ನರಗುಂದ: ಅತಿಥಿ ಉಪನ್ಯಾಸಕರನ್ನು ಕಡೆಗಣಿಸಬೇಡಿ ಎಂದು ಪದವಿ ಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ತಾಲ್ಲೂಕು ಮುಖಂಡ ಬಿ.ಸಿ. ಹನಮಂತಗೌಡ್ರ ಸರ್ಕಾರಕ್ಕೆ ಆಗ್ರಹಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಯ ಉದ್ದೇಶದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪುನಃಶ್ಚೇತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಆದರೆ ಈ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಿಗೆ ಅವಕಾಶ ನೀಡದಿರುವುದು ವಿಷಾದನೀಯ. ಇದು ಸರಿಯಾದ ಕ್ರಮ ಅಲ್ ಎಂದರು.
ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರನ್ನು ಹೊರಗಿಟ್ಟು ಇಲಾಖೆ ನಡೆಸುತ್ತಿರುವ ಈ ಕಾರ್ಯಕ್ರಮಕ್ಕೆ ಯಾವುದೇ ಅರ್ಥವಿಲ್ಲ. ಬೋಧನೆಗೆ ಬೇಕು, ಉಳಿದ ಕಾರ್ಯಕ್ರಮ ಗಳಿಗೆ ಬೇಡವೆಂದರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಫಲಿತಾಂಶ ಸುಧಾರಣಾ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಿಗೂ ಅವಕಾಶ ಕಲ್ಪಿಸಬೇಕು. ಜೊತೆಗೆ ಕಾಯಂ ಉಪನ್ಯಾಸಕರಿಗೆ ನೀಡುವ ದಿನದ ಹಾಗೂ ಪ್ರಯಾಣ ಭತ್ಯೆಯನ್ನು ಅತಿಥಿ ಉಪನ್ಯಾಸಕರಿಗೂ ಒದಗಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಆರ್ ಕೆ ಐನಾಪೂರ, ಗಿರೀಶ ಅರಶಿನಗೋಡಿ, ಮಡಿವಾಳರ, ನಾಗೇಶ ಮುಗಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.