ADVERTISEMENT

ತೋಟಗಾರಿಕೆ: ‘ಕಳಕಪ್ಪ’ನ ಕೈತುಂಬಾ ಆದಾಯ!

ಹನಿ ನೀರಾವರಿ ಪದ್ಧತಿಯಡಿ ಮಾವು, ಚಿಕ್ಕು, ಪೇರಲ ಬೆಳೆಯುತ್ತಿರುವ ರೈತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 11:31 IST
Last Updated 18 ಡಿಸೆಂಬರ್ 2018, 11:31 IST
ಮಾವು, ಪೇರಲ ಸಸಿಗಳ ನಡುವೆ ರೈತ ಕಳಕಪ್ಪ ಬಡಿಗೇರ (ಎಡಚಿತ್ರ) ಹನಿ ನೀರಾವರಿಗಾಗಿ, ತೋಟದ ನಡುವೆ ನಿರ್ಮಿಸಿಕೊಂಡಿರುವ ಸಿಮೆಂಟ್‌ ತೊಟ್ಟಿ
ಮಾವು, ಪೇರಲ ಸಸಿಗಳ ನಡುವೆ ರೈತ ಕಳಕಪ್ಪ ಬಡಿಗೇರ (ಎಡಚಿತ್ರ) ಹನಿ ನೀರಾವರಿಗಾಗಿ, ತೋಟದ ನಡುವೆ ನಿರ್ಮಿಸಿಕೊಂಡಿರುವ ಸಿಮೆಂಟ್‌ ತೊಟ್ಟಿ   

ಗಜೇಂದ್ರಗಡ: ಸಮೀಪದ ಕುಂಟೋಜಿ ಗ್ರಾಮದ ರೈತ ಕಳಕಪ್ಪ ನಿಂಗಪ್ಪ ಬಡಿಗೇರ ಅವರು ಕೊಳವೆ ಬಾವಿಯಿಂದ ಸಿಗುವ ಅತ್ಯಲ್ಪ ನೀರನ್ನೇ ಸದ್ಬಳಕೆ ಮಾಡಿಕೊಂಡು ಮಾವು, ಚಿಕ್ಕು, ಪೇರಲ ಬೆಳೆದು ಕೈತುಂಬಾ ವರಮಾನ ಗಳಿಸುತ್ತಿದ್ದಾರೆ.

ಬೋರ್‌ವೆಲ್‌ನಿಂದ ಸಿಗುವ (ಒಂದಿಂಚು) ನೀರಿನಲ್ಲೇ ತಮ್ಮ ಮೂರೂವರೆ ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ನೇರಳೆ, ನಿಂಬೆ, ತೆಂಗು ಬೆಳೆದು ಹೆಚ್ಚುವರಿ ಆದಾಯ ಗಳಿಸುವ ಮೂಲಕ ತಾಲ್ಲೂಕಿನ ಇತರೆ ರೈತರಿಗೂ ಮಾದರಿಯಾಗಿದ್ದಾರೆ.

ಸತತ ಬರದಿಂದಾಗಿ ತಾಲ್ಲೂಕಿನಾದ್ಯಂತ ಅಂತರ್ಜಲ ಪಾತಾಳಕ್ಕೆ ಕುಸಿದಿದೆ. ತೋಟಗಾರಿಕೆ ಬೆಳೆ ಇರಲಿ, ಸಾಮಾನ್ಯ ಬೆಳೆಗಳಿಗೂ ನೀರು ಸಾಲದ ಪರಿಸ್ಥಿತಿ ಇದೆ. ಕೃಷಿಯಲ್ಲಿ ಲಾಭವಿಲ್ಲ ಎಂದುಕೊಂಡು ರೈತರು ಸಹ, ಉದ್ಯೋಗ ಅರಸಿ ದೂರದ ಊರುಗಳಿಗೆ ಗುಳೆ ಹೋಗುತ್ತಿರುವ ಸಂದರ್ಭದಲ್ಲಿ, ಕಳಕಪ್ಪ ಬಡಿಗೇರ ಅವರು ತಮ್ಮ ಗರಸು ಮಿಶ್ರಿತ ಜಮೀನಿನಲ್ಲಿ ಸಮೃದ್ಧ ಬೆಳೆ ತೆಗೆದಿದ್ದಾರೆ.

ADVERTISEMENT

ಕಳಕಪ್ಪ ಅವರು ತಮ್ಮ ಜಮೀನಿನಲ್ಲಿ 8 ಕೊಳವೆ ಬಾವಿಗಳನ್ನು ಕೊರೆಯಿಸಿ, ನೀರು ಲಭಿಸದೆ ಕೈ ಸುಟ್ಟುಕೊಂಡಿದ್ದರು. ಆದರೆ, ಛಲ ಬಿಡದೆ ಕೊರೆಯಿಸಿದ 9ನೇ ಕೊಳವೆ ಬಾವಿಯಲ್ಲಿ ಅತ್ಯಲ್ಪ ನೀರು ಸಿಕ್ಕಿತು. ಇದು ಮರುಭೂಮಿಯಲ್ಲಿನ ಒಯಾಸಿಸ್‌ನಂತೆ ಬೆಳೆಗಳಿಗೆ ನೆರವಾಯಿತು.

ದಶಕದ ಹಿಂದೆ ₹10 ಸಾವಿರ ಖರ್ಚು ಮಾಡಿ, ಗೋಕಾಕದಿಂದ 400 ಮಾವು, 400 ಚಿಕ್ಕು ಸಸಿಗಳನ್ನು ತರಿಸಿ, ನಾಟಿ ಮಾಡಿದರು. ಜಮೀನಿನಲ್ಲಿ ಅಲ್ಲಲ್ಲಿ ಸಿಮೆಂಟಿನ ದೋಣಿಗಳನ್ನು ನಿರ್ಮಿಸಿ, ಅವುಗಳಲ್ಲಿ ನೀರು ತುಂಬಿಸಿ, ಅಲ್ಲಿಂದ ಎಲ್ಲ ಗಿಡಗಳ ಬುಡಕ್ಕೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸಿದರು. ಹೀಗೆ ಮಕ್ಕಳಂತೆ ಈ ಗಿಡಗಳನ್ನು ಪೋಷಣೆ ಮಾಡಿದ್ದರಿಂದ, ಅವುಗಳು ಈ ಕೈತುಂಬ ಆದಾಯ ನೀಡುತ್ತಿವೆ.

ವರ್ಷದ ಹಿಂದೆ ಜಮೀನಿನಲ್ಲಿ ಖಾಲಿ ಇದ್ದ ಸ್ಥಳದಲ್ಲಿ ಅರಣ್ಯ ಇಲಾಖೆಯಿಂದ 500 ಹೆಬ್ಬೇವು ಸಸಿಗಳನ್ನು ಪಡೆದು ನಾಟಿ ಮಾಡಿದ್ದಾರೆ. 50 ಪೇರಲ, 25 ನೇರಳೆ, 40 ತೆಂಗು, 50 ನಿಂಬೆ ಜತೆಗೆ 1 ಸಾವಿರ ಸಾಗವಾನಿ ಸಸಿಗಳನ್ನು ಬೆಳೆಸಿದ್ದಾರೆ.

‘ಜಮೀನಿನಲ್ಲಿ ನೀರಿಲ್ಲ, ಸರಿಯಾದ ಸಮಯಕ್ಕೆ ಆಳು ಸಿಗುವುದಿಲ್ಲ, ಇಂದಿನ ಕೃಷಿಯಲ್ಲಿ ಲಾಭ ಇಲ್ಲ ಎಂದು ಗೋವಾ, ಮಂಗಳೂರು ನಗರಗಳಿಗೆ ದುಡಿಯಲು ಗುಳೆ ಹೋಗುವ ರೈತರಿಗೆ ಕಳಕಪ್ಪ ಬಡಿಗೇರ ಮಾದರಿಯಾಗಿದ್ದಾರೆ’ ಎನ್ನುತ್ತಾರೆ ಮ್ಯಾಕಲಝರಿ ಗ್ರಾಮದ ಪ್ರಗತಿಪರ ರೈತ ಅಂದಪ್ಪ ಅಂಗಡಿ.

ಮಾವಿನ ಸಸಿ ನಡುವೆ ಸೋರೆಕಾಯಿ

ಎರಡು ತಿಂಗಳ ಹಿಂದೆ ಕೊಪ್ಪಳದ ಹತ್ತಿರದ ಚಿಕ್ಕ ಸಿಂದೋಗಿ ಗ್ರಾಮದ ರೈತ ಬಸವರಾಜನಿಂದ ಸೋರೆಕಾಯಿ ಬೀಜಗಳನ್ನು ತಂದು ಮಾವಿನ ಮರಗಳ ಮಧ್ಯದಲ್ಲಿ ಬಿತ್ತಿ, ಈಗ ಅದರಿಂದಲು ಇಳುವರಿ ಪಡೆಯುತ್ತಿದ್ದಾರೆ.

ಕಳಕಪ್ಪ ಅವರು ಇದುವರೆಗೂ ತಮ್ಮ ಜಮೀನಿನಲ್ಲಿ ಯಾವುದೇ ರಾಸಾಯನಿಕ, ರಸಗೊಬ್ಬರ, ಔಷಧ ಬಳಸದೇ ಕೇವಲ ಕೊಟ್ಟಿಗೆ ಗೊಬ್ಬರ ಬಳಸಿ, ಎಲ್ಲ ಖರ್ಚು ಕಳೆದು ವರ್ಷಕ್ಕೆ ಸರಾಸರಿ ₹1 ರಿಂದ ₹1.50 ಲಕ್ಷ ಲಾಭ ಗಳಿಸುತ್ತಿದ್ದಾರೆ.

‘ಹೋದ ವರ್ಷ ಮಾವಿನ ಗಿಡಾನ ₹61 ಸಾವಿರಕ್ಕ ಗುತ್ತಿಗೆ ಕೊಟ್ಟಿದ್ವಿ, ಈಗ ₹35 ಸಾವಿರಕ್ಕೆ ಚಿಕ್ಕು ಹಣ್ಣು ಆರು ತಿಂಗಳು ಗುತ್ತಿಗೆ ಕೊಟ್ಟಿದ್ದೀವಿ‘ ಎನ್ನುತ್ತಾರೆ ಕಳಕಪ್ಪ ಬಡಿಗೇರ.

* ಹೊಲದಾಗ ನೀರು ಕಡಿಮೆ ಇದೆ ಅನ್ನೊದೇ ಒಂದು ಕೊರಗು.ನೀರು ಇನ್ನೂ ಸ್ವಲ್ಪ ಇದ್ದಿದ್ದರೆ ಇದರ ಎರಡು ಪಟ್ಟು ಲಾಭ ಬರುತ್ತಿತ್ತು

ಕಳಕಪ್ಪ ಬಡಿಗೇರ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.