ADVERTISEMENT

ಪಠ್ಯ ಪರಿಷ್ಕರಣೆ ಅಪಾಯಕಾರಿ: ಸೂಳಿಭಾವಿ ಆತಂಕ

​ಪ್ರಜಾವಾಣಿ ವಾರ್ತೆ
Published 20 ಮೇ 2022, 5:16 IST
Last Updated 20 ಮೇ 2022, 5:16 IST

ಗದಗ: ‘ಜಾತ್ಯತೀತ ಮನೋಧರ್ಮವನ್ನು ವಿದ್ಯಾರ್ಥಿದಿಸೆಯಲ್ಲಿ ಬೆಳೆಸುವಂಥ ತತ್ವದ ಪಠ್ಯ ಬೇಡವಾಗಿದ್ದು, ಅದಕ್ಕಾಗಿಯೇ ಸರ್ಕಾರ ಪಠ್ಯ ಬದಲಿಸುವ ಕೆಲಸಕ್ಕೆ ಕೈ ಹಾಕಿದೆ’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಟೀಕಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ‘ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಹಾಗೂ ಅವರ ಅಭ್ಯುದಯಕ್ಕೆ ಬೇಕಿರುವ ಸಾಮಾಜಿಕ, ಆರ್ಥಿಕ, ಮನಃಶಾಸ್ತ್ರದ ನೆಲೆಗಟ್ಟಿನಲ್ಲಿ ಪಠ್ಯ ಪರಿಷ್ಕರಣೆ ಆಗಬೇಕು. ಆದರೆ, ಈಗ ಮತೀಯವಾದ ತತ್ವದ ಹಿನ್ನೆಲೆಯಲ್ಲಿ ಪಠ್ಯ ಪರಿಷ್ಕರಣೆ ಮಾಡುತ್ತಿರುವುದನ್ನು ನಾವು ತೀವ್ರವಾಗಿ ವಿರೋಧಿಸಬೇಕಿದೆ’ ಎಂದರು.

‘ಸ್ವಾತಂತ್ರ್ಯಕ್ಕಾಗಿ ಜೀವ ಬಲಿದಾನ ಮಾಡಿದ ಭಗತ್‍ಸಿಂಗ್‍ ಅಂಥವರನ್ನು 9, 10ನೇ ತರಗತಿಯ ಪಠ್ಯದಿಂದ ಕೈಬಿಟ್ಟು, ಆರ್‌ಎಸ್‌ಎಸ್‌ನ ಹೆಡಗೇವಾರ ಅವರ ಭಾಷಣವನ್ನು ಸೇರ್ಪಡೆ ಮೂಲಕ ರಾಜ್ಯದ ಬಿಜೆಪಿ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಕೋಮುವಾದ ಬಿತ್ತುವ ಕೆಲಸಕ್ಕೆ ಮುಂದಾಗಿದೆ’ ಎಂದು ಆರೋಪಿಸಿದರು.

ADVERTISEMENT

‘ಸರ್ಕಾರ ಭಗತ್‍ಸಿಂಗ್, ನಾರಾಯಣಗುರು, ಎ.ಎನ್.ಮೂರ್ತಿ, ಪಿ.ಲಂಕೇಶ, ಪೆರಿಯಾರ್‌ ಅವರನ್ನು ಹೊರಗಿಡುವ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ಅಪಾಯಕಾರಿ. ದ್ವೇಷ ಬಿತ್ತುವ ಶಿಕ್ಷಣ ನೀತಿ ರಾಜ್ಯಕ್ಕೆ ಮಾರಕ. ವಚನಕಾರರು ಕರ್ನಾಟಕದ ಅಸ್ಮಿತೆ. ಆದರೆ, ವಚನಗಳನ್ನೂ ಹೊರಗಿಡುವ ಯತ್ನ ನಡೆಯುತ್ತಿದೆ. ಸರ್ಕಾರ ಭಗತ್‍ಸಿಂಗ್, ಬಸವಣ್ಣನವರ ಜಾತ್ಯತೀತತೆ ತಲುಪದಂತೆ ಹುನ್ನಾರ ನಡೆಸಿದೆ. ಈ ಮೂಲಕ ಸಂವಿಧಾನವನ್ನೇ ಅಮಾನ್ಯ ಮಾಡುವ ಕೆಲಸ ಮಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಅಶೋಕ ಬರಗುಂಡಿ ಮಾತನಾಡಿ, ‘ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತಾಗಲು ಸಂವಿಧಾನವೇ ಬುನಾದಿ. ಬಹುತ್ವದ ಭಾರತದಲ್ಲಿ ಇಂತಹ ನಿರ್ಧಾರಗಳುಜನರ ದಿಕ್ಕು ತಪ್ಪಿಸುತ್ತವೆ. ಆದ್ದರಿಂದ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಅನುಯಾಯಿಗಳೆಲ್ಲರೂ ಸೇರಿ ತಾಲ್ಲೂಕು, ಜಿಲ್ಲಾಮಟ್ಟದಲ್ಲಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದರು.

‘ಬಸವಣ್ಣನ ಹೆಸರಿನಲ್ಲಿ ಅನುದಾನ ನೀಡಿ, ಬಸವ ತತ್ವವನ್ನು ಕೊಲ್ಲುವ ಯತ್ನ ನಡೆದಿದೆ. ಸದ್ಯದ ಪಠ್ಯ ಪರಿಷ್ಕರಣೆ ಮಕ್ಕಳ ಮನಸ್ಸನ್ನು ಹಾಳು ಮಾಡುವಂತಿದೆ. ಈ ಶಿಕ್ಷಣ ನೀತಿ ಬದಲಾಗಿ ಪರಸ್ಪರರಲ್ಲಿ ಸಾಮರಸ್ಯ ಮೂಡಿಸುವ ಬುದ್ಧ, ಬಸವ, ಅಂಬೇಡ್ಕರ್ ಅನುಸರಿಸುವ ನೀತಿ ರೂಪಿಸಬೇಕು’ ಎಂದು ಅವರು ಆಗ್ರಹಿಸಿದರು.

‌ಮುತ್ತು ಬಿಳೆಯಲಿ, ಶೇಖಣ್ಣ ಕವಳಿಕಾಯಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.