ADVERTISEMENT

ಠಾಣೆ ಆವರಣದಲ್ಲಿ ಹಸಿರು ಹೊನ್ನು..!

ಸ್ವಂತ ಖರ್ಚಿನಲ್ಲಿ ಉದ್ಯಾನ ಅಭಿವೃದ್ಧಿಪಡಿಸಿದ ಪೊಲೀಸ್‌ ಅಧಿಕಾರಿಗಳು

ಹುಚ್ಚೇಶ್ವರ ಅಣ್ಣಿಗೇರಿ
Published 9 ಡಿಸೆಂಬರ್ 2018, 17:19 IST
Last Updated 9 ಡಿಸೆಂಬರ್ 2018, 17:19 IST
ಗದುಗಿನ ಹಳೆ ಬಸ್ ನಿಲ್ದಾಣದ ಎದುರಿನ ಶಹರ ಪೊಲೀಸ್ ಠಾಣೆಯ ಉದ್ಯಾನ ಹಸಿರಿನಿಂದ ನಳನಳಿಸುತ್ತಿದೆ
ಗದುಗಿನ ಹಳೆ ಬಸ್ ನಿಲ್ದಾಣದ ಎದುರಿನ ಶಹರ ಪೊಲೀಸ್ ಠಾಣೆಯ ಉದ್ಯಾನ ಹಸಿರಿನಿಂದ ನಳನಳಿಸುತ್ತಿದೆ   

ಗದಗ: ನಗರ ಠಾಣೆಯ ಪೊಲೀಸರು ‘ಸಾರ್ವಜನಿಕ ಸ್ನೇಹಿ’ಯಾಗುವುದರ ಜತೆಯಲ್ಲೇ ‘ಪರಿಸರ ಸ್ನೇಹಿ’ಯೂ ಆಗಿದ್ದರ ಫಲವಾಗಿ ಠಾಣೆಯ ಆವರಣದಲ್ಲಿ ಹಸಿರು ಹೊನ್ನು ಮಿನುಗುತ್ತಿದೆ. ಸ್ವಂತ ಜೇಬಿನಿಂದ ಹಣ ಖರ್ಚು ಮಾಡಿ ಸುಂದರವಾದ ಉದ್ಯಾನ ಅಭಿವೃದ್ಧಿಪಡಿಸಿದ್ದಾರೆ. ನಗರದ ಹೃದಯ ಭಾಗದಲ್ಲೇ ಅಂದರೆ, ಹಳೆ ಬಸ್ ನಿಲ್ದಾಣದ ಎದುರಿನ ಗದಗ ಶಹರ ಪೊಲೀಸ್ ಠಾಣೆಯ ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ.

ಠಾಣೆಯ ಆವರಣದ ದಕ್ಷಿಣ ಭಾಗದಲ್ಲಿರುವ ಜಾಗವನ್ನು ಹಳೆಯ ವಾಹನಗಳನ್ನು ನಿಲುಗಡೆ ಮಾಡಲು ಉಪಯೋಗಿಸಲಾಗುತ್ತಿತ್ತು. ಇದೇ ಸ್ಥಳವನ್ನು ಠಾಣೆಯ ಸಿಬ್ಬಂದಿ ಶ್ರಮವಹಿಸಿ, ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಿದ್ದಾರೆ. ಸುಮಾರು 4 ಸಾವಿರ ಅಡಿ ಜಾಗದಲ್ಲಿ ವಿವಿಧ ಅಲಂಕಾರಿಕ ಹಾಗೂ ಹೂವಿನ ಸಸಿಗಳನ್ನು ಬೆಳೆಸಲಾಗಿದೆ. ಚಿಕ್ಕ ಕಾರಂಜಿ ನಿರ್ಮಿಸಲಾಗಿದೆ. ಬ್ಯಾಂಕ್‌ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು, ಪಾದಾಚಾರಿಗಳನ್ನು ಈ ಉದ್ಯಾನ ಆಕರ್ಷಿಸುತ್ತಿದೆ.

ಠಾಣೆಯ ಆವರಣವನ್ನು ಸಂಪೂರ್ಣ ಹಸಿರೀಕರಣ ಮಾಡುವ ಉದ್ದೇಶದಿಂದ ನರ್ಸರಿಯಿಂದ ಸಸಿಗಳನ್ನು ಖರೀದಿಸಿ, ನೆಡಲಾಗಿದೆ. ಗದಗ ಶಹರ ಠಾಣೆಗೆ ಸಿಪಿಐ ಆಗಿ ಬಂದ ದೌಲತ್ ಕುರಿ ಅವರು ಆರಂಭದಲ್ಲಿ ಇಲ್ಲಿ ಉದ್ಯಾನ ಅಭಿವೃದ್ಧಿಪಡಿಸಲು ಆಸಕ್ತಿ ವಹಿಸಿದರು. ನಂತರ ಠಾಣೆಗೆ ಪಿಎಸ್‍ಐಯಾಗಿ ಬಂದ ಶಿವಾನಂದ ಪಾಲಬಾವಿ ಅವರು ಅದನ್ನು ಇನ್ನಷ್ಟು ವಿಸ್ತರಿಸಿದರು. ದೌಲತ್‌ ಕುರಿ ಅವರು ಹಿಂದೆ ತಾವು ಕಾರ್ಯನಿರ್ವಹಿಸಿದ್ದ ಧಾರವಾಡ ಜಿಲ್ಲೆಯ ಗರಗ ಠಾಣೆಯಲ್ಲಿ ಉದ್ಯಾನ ನಿರ್ಮಿಸಿದ್ದರು.ಅದೇ ಮಾದರಿಯಲ್ಲಿ ಇಲ್ಲೂ ಕೂಡ ಹಸಿರೀಕರಣ ಮಾಡಿದರು. ಇದಕ್ಕಾಗಿ ಸರ್ಕಾರದ ಯಾವುದೇ ಅನುದಾನ ಬಳಕೆ ಮಾಡಿಕೊಂಡಿಲ್ಲ.

ADVERTISEMENT

ಉದ್ಯಾನದ ಸಸಿಗಳಿಗೆ ನೀರುಣಿಸಲು 8x10 ಅಡಿ ಅಳತೆಯ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ.ತುಂತುರು ನೀರಾವರಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಾಗಿದೆ. ನೀರಿನ ಮೋಟರ್‌ನ ಗುಂಡಿ ಒತ್ತಿದರೆ, ಇಡೀ ಉದ್ಯಾನದಲ್ಲಿ ನೀರು ಚಿಮ್ಮುತ್ತದೆ.

‘ಖಾಲಿ ಬಿದ್ದಿದ್ದ ಜಾಗದಲ್ಲಿ ಉದ್ಯಾನ ನಿರ್ಮಾಣ ಮಾಡಿರುವುದರಿಂದ ಮನಸ್ಸಿಗೆ ತುಂಬ ಖುಷಿ ಲಭಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿ
ಕಾರಿ ಕೆ. ಸಂತೋಷಬಾಬು, ಡಿವೈಎಸ್‍ಪಿ ವಿಜಯಕುಮಾರ ಟಿ. ಹಾಗೂ ಪೊಲೀಸ್‌ ಸಿಬ್ಬಂದಿ, ಸಾರ್ವಜನಿಕರ ಸಹಕಾರದಿಂದ ಈ ಸುಂದರ ಉದ್ಯಾನ ಅಭಿಪಡಿಸಲು ಸಾಧ್ಯವಾಗಿದೆ’ ಎಂದು ಸಿಪಿಐ ದೌಲತ್ ಎನ್. ಕುರಿ ತಿಳಿಸಿದರು.

*
ಉದ್ಯಾನದಲ್ಲಿ 100ಕ್ಕೂ ಹೆಚ್ಚು ವಿವಿಧ ಬಗೆಯ ಆಲಂಕಾರಿಕ ಹಾಗೂ ಹೂವಿನ ಸಸಿಗಳನ್ನು ಬೆಳೆಸಲಾಗಿದೆ. ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಶೆಲ್ಟರ್ ನಿರ್ಮಿಸುವ ಯೋಜನೆ ಇದೆ.
-ದೌಲತ್ ಎನ್. ಕುರಿ, ಸಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.