ADVERTISEMENT

ಧರ್ಮಸ್ಥಳ: ವಿರೋಧಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 5:28 IST
Last Updated 24 ಆಗಸ್ಟ್ 2025, 5:28 IST
ಮುಂಡರಗಿ ತಾಲ್ಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವಿರೋಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ಮೂಲಕ ಮನವಿ ಸಲ್ಲಿಸಿದರು
ಮುಂಡರಗಿ ತಾಲ್ಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡುತ್ತಿರುವ ವಿರೋಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ಮೂಲಕ ಮನವಿ ಸಲ್ಲಿಸಿದರು   

ಮುಂಡರಗಿ: ‘ಧರ್ಮಸ್ಥಳ ಒಂದು ಪವಿತ್ರ ಧಾರ್ಮಿಕ ಕ್ಷೇತ್ರವಾಗಿದ್ದು, ಅದರ ವಿರುದ್ಧ ಆಧಾರ ರಹಿತವಾಗಿ ಅಪಪ್ರಚಾರ ಮಾಡುತ್ತಿರುವ ವಿರೋಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿ ತಾಲ್ಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಇಲ್ಲಿನ ಹೆಸ್ಕಾಂ ಕಚೇರಿ ಬಳಿಯ ಗಣೇಶ ದೇವಸ್ಥಾನದಿಂದ ಶಾಸಕ ಡಾ.ಚಂದ್ರು ಲಮಾಣಿ ಅವರ ನೇತೃತ್ವದಲ್ಲಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಕೊಪ್ಪಳ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.

ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ, ‘ರಾಜ್ಯ ಸರ್ಕಾರವು ಧರ್ಮಸ್ಥಳ ವಿರೋಧಿಗಳ ಗುಂಪಿಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದು, ಯಾರೋ ಅನಾಮಧೇಯ ನೀಡಿದ ದೂರಿನನ್ವಯ ಎಸ್‌ಐಟಿ ರಚಿಸಿ ಹಿಂದೂಗಳ ಭಾವನೆಗಳನ್ನು ಕೆರಳಿಸಿದೆ’ ಎಂದು ಆರೋಪಿಸಿದರು.

ADVERTISEMENT

ದಶಕದಿಂದ ರಾಜ್ಯದಲ್ಲಿ ಹಿಂದೂ ಧರ್ಮದ ಮೇಲೆ ವ್ಯವಸ್ಥಿತ ಪಿತೂರಿ ನಡೆಯುತ್ತಿದ್ದು, ಪಿತೂರಿಯ ಹಿಂದೆ ಬಹುದೊಡ್ಡ ಜಾಲವಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಪ್ರಕರಣದ ಹಿಂದಿರುವ ದುಷ್ಟರಿಗೆ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಆನಂದಗೌಡ ಪಾಟೀಲ, ಕೆ.ವಿ. ಹಂಚಿನಾಳ, ಕೊಟ್ರೇಶ ಅಂಗಡಿ, ಎಸ್.ವಿ. ಪಾಟೀಲ, ರವಿ ಉಪ್ಪಿನಬೆಟಗೇರಿ, ಬಸವರಾಜ ಬಿಳಿಮಗ್ಗದ, ಪ್ರಶಾಂತ ಗುಡದಪ್ಪನವರ, ಮಂಜುನಾಥ ಇಟಗಿ, ರಜನಿಕಾಂತ ದೇಸಾಯಿ, ನಾಗೇಶ ಹುಬ್ಬಳ್ಳಿ, ಪವನ ಮೇಟಿ, ಅನಂತ ಚಿತ್ರಗಾರ, ಮೈಲಾರೆಪ್ಪ ಕಲಕೇರಿ, ನಿರ್ಮಲಾ ಕೊರ್ಲಹಳ್ಳಿ, ಜ್ಯೋತಿ ಹಾನಗಲ್ಲ, ಪವಿತ್ರಾ ಕಲ್ಲಕುಟಿಗರ, ಅರುಣಾ ಪಾಟೀಲ, ಪುಷ್ಪಾ ಉಕ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.