ADVERTISEMENT

ಜಿಲ್ಲೆಯಲ್ಲಿ ಮತ್ತೆ ಐವರಿಗೆ ಕೋವಿಡ್‌

ಧಾರವಾಡ ಮೂಲದ ವ್ಯಕ್ತಿಯಿಂದ ಹರ್ತಿ ಗ್ರಾಮದ ಮೂವರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 15:08 IST
Last Updated 18 ಜೂನ್ 2020, 15:08 IST
ಮಾಸ್ಕ್‌ ದಿನಾಚರಣೆ ಅಂಗವಾಗಿ ಗುರುವಾರ ಗದಗ ನಗರದಲ್ಲಿ ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಜಾಥಾ ನಡೆಯಿತು
ಮಾಸ್ಕ್‌ ದಿನಾಚರಣೆ ಅಂಗವಾಗಿ ಗುರುವಾರ ಗದಗ ನಗರದಲ್ಲಿ ಆಶಾ ಕಾರ್ಯಕರ್ತೆಯರಿಂದ ಜಾಗೃತಿ ಜಾಥಾ ನಡೆಯಿತು   

ಗದಗ: ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದ ಇಬ್ಬರು ಮತ್ತು ಸೋಂಕಿತರೊಬ್ಬರ ಸಂಪರ್ಕಕ್ಕೆ ಬಂದ ಮೂವರು ಸೇರಿ ಐವರಿಗೆ ಗುರುವಾರ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ವರದಿಯಾದ ಒಟ್ಟು ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 58ಕ್ಕೆ ಏರಿಕೆಯಾಗಿದೆ.

ಕಲಘಟಗಿ ಮೂಲದ 37 ವರ್ಷದ ಪುರುಷ (ಪಿ–7830), ಹುಬ್ಬಳ್ಳಿಯ 23 ವರ್ಷದ ಯುವಕ (ಪಿ–7831) ಇವರಿಬ್ಬರು ಮಹಾರಾಷ್ಟ್ರದಿಂದ ರೈಲಿನಲ್ಲಿ ಜಿಲ್ಲೆಗೆ ಬಂದಿದ್ದರು. ಇಬ್ಬರನ್ನೂ ಕ್ವಾರಂಟೈನ್‌ನಲ್ಲಿ ಇರಿಸಿ, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ಇವರಿಬ್ಬರಿಗೂ ಸೋಂಕು ದೃಢಪಟ್ಟಿದೆ.

ಧಾರವಾಡ ಜಿಲ್ಲೆಯ 45 ವರ್ಷದ ಪುರುಷ (ಪಿ–6255) ಇವರ ಸಂಪರ್ಕಕ್ಕೆ ಬಂದ ಗದಗ ತಾಲ್ಲೂಕಿನ ಹರ್ತಿ ಗ್ರಾಮದ 40 ವರ್ಷದ ಪುರುಷ (ಪಿ–7832), 45 ವರ್ಷದ ಮಹಿಳೆ (ಪಿ–7833) 23 ವರ್ಷದ ಯುವಕನಲ್ಲಿ (ಪಿ–7834) ಸೋಂಕು ದೃಢಪಟ್ಟಿದೆ. ಪಿ-6255 ಇವರು ಧಾರವಾಡದಿಂದ ಹರ್ತಿ ಗ್ರಾಮದ ತಮ್ಮ ಸಂಬಂಧಿಕರ ಮನೆಗೆ ಜೂ.6ರಂದು ಬಂದಿದ್ದರು. ಅದೇ ದಿನ ಮರಳಿ ಧಾರವಾಡಕ್ಕೆ ಮರಳಿದ್ದರು.

ADVERTISEMENT

ಜೂ.12ರಂದು ಇವರಿಗೆ ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ, ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 12 ಜನರನ್ನು ಗುರುತಿಸಿ ನಿಗಾದಲ್ಲಿ ಇರಿಸಿ, ಎಲ್ಲರ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿತ್ತು.ಇದರಲ್ಲಿ ಮೂವರಲ್ಲಿ ಇದುವರೆಗೆ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಜೂ.16ರಂದು ನಾಲ್ಕು ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿತ್ತು. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಅರ್ಧಶತಕ ದಾಟಿತ್ತು. ಗುರುವಾರದ 5 ಪ್ರಕರಣಗಳು ಸೇರಿ ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸೋಂಕು ದೃಢಪಟ್ಟವರಲ್ಲಿ ಮೂರು ವರ್ಷದ ಮಗುವೂ ಸೇರಿದೆ.

ಮುಂಬೈನಿಂದ 904 ಪ್ರಯಾಣಿಕರು: ಮುಂಬೈನಿಂದ ರೈಲಿನ ಮೂಲಕ ಜೂ.18ರವರೆಗೆ ಒಟ್ಟು 904 ಪ್ರಯಾಣಿಕರು ಗದಗ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಇವರಲ್ಲಿ 343 ಜನರು ಗದಗ ಜಿಲ್ಲೆಗೆ ಸೇರಿದವರು. ಇವರಲ್ಲಿ 292 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಹಾಗೂ 51 ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಈ 343 ಜನರ ಪೈಕಿ 13 ಜನರಲ್ಲಿ ಇದುವರೆಗೆ ಕೋವಿಡ್-19 ಸೋಂಕು ಧೃಡಪಟ್ಟಿರುತ್ತದೆ. 561 ಜನರು ಬೇರೆ ಜಿಲ್ಲೆಯವರಾಗಿದ್ದು, ಅವರನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.