ADVERTISEMENT

ತೋಟಗಾರಿಕೆಯಲ್ಲಿ ಯಶಸ್ಸು ಕಂಡ ಸತೀಶ

ಪಪ್ಪಾಯ ಬೆಳೆದು ಆದಾಯ ಗಳಿಸುತ್ತಿರುವ ಮುಷ್ಠಿಕೊಪ್ಪದ ರೈತ

ಕಾಶಿನಾಥ ಬಿಳಿಮಗ್ಗದ
Published 9 ಜುಲೈ 2019, 4:28 IST
Last Updated 9 ಜುಲೈ 2019, 4:28 IST
ಪಪ್ಪಾಯ ತೋಟದಲ್ಲಿ ಯುವ ರೈತ ಸತೀಶ
ಪಪ್ಪಾಯ ತೋಟದಲ್ಲಿ ಯುವ ರೈತ ಸತೀಶ   

ಮುಂಡರಗಿ: ಬರ, ಮಳೆ ಕೊರತೆ ಮತ್ತಿತರ ನೈಸರ್ಗಿಕ ಅಡ್ಡಿಗಳಿಂದ ಇಂದು ಸಾಂಪ್ರದಾಯಿಕ ಕೃಷಿಯಲ್ಲಿ ರೈತರು ಲಾಭ ಪಡೆದುಕೊಳ್ಳುವುದು ಕಡಿಮೆಯಾಗಿದೆ. ಇದನ್ನು ಮನಗಂಡಿರುವ ತಾಲ್ಲೂಕಿನ ಹಮ್ಮಿಗಿ ಗ್ರಾಮದ ಯುವ ರೈತ ಸತೀಶ ರಾಮಚಂದ್ರರಾಜು ಪೆನ್ಮತ್ಸಾ (32) ಪಪ್ಪಾಯ ಹಾಗೂ ದಾಳಿಂಬೆ ಬೆಳೆದು ಕೈತುಂಬಾ ವರಮಾನ ಗಳಿಸುತ್ತಿದ್ದಾರೆ.

ಹಮ್ಮಿಗಿ ಗ್ರಾಮದಲ್ಲಿರುವ ತಮ್ಮ ಸ್ವಂತ 20ಎಕರೆ ಜಮೀನಿನ ಜತೆಗೆ ಸತೀಶ ಅವರು ತಾಲ್ಲೂಕಿನ ಮುಷ್ಠಿಕೊಪ್ಪ ಗ್ರಾಮದಲ್ಲಿ ಸುಮಾರು 24ಎಕರೆ ಜಮೀನು ಗುತ್ತಿಗೆ ಪಡೆದುಕೊಂಡು ಅದರಲ್ಲಿ ಪಪ್ಪಾಯ ಹಾಗೂ ದಾಳಿಂಬೆ ಬೆಳೆದಿದ್ದಾರೆ. ಹಾಳು ಬಿದ್ದ ಜಮೀನನ್ನು ಹಸನು ಮಾಡಿ, ತೋಟಗಾರಿಕೆ ಬೆಳೆ ಬೆಳೆಯಲು ₹ 40 ಲಕ್ಷ ಖರ್ಚು ಮಾಡಿದ್ದಾರೆ.

ಮಹಾರಾಷ್ಟ್ರದಿಂದ 10 ಸಾವಿರ ‘ರೆಡ್ ಲೇಡಿ’ ಎಂಬ ಉತ್ತಮ ಗುಣಮಟ್ಟದ ಪಪ್ಪಾಯ ಸಸಿಗಳನ್ನು ತಂದು ಅವುಗಳನ್ನು ಚೆನ್ನಾಗಿ ಬೆಳೆಸಿದ್ದಾರೆ. ಎಕರೆ ಜಮೀನಿಗೆ ₹ 1.30 ಲಕ್ಷ ಖರ್ಚಾಗಿದೆ. ಈಗಾಗಲೇ ಪಪ್ಪಾಯದಿಂದ ವರಮಾನ ಬರತೊಡಗಿದೆ. ಹಣ್ಣುಗಳನ್ನು ದೆಹಲಿ, ಮುಂಬೈ, ಬೆಂಗಳೂರು, ಇಂದೂರ್‌ಗೆ ರಫ್ತು ಮಾಡುತ್ತಾರೆ.

ADVERTISEMENT

ಹಂಗಾಮಿನಲ್ಲೂ ಒಂದು ಟನ್‌ ಪಪ್ಪಾಯ ಹಣ್ಣಿಗೆ ₹ 6ರಿಂದ ₹ 7ಸಾವಿರ ದರ ಲಭಿಸುತ್ತದೆ. ಸದ್ಯ ಮಳೆ ಆರಂಭವಾಗಿರುವುದರಿಂದ ಮಾರುಕಟ್ಟೆಯಲ್ಲಿ ಪಪ್ಪಾಯ ಹಣ್ಣಿನ ದರ ಕುಸಿದಿದೆ. ಒಂದು ಟನ್‌ಗೆ ₹ 3ರಿಂದ ₹ 4ಸಾವಿರಕ್ಕೆ ಇಳಿದಿದೆ.

ಪಪ್ಪಾಯ ಗಿಡಗಳ ನಡುವೆ ಅಲ್ಲಲ್ಲಿ 10 ಸಾವಿರ ದಾಳಿಂಬೆ ಸಸಿಗಳನ್ನು ಬೆಳೆಸಿದ್ದಾರೆ. ದಾಳಿಂಬೆಯಿಂದ ಇನ್ನು ಕೆಲವು ತಿಂಗಳಲ್ಲಿ ಫಸಲು ಬರುವ ನಿರೀಕ್ಷೆ ಇದೆ. ದಾಳಿಂಬೆಗೆ ಮಾರುಕಟ್ಟೆಯಲ್ಲಿ ಎಲ್ಲ ಅವಧಿಯಲ್ಲೂ ಬೇಡಿಕೆ ಮತ್ತು ಬೆಲೆ ಇದೆ.

ಹೀಗಾಗಿ ಇದರಿಂದ ಉತ್ತಮ ಆದಾಯದ ನಿರೀಕ್ಷಿಯಲ್ಲಿದ್ದಾರೆ. ಸತೀಶ ಅವರ ತೋಟದಲ್ಲಿ ಹಣ್ಣುಗಳನ್ನು ಕೀಳಲು, ನೀರು ಹಾಯಿಸಲು ಹಾಗೂ ಮತ್ತಿತರ ಕೃಷಿ ಕಾಯಕಗಳನ್ನು ನಿರ್ವಹಿಸಲು 10ಕ್ಕೂ ಹೆಚ್ಚು ಮಂದಿ ಕೂಲಿ ಕಾರ್ಮಿಕರಿದ್ದಾರೆ. ಕೃಷಿಯ ಮೂಲಕ ಸ್ಥಳೀಯವಾಗಿ ಇವರು ಉದ್ಯೋಗವನ್ನೂ ನೀಡಿದ್ದಾರೆ.

ನಷ್ಟಭರ್ತಿಗೆ ಮಿಶ್ರ ಬೆಳೆಯ ದಾರಿ..!

ಸತೀಶ ಅವರು ಮುಂದಾಲೋಚನೆಯಿಂದ ದಾಳಿಂಬೆ ಹಾಗೂ ಪಪ್ಪಾಯವನ್ನು ಒಂದೇ ಜಮೀನಿನಲ್ಲಿ ಬೆಳೆದಿದ್ದಾರೆ. ಈ ಮಿಶ್ರ ಕೃಷಿಯಿಂದ ಎರಡೂ ಬೆಳೆಗಳಿಗೆ ಗೊಬ್ಬರ ಇನ್ನಿತರ ನಿರ್ವಹಣೆಗಾಗಿ ಪ್ರತ್ಯೇಕ ಖರ್ಚು ಮಾಡುವ ಅಗತ್ಯವಿಲ್ಲ. ಪಪ್ಪಾಯ ಬೆಳೆಗೆಮಾಡುವ ಖರ್ಚು ದಾಳಿಂಬೆ ಬೆಳೆಗೂ ಸಲ್ಲುವುದರಿಂದ ಖರ್ಚು ಅರ್ಧದಷ್ಟು
ಕಡಿಮೆಯಾಗಿ, ಆದಾಯ ಒಂದು ಪಟ್ಟು ಹೆಚ್ಚುತ್ತದೆ.

ಈಗ ಪಪ್ಪಾಯದಲ್ಲಿ ನಷ್ಟವಾದರೂ ಮುಂದೆ ಬರಲಿರುವ ದಾಳಿಂಬೆಯು ಹೆಚ್ಚಿನ ಲಾಭ ತಂದು ಕೊಡಲಿದೆ ಎಂಬ ಅಭಿಪ್ರಾಯ ಅವರದು. ಈ ಪದ್ಧತಿಯಿಂದ ಸತೀಶ ಅವರಿಗೆ ಬೆಳೆ ನಷ್ಟದ ಪ್ರಶ್ನೆ ಎದುರಾಗುವುದಿಲ್ಲ. ಈ ನಿಟ್ಟಿನಲ್ಲಿ ಅವರು ತುಂಬಾ ಸುರಕ್ಷಿತವಾಗಿದ್ದಾರೆ.

**

ಇತ್ತೀಚಿನ ವರ್ಷಗಳಲ್ಲಿ ಬೆಳೆಹಾನಿ ಪ್ರಮಾಣ ಹೆಚ್ಚುತ್ತಿದೆ. ಮಿಶ್ರ ಬೆಳೆ ಪದ್ಧತಿ ಅನುಸರಿಸಿಕೊಂಡರೆ ಒಂದು ಬೆಳೆಯಲ್ಲಿ ಆದ ನಷ್ಟವನ್ನು ಇನ್ನೊಂದರಲ್ಲಿ ಸರಿದೂಗಿಸಿಕೊಳ್ಳಬಹುದು
– ಸತೀಶ ಪನ್ಮತ್ಸಾ, ಯುವ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.