ಗದಗ: ‘ವಾಟ್ಸ್‌ಆ್ಯಪ್ ಮೂಲಕ ಬರುವ ಪಿಎಂ ಕಿಸಾನ್, ಬ್ಯಾಂಕ್ ಕೆವೈಸಿ ಅಪ್‌ಡೇಟ್ ಮತ್ತು ವೆಡ್ಡಿಂಗ್ ಕಾರ್ಡ್ ಹೆಸರಿನಲ್ಲಿ ಬರುವ ಎಪಿಕೆ ಫೈಲ್‌ಗಳನ್ನು ಯಾರೂ ಡೌನ್‌ಲೋಡ್ ಮಾಡಬಾರದು’ ಎಂದು ಸೈಬರ್ ಕ್ರೈಂ ಠಾಣೆಯ ಇನ್‌ಸ್ಪೆಕ್ಟರ್ ಸಿದ್ಧಾರೂಢ ಗಡಾದ ಹೇಳಿದರು.
ನಗರದ ಜಿಲ್ಲಾಡಳಿತದ ಭವನದಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಹಾಗೂ ಸಿಇಎನ್ ಠಾಣೆ ಸಹಯೋಗದಲ್ಲಿ ನಡೆದ ಸುರಕ್ಷಿತ ಅಂತರ್ಜಾಲ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವಂಚಕರು ಪೊಲೀಸ್ ಅಧಿಕಾರಿ, ಟೆಲಿಫೋನ್ ಅಧಿಕಾರಿ ಮತ್ತು ಪಾರ್ಸಲ್, ಕೊರಿಯರ್ ಹೆಸರಿನಲ್ಲಿ ಕರೆಮಾಡಿ ಕಾನೂನುಬಾಹಿರ ವಸ್ತುಗಳನ್ನು ಹೊರದೇಶಕ್ಕೆ ರವಾನೆ ಮಾಡಿದ್ದೀರಿ, ಅದಕ್ಕಾಗಿ ನಿಮ್ಮನ್ನು ವಿಡಿಯೊ ಕಾಲ್ ಮೂಲಕ ವಿಚಾರಣೆ ಮಾಡಿ, ಡಿಜಿಟಲ್ ಅರೆಸ್ಟ್ ಮಾಡಲಾಗುವುದು ಎಂದು ಹೆದರಿಸುತ್ತಾರೆ. ಈ ಬಗ್ಗೆ ಎಚ್ಚರವಾಗಿರಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಡಿಜಿಟಲ್ ಅರೆಸ್ಟ್ ಎಂಬುದೇ ಇಲ್ಲ’ ಎಂದು ತಿಳಿಸಿದರು.
‘ಕಡಿಮೆ ಅವಧಿಯಲ್ಲಿ ಟ್ರೇಡಿಂಗ್ ಮಾಡಿ ಹಣ ದ್ವಿಗುಣ ಮಾಡಿಕೊಡುವುದಾಗಿ ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಮೂಲಕ ಬರುವ ಜಾಹೀರಾತುಗಳನ್ನು ನಂಬಿ ಹಣ ಹೂಡಿಕೆ ಮಾಡಬೇಡಿ. ಅಪರಿಚಿತರೊಂದಿಗೆ ನಿಮ್ಮ ಬ್ಯಾಂಕಿಂಗ್ ಮಾಹಿತಿ ಹಂಚಿಕೊಳ್ಳಬೇಡಿ’ ಎಂದು ತಿಳಿಸಿದರು.
ಸೈಬರ್ ಠಾಣೆ ಪೊಲೀಸ್ ಸಿಬ್ಬಂದಿ ಎಂ.ಎಸ್. ತಿಪ್ಪಾಪೂರ ಮಾತನಾಡಿ, ‘ಅಪರಿಚಿತ ನಂಬರ್‌ನಿಂದ ಬರುವ ಎಸ್.ಎಂ.ಎಸ್, ವಾಟ್ಸ್‌ಆ್ಯಪ್ ಹಾಗೂ ಇತರ ಮೆಸೆಂಜರ್‌ಗಳ ಮೂಲಕ ಸ್ವೀಕರಿಸುವ ಸಂದೇಶ, ಇ–ಮೇಲ್‌ಗಳಲ್ಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಗೂಗಲ್‌ನಲ್ಲಿ ಕಂಡುಬರುವ ಗ್ರಾಹಕಸೇವೆ ಸಂಪರ್ಕ ಸಂಖ್ಯೆ, ಇ–ಮೇಲ್ ವಿಳಾಸ ಇತ್ಯಾದಿಗಳನ್ನು ಬಳಸುವ ಮೊದಲು ಸತ್ಯಾಸತ್ಯತೆ ಪರಿಶೀಲಿಸಿ’ ಎಂದು ಎಚ್ಚರಿಸಿದರು.
‘ಆನ್‌ಲೈನ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಅನಧಿಕೃತ ಅಪ್ಲಿಕೇಶನ್‌ಗಳನ್ನು ಬಳಸಬಾರದು. ಆನ್‌ಲೈನ್ ಮೂಲಕ ಕೆಲಸ ಕೊಡಿಸುವುದಾಗಿ ಹಣದ ಬೇಡಿಕೆ ಇಟ್ಟಲ್ಲಿ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬೇಡಿ. ನಿಮ್ಮ ಬ್ಯಾಂಕ್ ಖಾತೆ, ಸಾಮಾಜಿಕ ಜಾಲತಾಣದ ಖಾತೆಗಳಿಗೆ ಕಠಿಣ ಪಾಸ್‌ವರ್ಡ್‌ಗಳನ್ನು ಬಳಸಿ, ಮಕ್ಕಳಿಗೆ ಸಂಬಂಧಪಟ್ಟ ಅಶ್ಲೀಲ ಚಿತ್ರ, ದೃಶ್ಯಾವಳಿಗಳನ್ನು ಆನ್‌ಲೈನ್‌ನಲ್ಲಿ ಹುಡುಕುವುದು ಅಪರಾಧ. ಇಂತಹ ಅಶ್ಲೀಲ ಚಿತ್ರ, ದೃಶ್ಯಾವಳಿಗಳು ಕಂಡುಬಂದಲ್ಲಿ www.cybertipline.org ಆನ್‌ಲೈನ್ ಪೊರ್ಟಲ್‌ಗೆ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.
ಸತೀಶ್, ಆನಂದ್ ಸಿಂಗ್ ದೊಡ್ಡಮನಿ, ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.