ADVERTISEMENT

ಕೋವಿಡ್‌| ಗದಗದಲ್ಲಿ ಮತ್ತಿಬ್ಬರು ಗುಣಮುಖ: ಜನತೆ ನಿರಾಳ

ಸಕ್ರಿಯ ಪ್ರಕರಣ 21ಕ್ಕೆ ಇಳಿಕೆ; ಸಹಜ ಸ್ಥಿತಿಗೆ ಜನಜೀವನ

​ಪ್ರಜಾವಾಣಿ ವಾರ್ತೆ
Published 31 ಮೇ 2020, 12:24 IST
Last Updated 31 ಮೇ 2020, 12:24 IST
ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಭಾನುವಾರ ಮನೆಗೆ ಮರಳಿದ ಇಬ್ಬರನ್ನು ಗದುಗಿನ ಕೋವಿಡ್‌ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಅಭಿನಂದಿಸಿದರು
ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಭಾನುವಾರ ಮನೆಗೆ ಮರಳಿದ ಇಬ್ಬರನ್ನು ಗದುಗಿನ ಕೋವಿಡ್‌ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಅಭಿನಂದಿಸಿದರು   

ಗದಗ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟು ಇಲ್ಲಿನ ಕೋವಿಡ್-19 ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಯುವಕರು ಭಾನುವಾರ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಗದುಗಿನ ಕಂಟೈನ್ಮೆಂಟ್‌ ಪ್ರದೇಶವಾದ ಗಂಜಿ ಬಸವೇಶ್ವರ ಓಣಿ ನಿವಾಸಿಗಳಾದ 17 ಮತ್ತು 16 ವರ್ಷದ (ಪಿ-1745 ಮತ್ತು ಪಿ-1795) ಯುವಕರಿಬ್ಬರು ಬಿಡುಗಡೆಯಾದವರು. ಇವರು ಗುಜರಾತ್‌ನಿಂದ ಜಿಲ್ಲೆಗೆ ಬಂದಿದ್ದ ಸೋಂಕಿತರೊಬ್ಬರ (ಪಿ-913) ದ್ವಿತೀಯ ಸಂಪರ್ಕಕ್ಕೆ ಬಂದಿದ್ದರು.

ಇವರನ್ನು ಮೇ. 22ರಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಜಿಮ್ಸ್‌) ನಿಗದಿತ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ‘ಚಿಕಿತ್ಸೆಯ ನಂತರ ಮೇ.31 ರಂದು ಜಿಮ್ಸ್‌ ಪ್ರಯೋಗಾಲಯದಲ್ಲಿ ಇವರ ಗಂಟಲು ದ್ರವವನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿ, ಇಬ್ಬರ ವರದಿಗಳೂ ನೆಗಟಿವ್ ಆಗಿದ್ದರಿಂದ ಬಿಡುಗಡೆ ಮಾಡಲಾಗಿದೆ’ ಎಂದು ಜಿಮ್ಸ್‌ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

ADVERTISEMENT

ಗುಜರಾತ್ ಪ್ರಯಾಣದ ಹಿನ್ನೆಲೆಯ ಗಂಜಿಬಸವೇಶ್ವರ ಓಣಿ ನಿವಾಸಿ 62 ವರ್ಷದ ವ್ಯಕ್ತಿಯಲ್ಲಿ (ಪಿ-913) ಮೇ 12ರಂದು ಸೋಂಕು ದೃಢಪಟ್ಟಿತ್ತು. ಮೇ.26 ರಂದು ಇವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ, ಇವರ ಸಂಪರ್ಕಕ್ಕೆ ಬಂದ ಒಟ್ಟು 11 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾದವರಿಗೆ ವೈದ್ಯರು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಮನೆಗೆ ಮರಳಿದ ನಂತರವೂ 14 ದಿನ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಇದುವರೆಗೆ 35 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ. ಇದರದಲ್ಲಿ ಒಂದು ಮರಣ ಸಂಭವಿಸಿದೆ. 13 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಮರಳಿದ್ದಾರೆ. ಸದ್ಯ ಜಿಲ್ಲೆಯಲ್ಲಿ 21 ಸಕ್ರಿಯ ಪ್ರಕರಣಗಳಿವೆ.

ಜನರ ನಿರ್ಲಕ್ಷ್ಯ: ಒಟ್ಟು 35 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿರುವ ಜಿಲ್ಲಾ ಕೇಂದ್ರದಲ್ಲೇ ಸಾರ್ವಜನಿಕರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದೆ ರಸ್ತೆಗಿಳಿಯುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಅದರಲ್ಲೂ 16 ಪ್ರಕರಣಗಳು ವರದಿಯಾಗಿರುವ ಗದುಗಿನ ಕಂಟೈನ್ಮೆಂಟ್‌ ಪ್ರದೇಶ, ಗಂಜಿಬಸವೇಶ್ವರ ಓಣಿಯಲ್ಲೇ ಜನರ ಓಡಾಟ ಹೆಚ್ಚಿದ್ದು, ಸಮುದಾಯದ ಮಟ್ಟಕ್ಕೆ ಸೋಂಕು ಹರಡುವ ಸಾಧ್ಯತೆಯನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.