
ನರೇಗಲ್: ಠಾಣಾ ವ್ಯಾಪ್ತಿಗೆ ಒಳಪಡುವ ಗ್ರಾಮಗಳ ದಲಿತರ ಜೊತೆಯಲ್ಲಿ ಪೊಲೀಸ್ ಇಲಾಖೆಯು ಸದಾ ಇರುತ್ತದೆ. ಸಮುದಾಯದ ಕುಂದುಕೊರತೆ ನಿವಾರಿಸಲು ಹಾಗೂ ಕಾನೂನು ಅರಿವು ಜಾಗೃತಿಗಾಗಿ ಇಂತಹ ಸಭೆಗಳು ಸಹಕಾರಿ ಆಗುತ್ತವೆ ಎಂದು ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.
ರೋಣ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಯ ಆಶ್ರಯದಲ್ಲಿ ನರೇಗಲ್ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಪರಿಶಿಷ್ಟರಿಗಾಗಿ ಬುಧವಾರ ಆಯೋಜನೆ ಮಾಡಲಾಗಿದ್ದ ಕಾನೂನು ಅರಿವು ಹಾಗೂ ಸರ್ಕಾರಿ ಸೌಲಭ್ಯದ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪರಿಶಿಷ್ಟರಿಗೆ ಯಾವುದೇ ರೀತಿಯ ಸಮಸ್ಯೆಗಳು ಇದ್ದರೆ ನಮ್ಮ ಗಮನಕ್ಕೆ ತರಬೇಕು. ಸರ್ಕಾರದ ಯೋಜನೆಗಳು ಪ್ರತಿ ದಲಿತರ ಮನೆಗಳಿಗೆ ತಲುಪಬೇಕು ಅದರ ಸದುಪಯೋಗದಿಂದ ಅಭಿವೃದ್ದಿ ಕಡೆಗೆ ಸಾಗಬೇಕು. ಕಾನೂನು ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲನೆ ಮಾಡಬೇಕು. ವೈಯಕ್ತಿಕ ಹಿತಾಸಕ್ತಿಗೆ ಹಾಗೂ ಅನಾವಶ್ಯಕವಾಗಿ ಪೈಪೋಟಿ ನಡೆಸುವುದು ಸಾಮಾಜದ ಸ್ವಾಸ್ಥ್ಯ ಕೆಡಿಸುವುದು ಸೇರಿದಂತೆ ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ಅಂತಹವರ ವಿರುದ್ದ ಕಠಿಣಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ರೋಣ ತಾಲ್ಲೂಕು ತಹಶೀಲ್ದಾರ್ ನಾಗರಾಜ್ ಕೆ ಮಾತನಾಡಿ, ಸರ್ಕಾರದ ವತಿಯಿಂದ ಬರುವ ಯೋಜನೆಗಳ ಸವಲತ್ತು ಪಡೆದುಕೊಳ್ಳಲು ಗ್ರಾಮೀಣ ಭಾಗದ ಜನರು ಅದರಲ್ಲೂ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಎಂದರು. ತಳ ಸಮುದಾಯದ ಧ್ವನಿ ಇಲ್ಲದ ಜನರಿಗೆ ನ್ಯಾಯಕ್ಕಾಗಿ ತಾಲ್ಲೂಕು ಆಡಳಿತ ಸದಾ ಸಿದ್ದವಿದೆ ಎಂದರು.
ಮಹರ್ಷಿ ವಾಲ್ಮೀಕಿ ನಾಯಕ ಸಂಘದ ರೋಣ ತಾಲ್ಲೂಕು ಅಧ್ಯಕ್ಷ ಬಸವರಾಜ ತಳವಾರ ಮಾತನಾಡಿ, ಮಾನವೀಯತೆ ಗುಣಗಳನ್ನು ಹಾಗೂ ಸಹಕಾರದ ಗುಣಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಗ್ರಾಮದಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ. ಈ ದಿಸೆಯ ವಾತಾವರಣವನ್ನು ಬೆಳೆಸಲು ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲಲಿತಾ ರಾಥೋಡ, ರೋಣ ಇಒ ಚಂದ್ರಶೇಖರ ಕಂದಕೂರ, ರೋಣ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೀತಾ ಆಲೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎ. ಎನ್. ಕಾಂಬೋಗಿ, ಬಸವರಾಜ ವೀರಾಪುರ, ರಮೇಶ ಕಡೆಮನಿ, ಹನುಮಂತಪ್ಪ ದ್ವಾಸಲ, ಬಸವರಾಜ ಪಲ್ಲೇದ, ಡಿ. ಎಚ್. ಪರಂಗಿ, ಜಿ. ಬಿ. ಕೊಣ್ಣೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.