ADVERTISEMENT

ಭಿನ್ನ ‘ಭಾವಾನುಭೂತಿ‘; ಕಲೆಯ ಸ್ಪರ್ಶ

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವ ವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 7:24 IST
Last Updated 11 ಏಪ್ರಿಲ್ 2021, 7:24 IST
ಘಟಿಕೋತ್ಸವದಲ್ಲಿ ಕಿನ್ನಾಳ ಕಲೆಯ ಸಂಭ್ರಮ
ಘಟಿಕೋತ್ಸವದಲ್ಲಿ ಕಿನ್ನಾಳ ಕಲೆಯ ಸಂಭ್ರಮ   

ಗದಗ: ನಾಗಾವಿ ಗುಡ್ಡದ ಸೆರಗಿನ 350 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿಕೊಂಡಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಶನಿವಾರ ಸಾಂಪ್ರದಾಯಿಕ ಅಲಂಕಾರದಿಂದ ಕಂಗೊಳಿಸುತ್ತಿತ್ತು. ವಿಶ್ವ ವಿದ್ಯಾಲಯಕ್ಕೆ ಪ್ರಥಮ ಘಟಿಕೋತ್ಸವದ ಸಂಭ್ರಮವಾದರೆ; ವಿದ್ಯಾರ್ಥಿಗಳ ಮೊಗದಲ್ಲಿ ಹಬ್ಬದಲ್ಲಿ ಭಾಗವಹಿಸಿದಂತಹ ಪುಳಕ ಮನೆಮಾಡಿತ್ತು.

ಬೋಳು ಪ್ರದೇಶದ ನಡುವೆ ಕಣ್ಣು ಕುಕ್ಕುವಂತೆ ಕಾಣಿಸುತ್ತಿದ್ದ ವಿಶ್ವವಿದ್ಯಾಲಯದ ಸೊಬಗಿಗೆ ಮಾರು ಹೋಗದಿರುವವರು ಕಡಿಮೆ. ಗಣ್ಯರು, ವಿದ್ಯಾರ್ಥಿಗಳನ್ನು ಸ್ವಾಗತಿಸಲು ನಿರ್ಮಿಸಿದ್ದ ಬಿದಿರು ಗೋಪುರ ಆಕರ್ಷವಾಗಿತ್ತು. ಸ್ಮೃತಿ ವನ ದಾಟಿ ಬಂದ ಅತಿಥಿಗಳೆಲ್ಲರೂ ಸಾಬರಮತಿ ಆಶ್ರಮ ಪ್ರವೇಶಿಸಿದರು. ಖಾದಿಯಿಂದ ತಯಾರಾದ ಶುಭ್ರ ಖಾದಿ ವಸ್ತ್ರ, ಹಸಿರು ಅಂಗವಸ್ತ್ರ ಹಾಗೂ ಶ್ವೇತ ವರ್ಣದ ಪಟಗ ಧರಿಸಿದ್ದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್‌.ಚಟಪಲ್ಲಿ, ಸಹ ಕುಲಾಧಿಪತಿ ಕೆ.ಎಸ್‌.ಈಶ್ವರಪ್ಪ ಹಾಗೂ ಗೌರವ ಡಾಕ್ಟರೇಟ್‌ ಪಡೆಯಲು ಬಂದಿದ್ದ ಶಾಸಕ ಎಚ್‌.ಕೆ.ಪಾಟೀಲ ಮತ್ತು ಡಾ. ಅಶೋಕ ದಳವಾಯಿ ಹಾಗೂ ಗಣ್ಯರೆಲ್ಲರೂ ಗಾಂಧಿ ಪ್ರತಿಮೆ ಎದುರಿನಲ್ಲಿ ಕುಳಿತು ಗುಂಪು ಫೋಟೊ ತೆಗೆಸಿಕೊಂಡರು. ಬಳಿಕ ಅವರೆಲ್ಲರನ್ನೂ ಅಲ್ಲಿಂದ ಸಾಂಪ್ರದಾಯಕ ರೀತಿಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು.

ಗಾಂಧಿ ಟೋಪಿ, ಬಿಳಿ ಜುಬ್ಬಾ, ಪೈಜಾಮ ಧರಿಸಿದ್ದ ವಿದ್ಯಾರ್ಥಿಗಳು ಒಂದಡೆಯಾದರೆ; ಖಾದಿ ಸೀರೆ ಹಾಗೂ ಚೂಡಿದಾರ್‌ ಮತ್ತು ಗಾಂಧಿ ಟೋಪಿ ಧರಿಸಿದ್ದ ವಿದ್ಯಾರ್ಥಿನಿಯರ ಕಣ್ಣುಗಳಲ್ಲಿ ಕನಸುಗಳು ಜೀಕುತ್ತಿದ್ದವು. ಚಿನ್ನದ ಪದಕ ಹಾಗೂ ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳ ಮೊಗದಲ್ಲಿ ಹೆಮ್ಮೆಯ ಭಾವ ತುಳುಕುತ್ತಿತ್ತು. ಒಳಭಾಗದಲ್ಲಿ ಪ್ರದರ್ಶನಗೊಂಡಿದ್ದ ಕಿನ್ನಾಳ ಕಲೆ, ಅಮೂರ್ತ ಕಲಾಕೃತಿಗಳ ಚೆಲುವು ಮನಸೆಳೆಯುವಂತಿತ್ತು.ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದ ಕನಸು ಭಿತ್ತಿ ಅದನ್ನು ನನಸು ಮಾಡಿದ ಗದಗ ಮತಕ್ಷೇತ್ರದ ಶಾಸಕ ಎಚ್‌.ಕೆ.ಪಾಟೀಲ ಅವರಿಗೆ ಸಹ ಕುಲಾಧಿಪತಿ ಕೆ.ಎಸ್‌.ಈಶ್ವರಪ್ಪ ಅವರು ‘ಗ್ರಾಮೀಣಾಭಿವೃದ್ಧಿ ಚೇತನ’ ಬಿರುದಿನ ಜತೆಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಅಂತೆಯೇ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸಿದ ಡಾ. ಅಶೋಕ ದಳವಾಯಿ ಅವರಿಗೆ ಡಿ.ಲಿಟ್‌ ಪದವಿ ನೀಡಿ ಗೌರವಿಸಲಾಯಿತು.

ADVERTISEMENT

ಬಳಿಕ 2017–19 ಮತ್ತು 2018–20ನೇ ಬ್ಯಾಚ್‌ನಲ್ಲಿ ಪ್ರಥಮ ರ‍್ಯಾಂಕ್‌ ಪಡೆದ 12 ಮಂದಿ ವಿದ್ಯಾರ್ಥಿಗಳಿಗೆ ಕೆ.ಎಚ್‌.ಪಾಟೀಲ ಪ್ರತಿಷ್ಠಾನ, ರಾಜೇಂದ್ರ ಸಿಂಗ್‌ ಹಾಗೂ ಅಬ್ದುಲ್‌ ನಜೀರ್‌ ಸಾಬ್‌ ಹೆಸರಿನಲ್ಲಿ ನೀಡುವ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ದ್ವಿತೀಯ ಮತ್ತು ತೃತೀಯ ರ‍್ಯಾಂಕ್‌ ಪಡೆದ 24 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಒಟ್ಟು 250 ಮಂದಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವಕ್ಕೆ ದೇಸಿ ರಂಗು: ಬ್ರಿಟಿಷ್‌ ಪದ್ಧತಿಯನ್ನು ಬದಿಗಿರಿಸಿ ಸಾಂಪ್ರದಾಯಕ ರೀತಿಯಲ್ಲಿ ಘಟಿಕೋತ್ಸವ ನಡೆಸಿದ್ದು ಎಲ್ಲರ ಮೆಚ್ಚುಗೆ ಪಾತ್ರವಾಯಿತು. ಖಾದಿ ದಿರಿಸುಗಳು ಘಟಿಕೋತ್ಸವ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿದ್ದವು. ವಿವಿ ಆವರಣದಲ್ಲಿ ತೆರೆಯಲಾಗಿದ್ದ ದೇಸಿ ಮಳಿಗೆಗಳು ಕೂಡ ಎಲ್ಲರ ಗಮನ ಸೆಳೆದವು. ಪ್ರಥಮ ಘಟಿಕೋತ್ಸವದ ನೀಡಿದ ವಿಶಿಷ್ಟ ಭಾವಾನುಭೂತಿಯ ಜತೆಗೆ ನವ ಪದವೀಧರರೆಲ್ಲರೂ ಹೊಸ ಕಸುಗಳನ್ನು ಭಿತ್ತುವ ಉತ್ಸಾಹದಿಂದ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.