ADVERTISEMENT

ಲಕ್ಷ್ಮೇಶ್ವರ | 'ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 14:32 IST
Last Updated 21 ಜುಲೈ 2023, 14:32 IST
ಲಕ್ಷ್ಮೇಶ್ವರದ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಶುಕ್ರವಾರ ಮಹಿಳೆಯರು ಮುಗಿಬಿದ್ದಿದ್ದರು
ಲಕ್ಷ್ಮೇಶ್ವರದ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸಲು ಶುಕ್ರವಾರ ಮಹಿಳೆಯರು ಮುಗಿಬಿದ್ದಿದ್ದರು   

ಲಕ್ಷ್ಮೇಶ್ವರ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಜುಲೈ 19ರಂದು ಚಾಲನೆ ದೊರೆತಿದ್ದು, ಯೋಜನೆಯ ಫಲಾನುಭವಿ ಆಗಲು ಅರ್ಜಿ ಸಲ್ಲಿಸಲು ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಕಳೆದ ಮೂರು ದಿನಗಳಿಂದ ಮಳೆಯನ್ನು ಲೆಕ್ಕಿಸದೆ ಮಹಿಳೆಯರು ಅರ್ಜಿ ಸಲ್ಲಿಸಲು ಸರ್ಕಾರಿ ಕಚೇರಿಗಳ ಎದುರು ಮುಗಿಬೀಳುತ್ತಿದ್ದಾರೆ.

ಲಕ್ಷ್ಮೇಶ್ವರದಲ್ಲಿ ಎರಡು ಕಡೆ ಕರ್ನಾಟಕ ಒನ್ ಮತ್ತು ಪುರಸಭೆ ವತಿಯಿಂದ ಎಪಿಎಂಸಿ ಹತ್ತಿರದ ಕೆಎಚ್‍ಡಿಸಿ ಕಟ್ಟಡ, ತಾಲ್ಲೂಕು ಪಂಚಾಯ್ತಿ ಕಚೇರಿ ಮತ್ತು ಪುರಸಭೆ ಆವರಣದಲ್ಲಿನ ಕೊಠಡಿ ಸೇರಿದಂತೆ ಒಟ್ಟು ಐದು ಕಡೆ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

ಸರ್ಕಾರ ಯೋಜನೆಯನ್ನು ಘೋಷಣೆ ಮಾಡುವುದನ್ನೇ ಕಾಯುತ್ತಿದ್ದ ಸಾರ್ವಜನಿಕರು ಅರ್ಜಿ ಸಲ್ಲಸಲು ನಾ ಮುಂದು ತಾ ಮುಂದು ಎಂದು ಅಲೆದಾಡುತ್ತಿದ್ದಾರೆ. ಮಹಿಳೆಯರು ಕೈಯಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಮತ್ತಿತರ ದಾಖಲೆಗಳನ್ನು ಹಿಡಿದುಕೊಂಡು ಬಂದರೆ ಪುರುಷರು ಕಚೇರಿಗಳಿಗೆ ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಿದ್ದಾರೆ.

ADVERTISEMENT

ಅರ್ಜಿ ಸಲ್ಲಿಸುವವರು ಮೊದಲು ತಮ್ಮ ಪಡಿತರ ಚೀಟಿಯ ನಂಬರನ್ನು ಸರ್ಕಾರ ಸೂಚಿಸಿದ ಮೊಬೈಲ್‍ಗೆ ಎಸ್‍ಎಂಎಸ್ ಕಳುಹಿಸಬೇಕು. ಆನಂತರ ಅಲ್ಲಿಂದ ಅರ್ಜಿ ಸಲ್ಲಿಸುವ ದಿನಾಂಕ ಬಂದ ಮೇಲೆ ಸೂಚಿಸಿದ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ.

ಆದರೆ ಬಹಳಷ್ಟು ಮಹಿಳೆಯರು ಮತ್ತು ಪುರುಷರು ಅನಕ್ಷರಸ್ಥರು ಎಸ್‍ಎಂಎಸ್ ಕಳುಹಿಸಲು ಆಗುತ್ತಿಲ್ಲ. ಕಂಡ ಕಂಡವರನ್ನು ಎಸ್‍ಎಂಎಸ್ ಕಳುಹಿಸುವಂತೆ ಅಂಗಲಾಚುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.

ಅರ್ಜಿ ಸಲ್ಲಿಸುವ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಸಾರ್ವಜನಿಕರು ಬೇಸತ್ತಿದ್ದಾರೆ. ಸರ್ಕಾರ ಸರ್ಜಿ ಸಲ್ಲಿಸುವುದನ್ನು ಇನ್ನಷ್ಟು ಸರಳಗೊಳಿಸಿ ಸರ್ವರ್ ಸಮಸ್ಯೆ ನಿವಾರಿಸಿದರೆ ಸಾರ್ವಜನಿಕರ ಆತಂಕ ದೂರ ಆಗಲಿದೆ.

‘ಜಿಲ್ಲಾಡಳಿತ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸುವುದನ್ನು ಸರಳಗೊಳಿಸಬೇಕು. ಸರ್ವರ್ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಬೇಕು’ ಎಂದು ಜೆಡಿಎಸ್‍ ಮುಖಂಡ ಪದ್ಮರಾಜ ಪಾಟೀಲ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.