ADVERTISEMENT

ವೈಪಲ್ಯ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಟೀಕೆ: ಬಸವರಾಜ ಬೊಮ್ಮಾಯಿ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ ಸಂಸದ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:25 IST
Last Updated 28 ಜುಲೈ 2024, 15:25 IST
ಗಜೇಂದ್ರಗಡದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಗೃಹ ಕಚೇರಿಯ ಸಭಾ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು
ಗಜೇಂದ್ರಗಡದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಗೃಹ ಕಚೇರಿಯ ಸಭಾ ಭವನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು   

ಗಜೇಂದ್ರಗಡ: ‘ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಮಳೆಯಿಂದ ಬಿದ್ದ ಮನೆಗಳಿಗೆ, ರೈತರಿಗೆ ಪರಿಹಾರ ನೀಡಿಲ್ಲ. ರಸ್ತೆ ನಿರ್ಮಾಣ ಮಾಡಲು ಹಣವಿಲ್ಲ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರದಿಂದ ಏನೂ ಬಂದಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಚಟ ಕಾಂಗ್ರೆಸ್‌ನವರಿಗೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಪಟ್ಟಣದಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ ಗೃಹ ಕಚೇರಿಯಲ್ಲಿ ಭಾನುವಾರ ಹಾವೇರಿ–ಗದಗ ಲೋಕಸಭಾ ಮತಕ್ಷೇತ್ರದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಮತದಾರರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ತಂದಾಗ ರಾಜ್ಯ ಸರ್ಕಾರದ ಸಹಕಾರ ಅಗತ್ಯ. ಕೇಂದ್ರದಿಂದ ಅನುದಾನ ತರಬಹುದು. ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದ ಇಚ್ಛಾಶಕ್ತಿ ಅವಶ್ಯ. ಎಲ್ಲಿ ರಸ್ತೆಗಳು ನಿರ್ಮಾಣವಾಗುತ್ತವೆಯೋ ಅಲ್ಲಿ ಅಭಿವೃದ್ಧಿ ಆಗುತ್ತದೆ. ರಾಜ್ಯ ಸರ್ಕಾರದ ಕೊರತೆ ಬಜೆಟ್‌ ನೀಗಿಸಲು ಕೇಂದ್ರ ಸರ್ಕಾರ ₹1,631 ಕೋಟಿ ಈ ವರ್ಷ ನೀಡಿದೆ. ‌ಅಲ್ಲದೆ ಕಳೆದ 10 ವರ್ಷಗಳಲ್ಲಿ 1 ಲಕ್ಷ ಕಿ.ಮೀ. ಹೊಸ ಹೆದ್ದಾರಿ ನಿರ್ಮಿಸಿದ ಹಾಗೂ ರಾಜ್ಯದಲ್ಲಿರುವ ರೈಲ್ವೆಯಲ್ಲಿ ಶೇ 75ರಷ್ಟು ವಿದ್ಯುದೀಕರಣ ಮಾಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ’ ಎಂದರು.

ADVERTISEMENT

ʼಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ನಿಜವಾಗಿಯೂ ಅಪಚಾರ ಮಾಡಿದ್ದು ಕಾಂಗ್ರೆಸ್‌. ಎಸ್.ಸಿ, ಎಸ್‌.ಟಿ ಮೀಸಲು ಹಣ ಗುಳುಂ ಮಾಡುವುದರ ಜೊತೆಗೆ, ₹25 ಸಾವಿರ ಕೋಟಿ ಅವರ ಹಣವನ್ನು ಬೇರೆಡೆ ವಿನಿಯೋಗಿಸಿ ರಾಜ್ಯ ಸರ್ಕಾರ ಸಂವಿಧಾನಕ್ಕೆ ಅಪಚಾರ ಮಾಡಿದೆ’ ಎಂದು ಆರೋಪಿಸಿದರು.

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ‘ನಮ್ಮ ಸಂಸದರು ಮಾದರಿಯಾಗಬೇಕು ಎಂದು ಬಯಸುತ್ತೇವೆ. ಆದರೆ ಮಂದಿರ, ಸಮುದಾಯ ಭವನಕ್ಕೆ ಅನುದಾನ ಕೇಳಲು ಬಂದರೆ ಹೇಗೆ ಸಂಸದರು ಮಾದರಿಯಾಗುತ್ತಾರೆ. ಸಂಸದರು ಶೇ 50 ಅನುದಾನವನ್ನು ಸರ್ಕಾರಿ ಶಾಲಾ ಅಭಿವೃದ್ಧಿಗೆ, ಇನ್ನುಳಿದ ಅನುದಾನವನ್ನು ಜನತೆಯ ಬೇಡಿಕೆಗಳಿಗೆ ಬಳಸಲು ಮುಂದಾಗಬೇಕು’ ಎಂದರು.

ವಿವಿಧ ಸಮಾಜಗಳ ಮುಖಂಡರು, ರೈತರು ಸಂಸದರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಇಂದಿರಾ ತೇಲಿ, ಬಿ.ಎಂ.ಸಜ್ಜನರ, ನಿಂಗಪ್ಪ ಕೆಂಗಾರ ಮಾತನಾಡಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರಡಗಿ, ಮುಖಂಡರಾದ ಎಂ.ಎಸ್. ಕರಿಗೌಡ್ರ, ಶಿವಾನಂದ ಮಠದ, ಬಿ.ವಿ. ಕಂಬಳ್ಯಾಳ, ಎಸ್.ಎಸ್.ವಾಲಿ, ಉಮೇಶ ಮಲ್ಲಾಪೂರ, ನೀಲಪ್ಪ ಗುರಿಕಾರ, ಭಾಸ್ಕರಸಾ ರಾಯಬಾಗಿ, ಅಮರೇಶ ಬಳಿಗೇರ, ಬಸವರಾಜ ಬಂಕದ, ಸುಭಾಸ ಮ್ಯಾಗೇರಿ, ರಾಜೇಂದ್ರ ಘೋರ್ಪಡೆ, ಜಿ.ಪಿ.ಪಾಟೀಲ, ಉಮೇಶ ಚನ್ನುಪಾಟೀಲ ಇದ್ದರು.

ರೋಣ ಮತಕ್ಷೇತ್ರದಿಂದಲೇ ಬದಲಾವಣೆ

‘ಬರುವ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳಾಗುವ ವಿಶ್ವಾಸ ನನಗಿದೆ. ಅದು ರೋಣ ಮತಕ್ಷೇತ್ರದಿಂದ ಪ್ರಾರಂಭವಾಗಲಿದೆ. ರೋಣ ಮತಕ್ಷೇತ್ರ ರಾಜಕೀಯ ಪ್ರಜ್ಞೆ ಇರುವ ತಾಲ್ಲೂಕು. ಎಲ್ಲಿ ರಾಜಕೀಯ ಪ್ರಜ್ಞೆ ಇರುತ್ತದೆಯೋ ಅಲ್ಲಿ ತೀವ್ರ ಪೈಪೋಟಿ ಇರುತ್ತದೆ. ನಿಮ್ಮ ಹಕ್ಕುಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಕೆಲಸ ಮಾಡುವ ಅರಿವು ನನಗಿದೆ. ರೋಣ ಭಾಗದಲ್ಲಿ ಅಭಿವೃದ್ಧಿ ಆಗಬೇಕಿರುವುದು ಸಾಕಷ್ಟಿದೆ. ಕ್ಷೇತ್ರಕ್ಕೆ ಏನು ಬೇಕು. ಏನು ಬೇಡ ಎಂದು ತಿಳಿದಿರುವ ಯುವ ಜನರ ತಂಡವಿದೆ. ಹೀಗಾಗಿ ಅವರು ಹೇಳಿದ್ದನ್ನು ಮಾಡಿದರೆ ತಾಲ್ಲೂಕು ಅಭಿವೃದ್ಧಿ ಹೊಂದುತ್ತದೆ ಎಂಬುದು ತಿಳಿದಿದೆ. ಅದನ್ನು ನಾನು ಮಾಡುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.