ADVERTISEMENT

ಬಾಲ ಕಾರ್ಮಿಕತೆ ನಿರ್ಮೂಲನೆಗೆ ಪ್ರಯತ್ನ ಅವಶ್ಯ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದಲ್ಲಿ ಸಿ.ಎಸ್.ಶಿವನಗೌಡ್ರ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 16:24 IST
Last Updated 12 ಜೂನ್ 2025, 16:24 IST
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು
ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು   

ಗದಗ: ‘ಶಿಕ್ಷಣದಿಂದ ವಂಚಿತಗೊಂಡು ದುಡಿಮೆಯಲ್ಲಿ ತೊಡಗಿರುವ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಘಟಿತರಾಗಿ ಪ್ರಯತ್ನಿಸಬೇಕಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್.ಶಿವನಗೌಡ್ರ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕುಟುಂಬದಲ್ಲಿನ ಬಡತನ, ಅನಕ್ಷರತೆ, ಶಿಕ್ಷಣದ ಮಹತ್ವದ ಕುರಿತು ಅರಿವಿಲ್ಲದಿರುವುದು, ವಲಸೆ ಹೋಗುವುದು, ತೀವ್ರತರಹದ ಕಾಯಿಲೆಯಿಂದ ಬಳಲುತ್ತಿರುವ ಪೋಷಕರು, ಅಸ್ಪೃಶ್ಯತೆ ಹೀಗೆ ಅನೇಕ ಕಾರಣಗಳಿಂದ ಮಕ್ಕಳು ಶಾಲೆಗೆ ಹೋಗದೇ ಕೆಲಸಕ್ಕೆ ಹೋಗಿ ಬಾಲಕಾರ್ಮಿಕರಾಗುತ್ತಾರೆ. ಮಕ್ಕಳ ರಕ್ಷಣೆ ಹಾಗೂ ಅವರಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದರು.

‘ಬಾಲ ಕಾರ್ಮಿಕ ಪದ್ಧತಿಯಿಂದ ಆಗುವ ದುಷ್ಪರಿಣಾಮ ಕುರಿತು ಪೋಷಕರಲ್ಲಿ ಅರಿವು ಮೂಡಿಸಿ, ಬಾಲ ಕಾರ್ಮಿಕತೆಯನ್ನು ನಿರ್ಮೂಲನೆ ಮಾಡಬೇಕು. ಮಕ್ಕಳಿಗೆ ಅವರ ಹಕ್ಕುಗಳ ಕುರಿತು ತಿಳಿವಳಿಕೆ ನೀಡಬೇಕು. ತಂದೆ ತಾಯಿಗಳು ತಮ್ಮ ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಬೇಕು. ಬಾಲ ಕಾರ್ಮಿಕತೆ ಕಂಡು ಬಂದಲ್ಲಿ ಅಥವಾ ಮಕ್ಕಳಿಗೆ ಏನಾದರೂ ತೊಂದರೆಯಾದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಸಂಪರ್ಕಿಸಬೇಕು’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಭರತ್ ಎಸ್., ಡಿಎಸ್‌ಪಿ ಮುರ್ತುಜಾ ಖಾದ್ರಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಜಯದೇವಿ ಕವಲೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮೆಹಬೂಬ ತುಂಬರಮಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಪದ್ಮಾವತಿ ಜಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ರಫೀಕಾ ಹಳ್ಳೂರ, ಕಾರ್ಮಿಕ ನಿರೀಕ್ಷಕರು ಇದ್ದರು.

ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಸಂದೇಶ ಪಾಟೀಲ ಸ್ವಾಗತಿಸಿದರು. ಎಂ.ಎ. ಯರಗುಡಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಮಿಕ ಕಾಯ್ದೆ 1986ರನ್ವಯ ಎಲ್ಲ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ
– ಸಿ.ಎಸ್‌.ಶಿವನಗೌಡ್ರ ನ್ಯಾಯಾಧೀಶ
ಪ್ರತಿ ಮಗುವಿಗೂ ಕಡ್ಡಾಯ ಶಿಕ್ಷಣ ಒದಗಿಸಬೇಕು. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ಮಕ್ಕಳಿಗೆ ಉದ್ಯೋಗ ಆಧಾರಿತ ಶಿಕ್ಷಣ ರೂಪಿಸಬೇಕು
– ಎಂ.ಎ.ನಾಯಕ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ

‘ಬಾಲ ಕಾರ್ಮಿಕ ಪದ್ಧತಿಯ ದುಷ್ಟರಿಣಾಮದ ಅರಿವು ಮೂಡಿಸಿ’

‘ಬಾಲ ಕಾರ್ಮಿಕತೆಗೆ ಅಸಹಾಯಕತೆ ಮುಖ್ಯ ಕಾರಣವಾಗಿದೆ’ ಎಂದು ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್‌ ಹೇಳಿದರು. ‘ಅರಿವೇ ಗುರು’ ಎಂಬ ನಾಣ್ನುಡಿಯಂತೆ ಮಕ್ಕಳಲ್ಲಿ ಅರಿವು ಮೂಡಿಸಿ ಅನ್ಯಾಯದ ವಿರುದ್ಧ ಹೋರಾಡುವ ಶಕ್ತಿ ಬೆಳೆಸಬೇಕು. ಸರ್ಕಾರವು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಲವಾರು ಸೌಲಭ್ಯಗಳನ್ನು ಜಾರಿಗೆ ತಂದಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯ. ಮಕ್ಕಳು ಶಿಕ್ಷಣದಿಂದ ವಂಚಿತರಾದರೆ ಎಲ್ಲ ಸೌಲಭ್ಯಗಳಿಂದ ಅವರು ವಂಚಿತರಾಗದಂತೆಯೇ ಆಗುತ್ತದೆ. ಬಾಲ ಕಾರ್ಮಿಕ ಪದ್ಧತಿಯಿಂದ ಆಗುವ ದುಷ್ಪರಿಣಾಮಗಳ ಕುರಿತು ನಮ್ಮ ಸುತ್ತಮುತ್ತಲಿನವರಿಗೆ ಅರಿವು ಮೂಡಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.