ನರೇಗಲ್: ಪಟ್ಟಣದ ಅಗ್ರಿ ಸ್ವರಾಜ್ ರೈತ ಉತ್ಪಾದಕರ ಸಂಘ ಹಾಗೂ ನರೇಗಲ್ ರೈತ ಸಂಪರ್ಕ ಕೇಂದ್ರದ ವತಿಯಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಸಿದ್ಧತೆ ಅಂಗವಾಗಿ ಐಸಿಎಆರ್- ಹುಲಕೋಟಿಯ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಪಟ್ಟಣದ ಗ್ರಾಮದೇವತೆ ದೇವಸ್ಥಾನದಲ್ಲಿ ಈಚೆಗೆ ನಡೆಸಲಾಯಿತು.
ಅಭಿಯಾನದಲ್ಲಿ ಬೀಜೋಪಚಾರ, ಸುಧಾರಿತ ತಳಿಗಳು, ತೋಟಗಾರಿಕೆ ಬೆಳೆಗಳು, ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಕೃಷಿ ಯಂತ್ರೋಪಕರಣ, ಸಮಗ್ರ ಕೃಷಿ ಪದ್ಧತಿ ಕುರಿತು ರೈತರಿಗೆ ತರಬೇತಿ ನೀಡಲಾಯಿತು. ಮುಂಗಾರು ಬೆಳೆಗಳ ಬೇಸಾಯ ಕ್ರಮಗಳು, ಕೀಟ ಹಾಗೂ ರೋಗ ನಿರ್ವಹಣೆ ಬಗ್ಗೆ ಮಾಹಿತಿ ಕೈಪಿಡಿ ಮತ್ತು ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಯೋಜನೆಗಳ ಹಸ್ತಪ್ರತಿಗಳನ್ನು ವಿತರಿಸಲಾಯಿತು.
ಹಿರಿಯ ಕೃಷಿ ವಿಜ್ಞಾನಿ ಸುಧನ ಮನ್ಕನಿ ಮಾತನಾಡಿ, ‘ಮುಂಗಾರು ಹಂಗಾಮಿನ ಬೆಳೆಗಳಲ್ಲಿ ಆಧುನಿಕ ಕೃಷಿ, ಬೆಳೆಗಳ ವೈವಿಧ್ಯತೆ, ಕೃಷಿ ಯಂತ್ರೋಪಕರಣ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಅಭಿಯಾನ ಮುಖ್ಯ ಪಾತ್ರ ವಹಿಸುತ್ತದೆ’ ಎಂದು ಹೇಳಿದರು.
ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಪ್ರವೀಣ ಕರಿಕಟ್ಟಿ ಮಾತನಾಡಿ, ‘ಕೃಷಿ ಸಮುದಾಯಕ್ಕೆ ಸಾವಯವ, ನೈಸರ್ಗಿಕ ಕೃಷಿಯಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವಲ್ಲಿ ಎರೆಹುಳುಗಳು ಪ್ರಮುಖ ಪಾತ್ರವಹಿಸುತ್ತವೆ. ರೈತರು ಮಣ್ಣಿನ ಫಲವತ್ತತೆ ಕಾಪಾಡಿಕೊಲ್ಳಬೇಕು’ ಎಂದರು. ಎಸ್. ಕೆ. ಮದ್ಲಾಪುರ, ರೈತ ಮುಖಂಡ ಶರಣಪ್ಪ ಧರ್ಮಾಯತ, ರೈತರು, ವಿವಿಧ ಇಲಾಖೆಯ ಸಿಬ್ಬಂದಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.