ADVERTISEMENT

ಕುಡುಕರ ಹಾವಳಿಗೆ ಕಂಗಾಲಾದ ಮಹಿಳೆಯರು

ಅಕ್ರಮ ಮದ್ಯ ಮಾರಾಟ: ಅಬಕಾರಿ ಇಲಾಖೆ ವಿರುದ್ಧ ಮಾಡಲಗೇರಿ ಮಹಿಳೆಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:49 IST
Last Updated 23 ಡಿಸೆಂಬರ್ 2025, 2:49 IST
ರೋಣ ಅಬಕಾರಿ ಉಪನಿರೀಕ್ಷಕ ಎ.ಎಸ್.ಹೊಸಮನಿ ಅವರಿಗೆ ಮಾಡಲಗೇರಿ ಗ್ರಾಮಸ್ಥರು ಸಾರಾಯಿ ಅಕ್ರಮ ಮಾರಾಟ ತಡೆಗಟ್ಟಲು ಮನವಿ ಸಲ್ಲಿಸಿದರು.
ರೋಣ ಅಬಕಾರಿ ಉಪನಿರೀಕ್ಷಕ ಎ.ಎಸ್.ಹೊಸಮನಿ ಅವರಿಗೆ ಮಾಡಲಗೇರಿ ಗ್ರಾಮಸ್ಥರು ಸಾರಾಯಿ ಅಕ್ರಮ ಮಾರಾಟ ತಡೆಗಟ್ಟಲು ಮನವಿ ಸಲ್ಲಿಸಿದರು.   

ರೋಣ: ತಾಲ್ಲೂಕಿನಾದ್ಯಂತ ಹೆಚ್ಚುತ್ತಿರುವ ಅಕ್ರಮ ಮದ್ಯ ಮಾರಾಟದ ಕುರಿತು ಈಗಾಗಲೇ ತಾಲ್ಲೂಕಿನ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಸೋಮವಾರ ಮಾಡಲಗೇರಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ತಹಶೀಲ್ದಾರ್, ಪೊಲೀಸ್ ಠಾಣೆ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸೇನೆ ಕರ್ನಾಟಕ ಸಂಘದ ರಾಜ್ಯ ವಕ್ತಾರ ಮಹದೇವಗೌಡ ಭಾವಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಲ್ಲಿ ಅಬಕಾರಿ ಇಲಾಖೆಯ ಅಧಿಕಾರಿಗಳು ವಿಫಲರಾಗಿದ್ದು ಗ್ರಾಮದಲ್ಲಿ ಎಗ್ಗಿಲ್ಲದೆ  ಮಾರಾಟವಾಗುತ್ತಿದೆ ಎಂದರು.

ಗ್ರಾಮದಲ್ಲಿ ಸುಲಭವಾಗಿ ಸಾರಾಯಿ ಸಿಗುತ್ತಿರುವುದರಿಂದ ಯುವಕರು ಚಟಕ್ಕೆ ಬಿದ್ದು, ಗ್ರಾಮದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಲು ಕಾರಣರಾಗಿದ್ದಾರೆ. ಕುಡಿದು ಗಲಾಟೆ ಮಾಡುವುದು, ಮಹಿಳೆಯರಿಗೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸುವ ಪ್ರಕರಣಗಳು ಹೆಚ್ಚುತ್ತಿದ್ದು ಮಾಡಲಗೇರಿ ಗ್ರಾಮದ 9 ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಸರ್ಕಾರಿ ಶಾಲೆಯ ಪಕ್ಕದಲ್ಲಿಯೇ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಈ ಮಾರಾಟಗಾರರು ಚಿಕ್ಕ ಮಕ್ಕಳು ಹೋದರೂ ಸಾರಾಯಿ ಕೊಡುತ್ತಿದ್ದು ಈ ಕುರಿತು ಹಲವು ಬಾರಿ ಅಬಕಾರಿ ಇಲಾಖೆಗೆ ದೂರು ನೀಡಿದರು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗ್ರಾಮದ ಹಿರಿಯ ಮಹಿಳೆ ಶಂಕ್ರಮ್ಮ ಭೀಮನಗೌಡ್ರ ಮಾತನಾಡಿ, ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಹೆಚ್ಚಾಗಿದ್ದು ಯುವಕರು ಮದ್ಯದ ಚಟಕ್ಕೆ ಬಿದ್ದು ಅಕಾಲಿಕ ಮರಣ ಹೊಂದುತ್ತಿದ್ದು ಮಕ್ಕಳನ್ನು ಕಳೆದುಕೊಂಡ ಹಲವು ತಾಯಂದಿರು  ಇಲ್ಲಿ ಬಂದು ಅಧಿಕಾರಿಗಳಿಗೆ ಗ್ರಾಮದಲ್ಲಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಲು ಮನುವಿ ಮಾಡಿದ್ದಾರೆ.

ಕ್ರಮ ಕೈಗೊಳ್ಳದಿದ್ದರೆ ಅಬಕಾರಿ ಇಲಾಖೆಯ ಕಚೇರಿ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುತ್ತೇವೆ. ಕುಡಿತದ ಚಟಕ್ಕೆ ದಾಸರಾಗಿರುವ ಗ್ರಾಮದ ಪುರುಷರು ಮನೆಯಲ್ಲಿನ ಒಡವೆ, ಪಾತ್ರೆ, ಧಾನ್ಯಗಳನ್ನು ಮಾರಾಟ ಮಾಡುತ್ತಿದ್ದು, ಮಹಿಳೆಯರು ನೆಮ್ಮದಿಯ ಜೀವನ ನಡೆಸದಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಣ್ಣೀರು ಸುರಿಸುತ್ತಾ ತಮ್ಮ ಅಸಮಾಧಾನ ಹೊರಹಾಕಿದರು.

ಉಪವಾಸ ಕುಳಿತುಕೊಳ್ಳುವುದು ನಿಶ್ಚಿತ

ಮಾಡಲಗೇರಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದಾಗಿ ಬಹುತೇಕ ಪುರುಷರು ಕುಡಿತದ ಚಟಕ್ಕೆ ದಾಸರಾಗಿದ್ದು ಮನೆಯಲ್ಲಿರುವ ಕಾಳು ಕಡಿಗಳನ್ನು ಸಹ ಸಾರಾಯಿ ಅಂಗಡಿಗೆ ಕೊಟ್ಟು ಕುಡಿಯುತ್ತಿದ್ದಾರೆ. ಮನೆಯಲ್ಲಿ ಮಾಡಿಟ್ಟ ರೊಟ್ಟಿ ಪಲ್ಯ ಸಹಿತ ಬಿಡದೆ ಸಾರಾಯಿ ಅಂಗಡಿಗೆ ಕೊಟ್ಟು ಕುಡಿಯುತ್ತಿದ್ದು ತಕ್ಷಣವೇ ಗ್ರಾಮದ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ ರೋಣ ಅಬಕಾರಿ ಕಚೇರಿ ಮುಂದೆ ಉಪವಾಸ ಕುಳಿತುಕೊಳ್ಳುವುದು ನಿಶ್ಚಿತ ಮಾಡಲಗೇರಿ ಗ್ರಾಮದ ಮಹಿಳೆ ಶಂಕ್ರವ್ವ ಸಿರಗುಂಪಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.