ADVERTISEMENT

ಮುಕ್ತ ಮತದಾನಕ್ಕೆ ಸಕಲ ಸಿದ್ಧತೆ

ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ: ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 3:09 IST
Last Updated 28 ಅಕ್ಟೋಬರ್ 2020, 3:09 IST
ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಚುನಾವಣೆ ಸಿದ್ಧತೆ ಪರಿಶೀಲಿಸಿದರು
ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಚುನಾವಣೆ ಸಿದ್ಧತೆ ಪರಿಶೀಲಿಸಿದರು   

ಗದಗ: ‘ಬುಧವಾರ (ಅ.28) ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ವೇಳೆ ಮುಕ್ತ, ನಿಷ್ಪಕ್ಷಪಾತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

‘ಕೊರೊನಾ ಸೋಂಕು ನಿಯಂತ್ರಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಮತಗಟ್ಟೆಗಳಲ್ಲಿ ಮತದಾರರ ಮಧ್ಯೆ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗಿದೆ’ ಎಂದು ಹೇಳಿದ್ದಾರೆ.

‘ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ ಜಿಲ್ಲೆಯಾದ್ಯಂತ ಅ.28ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಂತೆ, ಜಾತ್ರೆ, ಉತ್ಸವಗಳನ್ನು ರದ್ದುಪಡಿಸಲಾಗಿದೆ. ನಿಗದಿತ ಸಮಯಕ್ಕೆ ಮತದಾನ ಪ್ರಕ್ರಿಯೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಮತಗಟ್ಟೆಗಳಲ್ಲಿ ಸೂಕ್ತ ವ್ಯವಸ್ಥೆಯ ಜೊತೆಗೆ
ಅಗತ್ಯವಿರುವ ಆಸನಗಳ ವ್ಯವಸ್ಥೆಕಲ್ಪಿಸಲಾಗಿದೆ. ಮತಗಟ್ಟೆಗಳಲ್ಲಿ ಕೋವಿಡ್ ಮುಕ್ತ ವಾತಾವರಣ ನಿರ್ಮಿಸಲಾಗಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬಹುದು’ ಎಂದು ತಿಳಿಸಿದ್ದಾರೆ.

ADVERTISEMENT

ಜಿಲ್ಲೆಯಲ್ಲಿರುವ ಮತಗಟ್ಟೆಗಳು: ಗದಗ- ಬೆಟಗೇರಿ ನಗರದ ಮುನ್ಸಿಪಲ್ ಜೂನಿಯರ್‌ ಕಾಲೇಜು, ಜೆ.ಸಿ.ಪ್ರೌಢಶಾಲೆ, ತಹಶೀಲ್ದಾರ್ ಕಚೇರಿ, ಗದಗ ತಾಲ್ಲೂಕಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ಕೋಟುಮಚಗಿ, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ಲಕ್ಕುಂಡಿ, ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹುಲಕೋಟಿ, ಪಟ್ಟಣ ಪಂಚಾಯಿತಿ ಮುಳಗುಂದ.

ಮುಂಡರಗಿ ನಗರದ ಮಿನಿ ವಿಧಾನಸೌಧದ ನೆಲ ಮಹಡಿಯ ತಹಶೀಲ್ದಾರ್ ಕಚೇರಿ ಮತ್ತು ಪಡಸಾಲೆ. ನರಗುಂದ ಪಟ್ಟಣದ ತಹಶೀಲ್ದಾರ್ ಕಚೇರಿ, ನರಗುಂದ ತಾಲ್ಲೂಕಿನ ಗ್ರಾಮ ಪಂಚಾಯಿತಿ ಸಭಾಭವನ ಕೊಣ್ಣೂರು, ರೋಣ ಪಟ್ಟಣದ ಹಳೆ ತಾಲ್ಲೂಕು ಕಚೇರಿ ಪುರಸಭೆ ಕಾರ್ಯಾಲಯ, ರೋಣ ತಾಲ್ಲೂಕಿನ ಎಸ್.ವಿ. ಜೂನಿಯರ್‌ ಕಾಲೇಜು ಬೆಳವಣಿಕೆ, ಎಪಿಎಂಸಿ ಕಚೇರಿ ಹೊಳೆಆಲೂರ.

ಗಜೇಂದ್ರಗಡ ಪಟ್ಟಣದ ಎಪಿಎಂಸಿ ಮಾರುಕಟ್ಟೆ, ರೈತ ಭವನ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ನರೇಗಲ್, ಶಿರಹಟ್ಟಿ ಪಟ್ಟಣದ ತಹಶೀಲ್ದಾರ್ ಕಚೇರಿ, ಶಿರಹಟ್ಟಿ ತಾಲ್ಲೂಕಿನ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆ ಬೆಳ್ಳಟ್ಟಿ, ಲಕ್ಷ್ಮೇಶ್ವರ ಪಟ್ಟಣದ ಮುನ್ಸಿಪಲ್ ಕಾರ್ಪೋರೇಷನ್.

ತಾಲ್ಲೂಕುವಾರು ಮತದಾರರ ವಿವರ

ಜಿಲ್ಲೆಯಾದ್ಯಂತ ಒಟ್ಟು 29 ಮತಗಟ್ಟೆಗಳಿದ್ದು, ಗದಗ ತಾಲ್ಲೂಕಿನಲ್ಲಿ 7,711, ಮುಂಡರಗಿ 1,318, ನರಗುಂದ 1,176, ರೋಣ 1,512, ಗಜೇಂದ್ರಗಡ 2,122, ಶಿರಹಟ್ಟಿ 1,063 ಹಾಗೂ ಲಕ್ಷ್ಮೇಶ್ವರ 1,076 ಸೇರಿ ಪುರುಷರು 10,979, ಮಹಿಳೆಯರು 4,998 ಸೇರಿ ಜಿಲ್ಲೆಯಲ್ಲಿ ಒಟ್ಟು 15,978 ಮತದಾರರು ಇದ್ದಾರೆ.

ಪೊಲೀಸ್ ಬಿಗಿ ಭದ್ರತೆ

ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಯಶಸ್ವಿಗಾಗಿ ಪಿಆರ್‌ಒ, ಎಪಿಆರ್‌ಒ ಮತ್ತು ಎಂಒ ಸೇರಿ ಜಿಲ್ಲೆಯಲ್ಲಿ ಒಟ್ಟು 185 ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅದರಂತೆ 9 ಜನ ಸೆಕ್ಟರ್ ಅಧಿಕಾರಿಗಳು, ತಾಲ್ಲೂಕಿಗೆ ಒಂದರಂತೆ 7ಫ್ಲೈಯಿಂಗ್ ಸ್ಕ್ವಾಡ್ ತಂಡ ರಚಿಸಲಾಗಿದ್ದು, 21 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ವಿಎಸ್‍ಟಿಯಲ್ಲಿ 7 ಹಾಗೂ ವಿವಿಟಿಯಲ್ಲಿ 14 ಜನರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ಜರುಗಿಸಲು ಸೂಕ್ತ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.