ಶಿರಹಟ್ಟಿ: ರಾಜ್ಯದಲ್ಲಿ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದೇವೆ ಎಂದು ಬೊಬ್ಬೆಹೊಡೆಯುವ ರಾಜ್ಯ ಸರ್ಕಾರ ರೈತ ಸಮುದಾಯಕ್ಕೆ ಉತ್ತರ ನೀಡಬೇಕಿದ್ದು, ಕೇವಲ ಸರ್ಕಾರಿ ಕಡತಗಳಲ್ಲಿ ಮಾತ್ರ ರೈತರಿಗೆ ಹಕ್ಕುಪತ್ರ ವಿತರಣೆಯಾಗಿದೆ ಎಂದು ಉತ್ತರ ಕರ್ನಾಟಕ ಮಹಾಸಭಾದ ಅಧ್ಯಕ್ಷ ರವಿಕಾಂತ ಅಂಗಡಿ ಆರೋಪಿಸಿದರು.
ಶುಕ್ರವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಾಗುವಳಿ ಮಾಡಿರುವ ಎಲ್ಲ ದಾಖಲೆಗಳನ್ನು ನೀಡಿ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಉಳುಮೆದಾರರ ಅರ್ಜಿಗಳನ್ನು ಪುನರ್‌ಪರಿಶೀಲನೆ ಮಾಡಬೇಕು. ಸಮರ್ಪಕ ಅರ್ಜಿಗಳನ್ನು ತಿರಸ್ಕಾರ ಮಾಡುವ ಪದ್ದತಿ ಕೈಬಿಡಬೇಕು. ರೈತರ ವ್ಯಾಜ್ಯಗಳು ಇದ್ದರೆ ಅಧಿಕಾರಿಗಳು ತಕ್ಷಣ ಅದನ್ನು ಸರಿಪಡಿಸಬೇಕು. ರೈತರನ್ನು ಒಕ್ಕೆಲೆಬ್ಬಿಸುವ ಯಾವುದೇ ಪ್ರಯತ್ನ ಸರ್ಕಾರ ಹಾಗೂ ಅಧಿಕಾರಿಗಳಿಂದ ನಡೆಯಬಾದು ಎಂದು ತಾಕೀತು ಮಾಡಿದರು.
ಕ್ಷೇತ್ರದ ಶಾಸಕರಿಗೆ ರೈತರಿಗೆ ನ್ಯಾಯ ದೊರಕಿಸಬೇಕೆಂಬ ಇಚ್ಚಾಶಕ್ತಿ ಇಲ್ಲ. ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿಲ್ಲ. ವಿಧಾನಸಭೆಯಲ್ಲಿ ಚರ್ಚಿಸಿದರೆ ಸಾಲದು. ಎಲ್ಲರ ಜೊತೆ ಸಂಪರ್ಕ ಸಾಧಿಸಿ ಸಮಸ್ಯೆಗಳನ್ನು ಅರಿತುಕೊಂಡು ಅನುಷ್ಠಾನಕ್ಕೆ ತರುವ ಪ್ರಯತ್ನ ಆಗಬೇಕು. ಅಕ್ರಮ ಜಮೀನುಗಳನ್ನು ಸಕ್ರಮಗೊಳಿಸಿ ರೈತರ ಬದುಕನ್ನು ಹಸನುಮಾಡುವ ನಿರ್ಧಾರವನ್ನು ಎಲ್ಲ ರಾಜಕಾರಣಿಗಳು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವರು ಕೇವಲ ಒಂದು ತಾಲ್ಲೂಕಿಗೆ ಸಿಮೀತವಲ್ಲ. ಇಡೀ ಜಿಲ್ಲೆ ಅವರ ವ್ಯಾಪ್ತಿಗೆ ಬರುತ್ತದೆ. ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರು ಕೇವಲ ಗದಗ ತಾಲ್ಲೂಕಿನಲ್ಲಿ ಮಾತ್ರ ಇಲ್ಲ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಇದ್ದಾರೆ ಎನ್ನುವ ವಾಸ್ತವ ಅಂಶವನ್ನು ಜಿಲ್ಲಾ ಉಸ್ತುವಾರಿ ಸಚಿವರು ಮನನ ಮಾಡಿಕೊಳ್ಳಬೇಕು. ಕಪ್ಪತ್ತಗುಡ್ಡ ವನ್ಯಜೀವಿ ಸಂರಕ್ಷಣೆಗೆ ಈ ಹಿಂದೆ ಹತ್ತು ಕಿ.ಮಿ ನಿಗಧಿಯಾಗಿತ್ತು. ವಿಪರ್ಯಾಸ ಎಂದರೆ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸಂರಕ್ಷಿತ ಪ್ರದೇಶವನ್ನು ಕೇವಲ ಒಂದು ಕಿ.ಮಿ ಮಾತ್ರ ನಿಗಧಿ ಮಾಡಿದ್ದಾರೆ. ಜನರಿಗೆ ಒಂದು ನ್ಯಾಯ. ರಾಜಕಾರಣಿಗಳಿಗೆ ಒಂದು ನ್ಯಾಯನಾ? ಎಂದು ಪ್ರಶ್ನಿಸಿದರು.
ಸಚಿವರು ಜಿಮ್ಸ್ ಆಸ್ಪತ್ರೆಗೆ ತಮ್ಮ ತಂದೆಯ ಹೆಸರನ್ನು ಇಡಲು ಸರ್ಕಾರದ ಹಂತದಲ್ಲಿ ಏನೆಲ್ಲ ಹರಸಾಹಸ ಮಾಡಿದರು. ಅದೇ ರೀತಿ ಹಲವು ದಶಕಗಳಿಂದ ಅಕ್ರಮ ಜಮೀನನ್ನು ಸಕ್ರಮ ಮಾಡಿಕೊಡಿ ಎಂದು ಜಿಲ್ಲೆಯ ರೈತರು ಹೋರಾಟ, ಪ್ರತಿಭಟನೆ ಮಾಡಿದರೂ ಯಾವದೇ ಕ್ರಮ ಇದುವರೆಗೂ ಕೈಗೊಂಡಿಲ್ಲ. ರೈತರ ಸಮಸ್ಯೆಗಳು ಹಾಗೂ ಭಾವನೆಗಳು ನಿಮಗೆ ಅರ್ಥವಾಗುತ್ತಿಲ್ಲವೇ?. ಅರ್ಥವಾದರೂ ಮಾಡುವ ಇಚ್ಚಾಶಕ್ತಿ ಕೊರತೆ ಇದೇಯಾ ಎಂಬುದನ್ನು ಜಿಲ್ಲೆಯ ಜನತೆಗೆ ತಿಳಿಸಬೇಕು ಎಂದು ಹರಿಹಾಯ್ದರು.
ಅಹೋರಾತ್ರಿ ಧರಣಿ:
ಹಲವು ದಶಕಗಳಿಂದ ಊಳುಮೆ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡದೇ ಅನ್ಯಾಯ ಮಾಡಿರುವ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಅ.19 ರಂದು ಪಟ್ಟಣದ ಫಕೀರೇಶ್ವರ ಮಠದಿಂದ ಆರಂಭಗೊಂಡು ಗದಗ ನಗರದ ಜಿಲ್ಲಾಡಳಿತ ಭವನವರೆಗೆ ಪಾದಯಾತ್ರೆ ಹಾಗೂ ಭವನದ ಮುಂದೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗಿದೆ. ಅ. 19ರಂದು ಫಕೀರೇಶ್ವರ ಮಠದಿಂದ ಆರಂಭಗೊಂಡ ಪ್ರತಿಭಟನೆ ಸೊರಟೂರ ಗ್ರಾಮದ ಮೂಲಕ ನಾಗಾವಿ ಬೆಳದಡಿ ಮೂಲಕ ಜಿಲ್ಲಾಡಳಿತ ಭವನದಲ್ಲಿ ಸಮಾರೋಪಗೊಳ್ಳುತ್ತದೆ. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ನಮ್ಮ ನ್ಯಾಯಯುತ ಬೇಡಿಕೆ ಈಡೇರುವವೆರಗೂ ಆಹೋರಾತ್ರಿ ಹೋರಾಟ ನಡೆಯುತ್ತದೆ. ಈ ಹೋರಾಟದಲ್ಲಿ ಜಿಲ್ಲೆ ಎಲ್ಲ ರೈತರು ಪ್ರಗತಿಪರ ಹೋರಾಟಗಾರರು ಎಲ್ಲ ರಾಜಕೀಯ ಮುಖಂಡರು ಹಾಗೂ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲ ರೈತರು ಭಾಗವಹಿಸಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಚಂಬಣ್ಣ ಬೆಂತೂರ ಮಂಜುನಾಥ ಅರೆಪಲ್ಲಿ ಪರಶುರಾಮ ಕಟಗಿ ಚಿನ್ನಪ್ಪ ವಡ್ಡರ ಶ್ರೀನಿವಾಸ ಬಾರಬಾರ ಈರಣ್ಣ ಚವ್ಹಾಣ ಶೇಖಪ್ಪ ಲಮಾಣಿ ಸಂತೋಷ ಲಮಾಣಿ ಧರ್ಮಣ್ಣ ಚವ್ಹಾಣ ಈಶ್ವರಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.