ADVERTISEMENT

ರೋಗಿಗಳಿಗೆ ತಟ್ಟಿದ ವೈದ್ಯರ ಪ್ರತಿಭಟನೆ ಬಿಸಿ

ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಿಂದ ಮನವಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 13:05 IST
Last Updated 17 ಜೂನ್ 2019, 13:05 IST
ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ರೋಗಿಗಳ ದಟ್ಟಣೆ ಕಂಡುಬಂತು
ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ರೋಗಿಗಳ ದಟ್ಟಣೆ ಕಂಡುಬಂತು   

ಗದಗ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಜಿಲ್ಲೆಯಲ್ಲಿ ಶನಿವಾರ ಖಾಸಗಿ ಆಸ್ಪತ್ರೆಗಳ ವೈದ್ಯರು ಭಾರತೀಯ ವೈದ್ಯಕೀಯ ಸಂಘದ (ಐ.ಎಂ.ಎ) ನೇತೃತ್ವದಲ್ಲಿ ಹೊರ ರೋಗಿಗಳ ಚಿಕಿತ್ಸಾ ಸೌಲಭ್ಯ (ಒಪಿಡಿ) ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ವೈದ್ಯರ ಮುಷ್ಕರದ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಸಮರ್ಪಕ ಮಾಹಿತಿ ಇರಲಿಲ್ಲ. ಹೀಗಾಗಿ ಚಿಕಿತ್ಸೆಗಾಗಿ ಸಮೀಪದ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಬಂದಿದ್ದ ರೋಗಿಗಳು ತೊಂದರೆ ಅನುಭವಿಸಿದರು. ಮುಂಗಾರು ಪ್ರಾರಂಭವಾಗಿರುವುದರಿಂದ ಕೆಮ್ಮು, ನೆಗಡಿ, ಜ್ವರ, ಕಫದಿಂದ ಬಳಲುತ್ತಿದ್ದ ಮಕ್ಕಳನ್ನು ಕರೆದುಕೊಂಡು ಗ್ರಾಮಾಂತರ ಪ್ರದೇಶದಿಂದ ಸಾಕಷ್ಟು ಜನರು ಖಾಸಗಿ ಆಸ್ಪತ್ರೆಗೆ ಬಂದಿದ್ದರು.

ಹುಲಕೋಟಿ, ಡಂಬಳ, ಬಳಗಾನೂರು, ಮಲ್ಲಸಮುದ್ರ ಸೇರಿ ಗ್ರಾಮಾಂತರ ಪ್ರದೇಶಗಳಿಂದ ಬಂದಿದ್ದ ಕೆಲವರು, ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿರುವುದನ್ನು ಕಂಡು, ನಂತರ ಜಿಲ್ಲಾ ಕೇಂದ್ರದಿಂದ 5 ಕಿ.ಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡರು. ಜಿಲ್ಲಾ ಆಸ್ಪತ್ರೆ, ನಗರದ ದುಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆ, 4 ತಾಲ್ಲೂಕು ಆಸ್ಪತ್ರೆಗಳು, 3 ನಗರ ಆರೋಗ್ಯ ಕೇಂದ್ರಗಳು, 2 ಸಮುದಾಯ ಆರೋಗ್ಯ ಕೇಂದ್ರಗಳು, 39 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆಯುಷ್ ಆಸ್ಪತ್ರೆಯಲ್ಲಿ ರೋಗಿಗಳ ದಟ್ಟಣೆ ಕಂಡುಬಂತು.

ADVERTISEMENT

ಜಿಲ್ಲಾ ಕೇಂದ್ರ ಗದುಗಿನಲ್ಲೇ 40ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿದ್ದು, ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ‘ಒಪಿಡಿ’ ಸ್ಥಗಿತಗೊಂಡಿದ್ದವು. ಗದಗ ಹೊರತುಪಡಿಸಿ ಇನ್ನುಳಿದ ತಾಲ್ಲೂಕು ಕೇಂದ್ರಗಳಲ್ಲಿ ವೈದ್ಯರ ಪ್ರತಿಭಟನೆಯ ಬಿಸಿ ಅಷ್ಟಾಗಿ ತಟ್ಟಲಿಲ್ಲ. ಸ್ಕ್ಯಾನಿಂಗ್, ಎಕ್ಸ್‌ರೇ, ರಕ್ತ ತಪಾಸಣೆ ಕೇಂದ್ರಗಳು ಸಹ ಸ್ಥಗಿತಗೊಂಡಿದ್ದವು. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ಚಿಕಿತ್ಸೆ ಮುಂದುವರಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಪೂರ್ವನಿಗದಿತ ಎಲ್ಲ ನಮೂನೆಯ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿತ್ತು.

ನರಗುಂದ, ಲಕ್ಷ್ಮೇಶ್ವರ, ಮುಂಡರಗಿ, ರೋಣದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಬಾಗಿಲು ತೆರೆದಿದ್ದವು. ಹೀಗಾಗಿ ಹೊರರೋಗಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳಾಗಲಿಲ್ಲ. ಒಪಿಡಿ ಸ್ಥಗಿತಗೊಂಡಿದ್ದರೂ, ತುರ್ತು ವೈದ್ಯಕೀಯ ಸೇವೆ ಅಗತ್ಯ ಇದ್ದ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳ ವೈದ್ಯರು ಚಿಕಿತ್ಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.