ರೋಣ: ತಾಲ್ಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಜಮೀನುಗಳು ಸಂಪೂರ್ಣ ಜಲಾವೃತವಾಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ.
ತಾಲ್ಲೂಕಿನ ಮುದೇನಗುಡಿ ಮತ್ತು ಹುಲ್ಲೂರು ಗ್ರಾಮಗಳ ಮಧ್ಯದ ಹಳ್ಳ ರಭಸವಾಗಿ ಹರಿಯುತ್ತಿದ್ದು, ಹುಲ್ಲೂರು ಗ್ರಾಮದ ಹಲವೆಡೆ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ ಗ್ರಾಮಸ್ಥರಿಗೆ ತೊಂದರೆ ಉಂಟಾಗಿದೆ. ಹಳ್ಳ ಪಕ್ಕದ ಜಮೀನುಗಳ ಹೆಸರು, ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿ ಸಂಭವಿಸಿದೆ.
ಮುದೇನಗುಡಿ ಮತ್ತು ಹುಲ್ಲೂರು ಮಧ್ಯದ ಹಳ್ಳ ಸಮಸ್ಯೆ ದಶಕಗಳಿಂದ ಇದ್ದು, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರಕ್ಕಾಗಿ ಹಲವು ಬಾರಿ ಆಗ್ರಹಿಸಿದರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಹಳ್ಳ ಮುಳ್ಳು ಕಂಟಿಗಳಿಂದ ಮುಚ್ಚಿಹೋಗಿದೆ. ಹಳ್ಳದ ನೀರು ಸರಾಗವಾಗಿ ಸಾಗಲು ಸಾಧ್ಯವಾಗದೇ ಜಮೀನು ಹಾಗೂ ಜನವಸತಿ ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಈ ಕುರಿತು ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಮೊದಲು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹುಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ ಗಟ್ಟಿ ಆಗ್ರಹಿಸಿದರು.
ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯದಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸುವುದರ ಜೊತೆಗೆ ರೈತರ ನಷ್ಟಕ್ಕೆ ತ್ವರಿತವಾಗಿ ಪರಿಹಾರ ನೀಡಬೇಕು– ದಶರಥ ಗಾಣಗೇರ, ರೋಣ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.