
ಗದಗ: ಮನೆಯಲ್ಲಿ ಬುದ್ಧಿ ಹೇಳಿದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಎಂಜಿನಿಯರಿಂಗ್ ಫೈನಲ್ ಇಯರ್ ವಿದ್ಯಾರ್ಥಿನಿ ಚಂದ್ರಿಕಾ ನಡುವಿನಮನಿ (21) ಇಲ್ಲಿನ ಭೀಷ್ಮ ಕೆರೆಯಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾಳೆ.
ಚಂದ್ರಿಕಾ ಮೂಲತಃ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದ ನಿವಾಸಿ. ಆಕೆ ನಗರದ ಸಂಭಾಪುರ ರಸ್ತೆಯ ಲಕ್ಷ್ಮೀ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಗೆಳತಿಯರ ಜೊತೆ ವಾಸವಾಗಿದ್ದಳು. ಸ್ನೇಹಿತೆಯರ ಜೊತೆ ಪ್ರವಾಸ ಹೋಗಿದ್ದಳು. ಆದರೆ ಪ್ರವಾಸ ಹೋಗಿರುವ ವಿಚಾರ ಮನೆಯಲ್ಲಿ ಯಾರಿಗೂ ಹೇಳಿರಲಿಲ್ಲ. ಆ ವಿಚಾರ ಮನೆಯಲ್ಲಿ ಗೊತ್ತಾದಾಗ ಅವರು ಕರೆ ಮಾಡಿ ಓದುವುದು ಬಿಟ್ಟು, ಕಾಲೇಜಿಗೂ ಹೋಗದೇ, ಮನೆಯಲ್ಲಿ ಕೂಡ ಹೇಳದೇ ಏಕೆ ಪ್ರವಾಸ ಹೋಗಿದ್ದು ಎಂದು ಕೇಳಿ ಚೆನ್ನಾಗಿ ಬೈದು ಬುದ್ಧಿವಾದ ಹೇಳಿದ್ದರು ಎನ್ನಲಾಗಿದೆ. ಇದರಿಂದ ಬೇಸರ ಮಾಡಿಕೊಂಡಿದ್ದ ಆಕೆ ಶನಿವಾರ ರಾತ್ರಿ 1.30ರ ಸುಮಾರಿಗೆ ಭೀಷ್ಮ ಕೆರೆಗೆ ಹಾರಿದ್ದಾಳೆ. ಭಾನುವಾರ ಶವ ಪತ್ತೆ ಆಗಿದೆ.
ಸ್ಥಳಕ್ಕೆ ಶಹರ ಪೊಲೀಸ್ ಠಾಣೆ ಸಿಪಿಐ ಎಲ್.ಕೆ. ಜೂಲಕಟ್ಟಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ವಿದ್ಯಾರ್ಥಿನಿಯ ಮೃತ ದೇಹವನ್ನು ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.