ADVERTISEMENT

ಸರಳ ಆಚರಣೆಗೆ ಅಗತ್ಯದ ಕ್ರಮವಹಿಸಿ

ಕನ್ನಡ ರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 16:21 IST
Last Updated 19 ಅಕ್ಟೋಬರ್ 2020, 16:21 IST

ಗದಗ: ಜಿಲ್ಲಾಡಳಿತದಿಂದ ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಇಲಾಖೆಯ ಅಧಿಕಾರಿಗಳು ಅಗತ್ಯದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಗದಗ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವ ಆಚರಣೆಯ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕನ್ನಡ ರಾಜ್ಯೋತ್ಸವದಂದು ಮತ್ತು ಅದರ ಹಿಂದಿನ ದಿವಸ ಸರ್ಕಾರಿ ಇಲಾಖೆಗಳ ಕಟ್ಟಡಗಳ ಮೇಲೆ ದೀಪಾಲಂಕಾರ ಮಾಡಬೇಕು. ನಗರದ ಕೆ.ಎಚ್.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆಯುವ ಸಾರ್ವಜನಿಕ ಧ್ವಜಾರೋಹಣವನ್ನು ಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಲಿದ್ದಾರೆ. ಅಂದು ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಬೇಕು’ ಎಂದು ಹೇಳಿದರು.

ADVERTISEMENT

‘ಕೋವಿಡ್-19 ನಿಯಂತ್ರಣದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದಲ್ಲಿ ಸುರಕ್ಷಿತ ಅಂತರ ಕಾಪಾಡುವುದು ಮುಖ್ಯವಾಗಿದ್ದು, ಆರೋಗ್ಯ ಇಲಾಖೆಯವರು ಕಾರ್ಯಕ್ರಮಕ್ಕೆ ಬರುವವರಿಗೆ ಕಡ್ಡಾಯವಾಗಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಜರ್‌ ವ್ಯವಸ್ಥೆ ಮಾಡಬೇಕು. ಗದಗ ಬೆಟಗೇರಿ ನಗರಸಭೆಯವರು ಕಾರ್ಯಕ್ರಮದ ಸ್ಥಳದ ಸ್ವಚ್ಛತೆ ಕುರಿತು ನಿಗಾ ವಹಿಸಬೇಕು’ ಎಂದು ಸೂಚಿಸಿದರು.

‘ಕಾರ್ಯಕ್ರಮದ ಸ್ಥಳದಲ್ಲಿ ಅಂಬುಲೆನ್ಸ್, ಅಗ್ನಿಶಾಮಕ ದಳದ ವ್ಯವಸ್ಥೆಗೆ ಕ್ರಮ ವಹಿಸಬೇಕು. ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನ.1ರಂದು ಸನ್ಮಾನಿಸುವ ಕುರಿತು ಸಾರ್ವಜನಿಕ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಸಭೆಯಲ್ಲಿ ಕನ್ನಡ ರಾಜ್ಯೋತ್ಸವದ ದಿವಸ ಪರೇಡ್, ಆಮಂತ್ರಣ ಪತ್ರಿಕೆ ಮುದ್ರಣ, ಪೆಂಡಾಲ್‌ ವ್ಯವಸ್ಥೆ, ಸೂಕ್ತ ಧ್ವನಿವರ್ಧಕದ ವ್ಯವಸ್ಥೆ, ಗಣ್ಯವ್ಯಕ್ತಿಗಳಿಗೆ ಲಘು ಉಪಾಹಾರದ ವ್ಯವಸ್ಥೆ, ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಮಾಡುವ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್‍ ಕುಮಾರ್ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.