವನ್ನೂ ತಿಳಿದುಕೊಳ್ಳಬೇಕು’ ಎಂದರು.

‘ಯುವಕರು ಸೇವಾ ಮನೋಭಾವ ಹೊಂದಬೇಕು. ಕಷ್ಟಗಳಿಗೆ ಸ್ಪಂದಿಸಬೇಕು. ಬೇರು ಮಟ್ಟಕ್ಕೆ ಇಳಿದು ಜನರ ಪ್ರೀತಿ ಗಳಿಸಿ, ಜನನಾಯಕರಾಗಿ ಬೆಳೆಯಬೇಕು ಎಂದರು.

ಕಾಂಗ್ರೆಸ್‌ ಮುಖಂಡರಾದ ಎನ್‌.ಎಚ್‌.ಕೋನರಡ್ಡಿ, ಡಿ.ಆರ್‌.ಪಾಟೀಲ, ಜಿ.ಎಸ್‌.ಪಾಟೀಲ, ಬಿ.ಆರ್‌.ಯಾವಗಲ್‌, ಜಿ.ಎಸ್‌.ಗಡ್ಡದೇವರಮಠ, ಆನಂದ ಗಡ್ಡದೇವರಮಠ, ಪ್ರಸಾದ್‌ ಅಬ್ಬಯ್ಯ, ಸಿದ್ದು ಪಾಟೀಲ, ಅಶೋಕ ಮಂದಾಲಿ, ರಾಮಕೃಷ್ಣ ದೊಡ್ಡಮನಿ, ಸುಜಾತಾ ದೊಡ್ಡಮನಿ, ರಾಮಣ್ಣ ಲಮಾಣಿ, ಮಿಥುನ್‌ ಪಾಟೀಲ, ಸಚಿನ್‌ ಪಾಟೀಲ, ವಿವೇಕ ಯಾವಗಲ್‌ ಸೇರಿದಂತೆ ಹಲವರು ಇದ್ದರು.

ಪಂಚ ಗ್ಯಾರಂಟಿ ಮೂಲಕ ಜನರ ಬದುಕು ಹಸನು ‌ಮಾಡಲಾಗಿದೆ. ಗ್ಯಾರಂಟಿಗಳು ರಾಜ್ಯದಲ್ಲಿನ ಎಲ್ಲ ಬಡವರ ಜೀವನ ಸುಧಾರಿಸಿ ಅವರನ್ನು ಮೇಲೆತ್ತಿವೆ. ಬಡತನವನ್ನು ಬೇರು ಸಮೇತ ಕಿತ್ತೊಗೆದಿದ್ದು ಕಾಂಗ್ರೆಸ್ ಸರ್ಕಾರ.
– ಎಚ್‌.ಕೆ.ಪಾಟೀಲ, ಸಚಿವ
ಯುವ ಕಾಂಗ್ರೆಸ್‌ಗೆ ದೊಡ್ಡ ಇತಿಹಾಸ ಇದೆ. 65 ವರ್ಷಗಳ ಅವಧಿಯಲ್ಲಿ ನೂರಾರು ನಾಯಕರನ್ನು ರೂಪಿಸಿದೆ. ಹೋರಾಟದ ಮನೋಭಾವ ಇದ್ದವರಿಗಷ್ಟೇ ರಾಜಕಾರಣದಲ್ಲಿ ಶಕ್ತಿ ಸಿಗುತ್ತದೆ
– ಸಲೀಂ ಅಹ್ಮದ್‌ ಮುಖ್ಯ ಸಚೇತಕ
ಯುವಜನರು ದೇಶದ ಶಕ್ತಿ. ಬಿಜೆಪಿಯದ್ದು ಸುಳ್ಳು ಭರವಸೆಯಾದರೆ; ನಾವು ನುಡಿದಂತೆ ನಡೆದು ಜನರಿಗೆ ಹತ್ತಿರವಾಗಿದ್ದೇವೆ. ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಲು ಕ್ರಮವಹಿಸಲಾಗುವುದು
– ದೀಪಿಕಾ ರೆಡ್ಡಿ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ

ವೈಚಾರಿಕವಾಗಿ ಬೆಳೆಯಬೇಕು: ಮಂಜುನಾಥ್‌ ಗೌಡ

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರು ರೈತರು ಕೂಲಿ ಕಾರ್ಮಿಕರು ನೆಮ್ಮದಿಯಿಂದ ಬದುಕುತ್ತಿದ್ದಾರೆ’ ಎಂದು ಯುವ ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್‌ ಗೌಡ ಹೇಳಿದರು.

‘ಯುವಕರು ವೈಚಾರಿಕ ಮತ್ತು ಸೈದ್ಧಾಂತಿಕವಾಗಿ ರೂಪುಗೊಳ್ಳಬೇಕು. ಕಾಂಗ್ರೆಸ್‌ನ ತತ್ವ–ಸಿದ್ಧಾಂತಗಳಿಗೆ ಅನುಗುಣವಾಗಿ ಜನಸೇವೆ ಮಾಡಬೇಕು. ಸಂವಿಧಾನದ ಆಶಯ ಸಾಕಾರ ನಮ್ಮ ಸೇವೆಯ ಮೂಲಮಂತ್ರ ಆಗಬೇಕು’ ಎಂದರು.

‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಮತ ಚಲಾಯಿಸುವ ಹಕ್ಕು ಒದಗಿಸುವ ಮೂಲಕ ಜನ ನಾಯಕರನ್ನು ಆಯ್ಕೆ ಮಾಡುವ ಅವಕಾಶ ಒದಗಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸಿ ಅವರ ಪ್ರೀತಿ ಗಳಿಸಬೇಕು. 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೇ ಅಧಿಕಾರಕ್ಕೆ ತರಲು ಈಗಿನಿಂದಲೇ ಸಜ್ಜಾಗಬೇಕು’ ಎಂದರು.

ಜನರ ಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸುವೆ: ಕೆ.ಎಚ್‌.ಪಾಟೀಲ

‘ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವುದು ಕಾಂಗ್ರೆಸ್‌ ಪಕ್ಷ ಮಾತ್ರ. ನೊಂದವರ ದನಿಯಾಗಿ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೃಷ್ಣಗೌಡ ಎಚ್‌.ಪಾಟೀಲ ಹೇಳಿದರು.

‘ವಿಷಯಾಧಾರಿತ ರಾಜಕಾರಣಕ್ಕಿಂತ ಸೇವಾ ರಾಜಕಾರಣ ದೊಡ್ಡದು. ಹಾಗಾಗಿ ನಮ್ಮ ತಂಡದ ಗುರಿ ಜನಸೇವೆಯೇ ಆಗಿದೆ. ಸಮಸ್ಯೆ ಹೇಳಿಕೊಂಡು ಬಂದವರಿಗೆಲ್ಲಾ ಆಡಂಬರದ ಮಾತು ಹೇಳಿ ನಂಬಿಸುವುದಿಲ್ಲ. ಜನರ ಕಷ್ಟ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.