ADVERTISEMENT

ಮರಗಾಲು ಕಟ್ಟಿಕೊಂಡು ಯಲ್ಲಮ್ಮನ ಗುಡ್ಡಕ್ಕೆ 80ಕಿ.ಮೀ ಪಾದಯಾತ್ರೆ ಮಾಡಿದ ಯುವಕ ರವಿ!

​ಪ್ರಜಾವಾಣಿ ವಾರ್ತೆ
Published 17 ಜನವರಿ 2022, 5:09 IST
Last Updated 17 ಜನವರಿ 2022, 5:09 IST
ನರಗುಂದ ಮಾರ್ಗವಾಗಿ ರೋಣ ತಾಲ್ಲೂಕು ಮಲ್ಲಾಪುರದಿಂದ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಯುವಕ ರವಿ ಕರಿಯಣ್ಣವರ ಮರಗಾಲು ಕಟ್ಟಿಕೊಂಡು ಕೈಗೊಂಡ ಪಾದಯಾತ್ರೆಗೆ ಗೆಳೆಯರು ಸಾಥ್ ನೀಡಿರುವುದು
ನರಗುಂದ ಮಾರ್ಗವಾಗಿ ರೋಣ ತಾಲ್ಲೂಕು ಮಲ್ಲಾಪುರದಿಂದ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಯುವಕ ರವಿ ಕರಿಯಣ್ಣವರ ಮರಗಾಲು ಕಟ್ಟಿಕೊಂಡು ಕೈಗೊಂಡ ಪಾದಯಾತ್ರೆಗೆ ಗೆಳೆಯರು ಸಾಥ್ ನೀಡಿರುವುದು   

ನರಗುಂದ: ಕೋವಿಡ್‌ನಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನದ ದರ್ಶನ ನಿರ್ಬಂಧಿಸಿದ್ದರೂ ಸೋಮವಾರ ಬನದ ಹುಣ್ಣಿಮೆ ಅಂಗವಾಗಿ ನರಗುಂದ ಮಾರ್ಗವಾಗಿ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಹೋಗುವುದನ್ನುಭಕ್ತರು ಮಾತ್ರ ನಿಲ್ಲಿಸುತ್ತಿಲ್ಲ.

ರೋಣ ತಾಲ್ಲೂಕಿನ ಮಲ್ಲಾಪುರದ ಯುವಕ ರವಿ ಕರಿಯಣ್ಣವರ ಮರಗಾಲು ಕಟ್ಟಿಕೊಂಡು ಸುಮಾರು 80 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದು, ಭಾನುವಾರ ಸಂಜೆ ನರಗುಂದ ತಾಲ್ಲೂಕಿನ ಮದಗುಣಕಿ ಸಮೀಪ ತೆರಳುತ್ತಿರುವುದು ಕಂಡು ಬಂತು.

ಪಾದಯಾತ್ರೆ ಮೂಲಕ ದೇವರಿಗೆ ತೆರಳುವುದು ಸಹಜ. ಆದರೆ ಮರದ ಕಾಲು ಕಟ್ಟಿಕೊಂಡು ನಿರಂತರ ಸಾಗುತ್ತಿರುವುದು ಸರಳವಲ್ಲ. ರವಿ ಅವರಿಗೆ ಗೆಳೆಯರಾದ ಶರಣಪ್ಪ ಅಳಗುಂಡಿ, ಮಂಜುನಾಥ ಮಡಿವಾಳರ, ಮಂಜು ಡೊಳ್ಳಿನ, ಮೈಲಾರೇಶ ಡೊಳ್ಳಿನ ಸಾಥ್ ನೀಡಿದ್ದಾರೆ.

ADVERTISEMENT

‘ಯಲ್ಲಮ್ಮನ ದರ್ಶನವನ್ನು ಪಾದಯಾತ್ರೆ ಮೂಲಕವೇ ಮಾಡಬೇಕೆಂಬ ಸಂಕಲ್ಪ ಮಾಡಿಕೊಂಡಿದ್ದೇವೆ. ದೇವಿ ದರ್ಶನ ಆಗಲಿ, ಬಿಡಲಿ ಆ ವಾಸಸ್ಥಾನಕ್ಕೆ ಹೋಗಿ ಹಣ್ಣು, ಕಾಯಿ ಮಾಡಕೊಂಡ ಬರ್ತೇವಿ’ ಎಂದು ಮಂಜುನಾಥ ಮಡಿವಾಳರ ಹೇಳಿದರು.

ಭಾನುವಾರ ಸಂಜೆ 4 ಗಂಟೆಗೆ ಮಲ್ಲಾಪುರದಿಂದ ಹೊರಟ ಯುವಕರು ಹದಲಿಕ್ರಾಸ್‌ಗೆ ಬಂದಾಗ 7 ಗಂಟೆಯಾಗಿತ್ತು. ಒಂದು ತಾಸಿಗೆ 10-15 ಕಿ. ಮೀ ಚಲಿಸುವ ಯುವಕರು ಸೋಮವಾರ ಬೆಳಿಗ್ಗೆ ಸವದತ್ತಿ ಯಲ್ಲಮ್ಮನಗುಡ್ಡ ತಲುಪುವ ಸಾಧ್ಯತೆ ಇದೆ.

‘ನನ್ನದು ಒಂದು ಹರಕೆ ಇದೆ. ಅದನ್ನು ಈಡೇರಿಸಿಕೊಳ್ಳುವ ಸಲುವಾಗಿ ಮರಗಾಲು ಕಟ್ಟಿಕೊಂಡು 80 ಕಿ.ಮೀ ಪಾದಯಾತ್ರೆ ಕೈಕೊಂಡೇನಿ. ಯಲ್ಲಮ್ಮ ಈಡೇರಸ್ತಾಳ ಅನ್ನೋ ನಂಬಿಕೆ ಐತಿ’ ಎಂದು ರವಿ ಹೇಳಿದರು.

ಪಾದಯಾತ್ರೆಗೆ ನೂರಾರು ಯುವಕರು

ದೂರದ ಕುಷ್ಟಗಿ, ಯಲಬುರ್ಗಾ, ಕೊಪ್ಪಳ, ಸಿಂಧನೂರು ಸೇರಿದಂತೆ ಹಲವಾರು ಪಟ್ಟಣ, ಹಳ್ಳಿಗಳಿಂದ ನೂರಾರು ಯುವಕರು ಕಳೆದ ನಾಲ್ಕೈದು ದಿನಗಳಿಂದ 200 ಕಿ.ಮೀಗೂ ಹೆಚ್ಚು ಪಾದಯಾತ್ರೆಗೆ ಮುಂದಾಗಿದ್ದು ಯಲ್ಲಮ್ಮ ನಮ್ಮ ಇಷ್ಟಾರ್ಥ ಈಡೇರಿಸುತ್ತಾಳೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.