ADVERTISEMENT

ಸೋಂಕು ತಡೆ: ಕಲಾತಂಡಗಳ ಪಾತ್ರ ಹಿರಿದು-ಕೆ.ಲೀಲಾವತಿ

ರಾಜ್ಯ ಮಟ್ಟದ ಜಾನಪದ ಕಲಾತಂಡಗಳ ಕಾರ್ಯಾಗಾರದಲ್ಲಿ ಕೆ.ಲೀಲಾವತಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 4:39 IST
Last Updated 11 ನವೆಂಬರ್ 2021, 4:39 IST
ಹುಲಕೋಟಿಯಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಕಲಾತಂಡಗಳ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕಿ ಕೆ.ಲೀಲಾವತಿ ಉದ್ಘಾಟಿಸಿದರು
ಹುಲಕೋಟಿಯಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಕಲಾತಂಡಗಳ ಕಾರ್ಯಾಗಾರವನ್ನು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕಿ ಕೆ.ಲೀಲಾವತಿ ಉದ್ಘಾಟಿಸಿದರು   

ಗದಗ: ಎಚ್‌ಐವಿ ಸೋಂಕು ತಡೆಗಟ್ಟುವಲ್ಲಿ ಜನಪದ ಕಲಾ ತಂಡಗಳ ಪಾತ್ರ ಮಹತ್ವದ್ದಾಗಿದ್ದು, ಸಾಮಾನ್ಯ ಜನರ ಹೃದಯ ತಟ್ಟುವಲ್ಲಿ ಜಾನಪದ ಹಾಸುಹೊಕ್ಕಾಗಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿರ್ದೇಶಕಿ ಕೆ.ಲೀಲಾವತಿ ತಿಳಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ವತಿಯಿಂದ ಹುಲಕೋಟಿಯಲ್ಲಿ ನಡೆದ ರಾಜ್ಯ ಮಟ್ಟದ ಜಾನಪದ ಕಲಾತಂಡಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಎಚ್‌ಐವಿ, ಏಡ್ಸ್‌ಗೆ ಮದ್ದಿಲ್ಲ; ಮುಂಜಾಗ್ರತೆಯೇ ಇದಕ್ಕೆ ಮದ್ದು. ಸುರಕ್ಷಿತ ಲೈಂಗಿಕತೆಯ ಮೂಲಕ ಎಚ್‌ಐವಿ ಸೋಂಕಿನಿಂದ ದೂರವಿರಬಹುದು ಎಂದು ಜಾನಪದ ಕಲಾ ತಂಡದವರು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜೆ.ಸಲಗರೆ ಮಾತನಾಡಿ, ‘ಎಚ್‌ಐವಿ ಸೋಂಕಿನ ನಿಯಂತ್ರಣದಲ್ಲಿ ಜಾನಪದ ಮಾಧ್ಯಮ ಪರಿಣಾಮಕಾರಿ ಸಾಧನವಾಗಿದ್ದು, ಜನರ ನಡೆನುಡಿಗಳಲ್ಲಿ ಬದಲಾವಣೆ ಮಾಡುವಂತಹ ಶಕ್ತಿ ಜಾನಪದ ಕಲೆಗೆ ಇದೆ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಎಚ್‌ಐವಿ ಸೋಂಕಿತರಿಗೆ, ಅಬಲೆಯರಿಗೆ, ಮಕ್ಕಳಿಗೆ ಉಚಿತ ಕಾನೂನು ಸೇವೆ ಲಭ್ಯವಿದ್ದು, ಇದರ ಪ್ರಯೋಜನ ಪಡೆದುಕೊಳ್ಳುವಂತೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಡಾ. ಸಂಜಯ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಕಲಾತಂಡಗಳಿಗೆ ಕಾರ್ಯಾಗಾರದ ಉದ್ದೇಶ, ಗುರಿ ಹಾಗೂ ಎಚ್‌ಐವಿ, ಏಡ್ಸ್ ನಿಯಂತ್ರಣದಲ್ಲಿ ಜಾನಪದ ಕಲೆಯ ಮಹತ್ವ ಕುರಿತು ವಿವರಿಸಿದರು.

ಜಾನಪದ ಸಂಪನ್ಮೂಲ ವ್ಯಕ್ತಿ ಹಿರೇಮಠ ಮಾತನಾಡಿ, ‘ಜಾನಪದ ಕಲೆಯು ಸಾಮಾನ್ಯ ಜನರ ಬದುಕಿನಲ್ಲಿ, ಕೃಷಿಕರ ಕಾರ್ಯದಲ್ಲಿ ಹಾಸುಹೊಕ್ಕಾಗಿದೆ. ಜನರಿಂದ ಜನರ ಮೂಲಕ ಕಲೆಯಾಗಿ ಬಂದಿರುವ ಜಾನಪದ ಕಲೆಯಾಗಿ ಎಲ್ಲರ ಉಸಿರಿನಲ್ಲಿ ಬೆರೆತುಹೋಗಿದೆ’ ಎಂದು ಹೇಳಿದರು.

ಎನ್‌ಟಿಇಪಿ ಕಾರ್ಯಕ್ರಮದಲ್ಲಿ ಉತ್ತಮ ಕಾರ್ಯನಿರ್ವಹಣೆಗಾಗಿ ರಾಜ್ಯ ಪ್ರಶಸ್ತಿ ಪಡೆದ ಅಶ್ವತ್ಥ್‌ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಕೆಸಾಪ್ಸ್ ಸಹಾಯಕ ನಿರ್ದೇಶಕರಾದ ಶ್ರೀನಿವಾಸ, ನಂಜೇಗೌಡ, ಹೊಸಮನಿ ಇದ್ದರು.

ಮಲ್ಲಿಕಾರ್ಜುನ ಜಾನಪದ ಕಲಾತಂಡದ ಗುರುನಾಥ ಹುಬ್ಬಳ್ಳಿ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಡಾ. ಅರುಂಧತಿ ಕೆ. ಸ್ವಾಗತಿಸಿದರು. ಕೆಸಾಪ್ಸ್ ಐಇಸಿ ವಿಭಾಗದ ಉಪ ನಿರ್ದೇಶಕ ಗೋವಿಂದರಾಜ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಇಸಿಟಿಸಿ ಮೇಲ್ವಿಚಾರಕ ಬಸವರಾಜ ಲಾಳಗಟ್ಟಿ ವಂದಿಸಿದರು.

2002ರಲ್ಲಿ ಶೇ 2ರಷ್ಟಿದ್ದ ಎಚ್‌ಐವಿ ಸೋಂಕಿನ ಪ್ರಮಾಣ ಈ ವರ್ಷ ಶೇ 0.36ಕ್ಕೆ ಇಳಿಕೆಯಾಗಿದೆ. ಇದರ ನಿಯಂತ್ರಣದಲ್ಲಿ ಅಧಿಕಾರಿಗಳು, ಸಿಬ್ಬಂದಿಯ ಪರಿಶ್ರಮವಿದ್ದು, ಜಾನಪದ ಕಲೆಯ ಕೊಡುಗೆ ಸಾಕಷ್ಟಿದೆ

ಡಾ. ಜಗದೀಶ ನುಚ್ಚಿನ, ಡಿಎಚ್‌ಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.