ADVERTISEMENT

ನ್ಯಾಯಾಲಯಕ್ಕೆ ಲೆಕ್ಕಾಚಾರದ ಜ್ಞಾಪಕ ಪತ್ರ: ವಾರೆಂಟ್‌ ಜಾರಿ

ಗದಗ: ನ್ಯಾಯಾಲಯಕ್ಕೆ ಲೆಕ್ಕಾಚಾರದ ಜ್ಞಾಪಕ ಪತ್ರ: ವಾರೆಂಟ್‌ ಜಾರಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2021, 3:23 IST
Last Updated 10 ಫೆಬ್ರುವರಿ 2021, 3:23 IST
ನ್ಯಾಯಾಲಯದ ಆದೇಶದಂತೆ ಕಚೇರಿ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಲಾಯಿತು
ನ್ಯಾಯಾಲಯದ ಆದೇಶದಂತೆ ಕಚೇರಿ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಲಾಯಿತು   

ಗದಗ: ಕೆರೆಯೊಂದರ ಕಾಮಗಾರಿ ನಡೆಸಿದ್ದ ಗುತ್ತಿಗೆದಾರನಿಗೆ ಅಂತಿಮ ಬಿಲ್ ನೀಡದ ಆರೋಪದಡಿ ನ್ಯಾಯಾಲಯ ನೀಡಿದ್ದ ಜಪ್ತಿ ವಾರೆಂಟ್ ಅನ್ವಯ ಸಣ್ಣ ನೀರಾವರಿ ಇಲಾಖೆಯ ಕಚೇರಿ ಪೀಠೋಪಕರಣಗಳನ್ನು ಜಪ್ತಿ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಗುತ್ತಿಗೆದಾರ ಪರ ವಕೀಲ ಎಸ್.ಆರ್. ಶಾಂತಗಿರಿ ನೇತೃತ್ವದಲ್ಲಿ ಕಚೇರಿಯ ಟೇಬಲ್, ಕಪಾಟು, ಕಂಪ್ಯೂಟರ್, ಕುರ್ಚಿ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು. ಇದರಿಂದಾಗಿ ಈಗ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಕುಳಿತುಕೊಳ್ಳಲು ಕುರ್ಚಿಗಳೇ ಇಲ್ಲದಂತಾಗಿದೆ!

ಪ್ರಕರಣ ವಿವರ: 1985-86ರಲ್ಲಿ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಮುಂಡವಾಡ ಕೆರೆ ಅಭಿವೃದ್ಧಿ ಮಾಡಲು ಟೆಂಡರ್ ಕರೆಯಲಾಗಿತ್ತು. ಈ ವೇಳೆ ಪ್ರಥಮ ದರ್ಜೆ ಗುತ್ತಿಗೆದಾರ ರಾಮಚಂದ್ರ ನಾಯ್ಕ್ ಅವರಿಗೆ ಟೆಂಡರ್ ಆಗಿತ್ತು. ಆರಂಭದಲ್ಲಿ ಟೆಂಡರ್ ಅನ್ವಯ ಮೊದಲ ಕಂತಿನ ಹಣ ನೀಡಿದ್ದ ಸಣ್ಣ ನೀರಾವರಿ ಇಲಾಖೆ, ನಂತರ ಕಾಮಗಾರಿಯಲ್ಲಿ
ಉಂಟಾದ ತಾಂತ್ರಿಕ ತೊಂದರೆಯಿಂದಾಗಿ ಗುತ್ತಿಗೆದಾರನಿಗೆ ಅಂತಿಮ ಬಿಲ್ ನೀಡಿರಲಿಲ್ಲ.

ADVERTISEMENT

ಇದರ ವಿರುದ್ಧ ಗುತ್ತಿಗೆದಾರರು ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿದಾರರ ವಾದ ಪುರಸ್ಕರಿಸಿದ ನ್ಯಾಯಾಲಯ ₹68 ಲಕ್ಷ ಬಡ್ಡಿ ಹಾಗೂ ₹1.15 ಕೋಟಿ ನೀಡುವಂತೆ 1994ರಲ್ಲಿ ಆದೇಶ ನೀಡಿತ್ತು. ಆದರೆ, ಇಲಾಖೆಯು ಗುತ್ತಿಗೆದಾರನಿಗೆ ಪೂರ್ಣ ಪ್ರಮಾಣದ ಹಣ ನೀಡದೇ ಭಾಗಶಃ ನೀಡಿದ್ದರಿಂದ ಗುತ್ತಿಗೆದಾರರು ವಕೀಲರ ಮೂಲಕ ಮತ್ತೆ ನ್ಯಾಯಾಲಯಕ್ಕೆ ಲೆಕ್ಕಾಚಾರದ ಜ್ಞಾಪಕ ಪತ್ರ ನೀಡಿದ್ದರು.

ಈ ಆಧಾರದಲ್ಲಿ ನ್ಯಾಯಾಲಯವು ಮತ್ತೆ 2021ರ ಜ.13ರಂದು ಒಟ್ಟು ₹2.99 ಕೋಟಿ ನೀಡುವಂತೆ ಆದೇಶ ನೀಡಿತ್ತು. ಇಲಾಖೆ ಈ ಆದೇಶಕ್ಕೂ ಸ್ಪಂದಿಸದ ಕಾರಣ ನ್ಯಾಯಾಲಯವು ಜಪ್ತಿ ವಾರೆಂಟ್ ಜಾರಿ ಮಾಡಿತ್ತು. ಇದರನ್ವಯ ಮಂಗಳವಾರ ಗುತ್ತಿಗೆದಾರರ ಪರ ವಕೀಲ ಎಸ್.ಆರ್. ಶಾಂತಗೇರಿ ಅವರು ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಿಸಿ, ಕೋರ್ಟ್ ಕಸ್ಟಡಿಗೆ ನೀಡಿದ್ದಾರೆ.

‘ಕೆಲಸ ಸ್ವಲ್ಪ ನಿಧಾನವಾಗಿದ್ದು ನಿಜ. ಆದರೆ, ಇದು 1985-86ರಲ್ಲಿ ಮಾಡಿದ ಕಾಮಗಾರಿ. ಈವರೆಗೂ ಅಂತಿಮ ಬಿಲ್ ನೀಡಿಲ್ಲ’ ಎಂದು ಗುತ್ತಿಗೆದಾರನ ಮಗ ರಾಮನಾಥ ನಾಯ್ಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.