ADVERTISEMENT

ಇಲಾಖಾವಾರು ಬೇಡಿಕೆ ಸಲ್ಲಿಸಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶ್ರೀಧರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:03 IST
Last Updated 17 ನವೆಂಬರ್ 2025, 5:03 IST
ಸಿ.ಎನ್‌.ಶ್ರೀಧರ್‌
ಸಿ.ಎನ್‌.ಶ್ರೀಧರ್‌   

ಗದಗ: ‘ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗೆ ಅವಶ್ಯಕವಾಗಿರುವ ಬೇಡಿಕೆಗಳನ್ನು ಪಟ್ಟಿ ಮಾಡಿ, ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿವಿಧ ವಿಷಯಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮುಂದಿನ ವಾರ ಜಿಲ್ಲಾ ಯೋಜನಾ ಸಮಿತಿ ಸಭೆ ನಡೆಯಲಿದ್ದು, ಆ ಸಭೆಗೆ ಸಂಬಂಧಿತ ಎಲ್ಲ ಇಲಾಖೆಯವರು ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆಗಾಗಿ ಪಟ್ಟಿ ಸಲ್ಲಿಸಬೇಕಿದೆ. ವಿವಿಧ ಇಲಾಖೆ ಅಧಿಕಾರಿಗಳು ತಾಲ್ಲೂಕುವಾರು ಜನಸಂಖ್ಯೆಗೆ ಅನುಗುಣವಾಗಿ ಸದ್ಯ ಲಭ್ಯವಿರುವ ಅನುದಾನ ಹೊರತುಪಡಿಸಿ ಹೆಚ್ಚಿನ ಅಭಿವೃದ್ಧಿ ಕಾರ್ಯಕ್ಕಾಗಿ ಬೇಕಾದ ಅನುದಾನದ ವಿವರ ಮತ್ತು ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಬೇಕು ಎಂದು ಸೂಚಿಸಿದರು. 

ADVERTISEMENT

ಈ ಸಂದರ್ಭದಲ್ಲಿ 2026-27ನೇ ಸಾಲಿಗೆ ಪಂಚಾಯತ್‌ರಾಜ್ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಕರಡು ವಾರ್ಷಿಕ ಕರಡು ಆಯವ್ಯಯ, 2026-27ನೇ ಸಾಲಿಗೆ ಕೆಳಹಂತದಿಂದ ಜಿಲ್ಲಾ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿಕೆ, 2025-26ನೇ ಸಾಲಿನ ಅಕ್ಟೋಬರ್ ಅಂತ್ಯದವರೆಗಿನ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸಲಾಯಿತು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್.ಮುಂಡರಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎ.ಎ.ಕಂಬಾಳಿಮಠ ಇದ್ದರು.

ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿರುವ ಸಮಸ್ಯೆ ಹಾಗೂ ಬೇಕಾಗಿರುವ ಅನುದಾನ ಕುರಿತು ಚರ್ಚಿಸಿ ವಿವರ ಸಲ್ಲಿಸಬೇಕು.
–ಸಿ.ಎನ್‌.ಶ್ರೀಧರ್‌, ಜಿಲ್ಲಾಧಿಕಾರಿ ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.