
ನರೇಗಲ್: ‘ಸರ್ಕಾರಗಳು, ಮಧ್ಯವರ್ತಿಗಳು ಹಾಗೂ ಅಧಿಕಾರಿಗಳಿಂದ ರೈತರು ನಿರಂತರ ಸಮಸ್ಯೆ ಎದುರಿಸುತ್ತಿದ್ದು, ರೈತರಿಗೆ ಸಂಘಟನೆ ಮತ್ತು ಹೋರಾಟ ಒಂದೇ ಪರಿಹಾರವಾಗಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಗೌರವಾಧ್ಯಕ್ಷ ಮಾದೇಗೌಡ್ರು ಹೇಳಿದರು.
ಸಮೀಪದ ಅಬ್ಬಿಗೇರಿ ಗ್ರಾಮದ ಶ್ರೀಕಂಠಿ ಬಸವೇಶ್ವರ ದೇವಸ್ಥಾನದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ ಪದಾಧಿಕಾರಿಗಳ ಪದಗ್ರಹಣ, ನೂತನ ಗ್ರಾಮ ಘಟಕದ ರಚನೆ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳಪೆ ಬೀಜಗಳ ಪೂರೈಕೆ, ಹವಾಮಾನ ಬದಲಾವಣೆ, ಅತಿವೃಷ್ಠಿ, ಅನಾವೃಷ್ಠಿ, ಸಾಲದ ಹೊರೆ, ಮಾರುಕಟ್ಟೆ ಕೊರತೆ, ಮತ್ತು ಅಸಮರ್ಪಕ ಮೂಲಸೌಕರ್ಯ, ಅನಿಯಂತ್ರಿತ ಬೆಲೆ, ಸರ್ಕಾರಗಳ ದ್ವಿಮುಖ ನೀತಿಗಳಂತಹ ಸಮಸ್ಯೆಗಳನ್ನು ರೈತರು ನಿರಂತರವಾಗಿ ಎದುರಿಸುತ್ತಿದ್ದು, ಪರಿಹಾರಕ್ಕೆ ಹೋರಾಟವೇ ಅನಿವಾರ್ಯ’ ಎಂದರು.
ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮುತ್ತನಗೌಡ ಚೌಡರೆಡ್ಡಿ ಮಾತನಾಡಿ, ‘ರೈತರ ಭೂಮಿಯು ಸಣ್ಣ ತುಂಡುಗಳಾಗಿ ವಿಭಜನೆಯಾಗುತ್ತಿರುವ ಕಾರಣ ಕೃಷಿ ಲಾಭ ಲಭಿಸುತ್ತಿಲ್ಲ. ಕಳಪೆ ನಿರ್ವಹಣೆ, ನೀರಾವರಿ ವ್ಯವಸ್ಥೆ, ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆಗಳು ಕೃಷಿ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತವೆ’ ಎಂದರು.
ಈ ವೇಳೆ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು. ರಾಯಪ್ಪ ತಾಳಿಕೋಟಿ, ಬಸವರಾಜ ಪಲ್ಲೇದ, ಸಂಗಣ್ಣ ದಂಡಿನ, ಸಂಗಣ್ಣ ಪವಾಡಶೆಟ್ಟಿ, ಸಿ.ಬಿ. ವಸ್ತ್ರದ, ಸಂಪತ ಕುಮಾರ, ಲಕ್ಷ್ಮಣ ಜಾಲಿಹಾಳ, ವೀರಪ್ಪ ತಳವಾರ, ವೀರಪ್ಪ ಹೊಂಬಳ್ಳಿ, ಚಂದ್ರಕಾಂತ ರಡ್ಡೇರ, ಪರಮೇಶ್ವರಪ್ಪ ವಡ್ಡರ, ಧರ್ಮಣ್ಣ ಭೂಸಗೌಡರ, ಬಸವರಾಜ ತೊಂಡಿಹಾಳ, ಶರಣಪ್ಪ ಚನ್ನಪ್ಪ ಗೌಡ್ರ, ಕಲ್ಲಯ್ಯ ಗುರುವಡೆಯರ, ಬಸನಗೌಡ ಪಾಟೀಲ ರಾಯಣ್ಣ ಶಿಂಪ್ರಿ, ಬಸವರಾಜ ಹೊಸಮನಿ, ಮೈಲಾರಪ್ಪ ಚವಡಿ, ಕಳಕಪ್ಪ ನೀರಲೋಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.