ADVERTISEMENT

ಗದಗ ಬೆಟಗೇರಿ ನಗರಸಭೆ | ಕಮರಿದ ಬಿಜೆಪಿ ಕನಸು; ಕಾಂಗ್ರೆಸ್‌ಗೆ ಗದ್ದುಗೆ?

ಬಿಜೆಪಿಯ ಮೂವರು ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಮತ್ತೆ ಆರ್‌ಸಿ ಆದೇಶ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 28 ಫೆಬ್ರುವರಿ 2025, 6:20 IST
Last Updated 28 ಫೆಬ್ರುವರಿ 2025, 6:20 IST
ನಗರಸಭೆ ಕಟ್ಟಡ
ನಗರಸಭೆ ಕಟ್ಟಡ   

ಗದಗ: ದಿನಕ್ಕೊಂದರಂತೆ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತ ಸಾಗಿದ್ದ ಇಲ್ಲಿನ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ವಿಷಯ ಅಂತಿಮ ಘಟ್ಟ ತಲುಪಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಗದ್ದುಗೆ ಕಾಂಗ್ರೆಸ್‌ ಪಾಲಾಗುವುದು ನಿಚ್ಚಳವಾಗಿದೆ.

ನಕಲಿ ಠರಾವು ಸೃಷ್ಟಿಸಿ ಅದಕ್ಕೆ ಪ್ರಭಾರ ಪೌರಾಯುಕ್ತರ ಸಹಿ ಫೋರ್ಜರಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಬಿಜೆಪಿಯ ಉಷಾ ದಾಸರ, ಅನಿಲ್‌ ಅಬ್ಬಿಗೇರಿ ಮತ್ತು ಗೂಳಪ್ಪ ಮುಶಿಗೇರಿ ಅವರ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಬಿಜೆಪಿ ಸದಸ್ಯರು ಅದಕ್ಕೆ ತಡೆಯಾಜ್ಞೆ ತಂದಿದ್ದರು. ಆದರೆ, ಅದರಿಂದ ಸದಸ್ಯತ್ವ ಮತ್ತೆ ಸಿಕ್ಕರೂ ಚುನಾವಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿರಲಿಲ್ಲ.

ಈ ಮಧ್ಯೆ ಕೋರ್ಟ್‌ ಫೆ. 27ರಂದು ಮತ್ತೆ ಪ್ರಾದೇಶಿಕ ಆಯುಕ್ತರ ಎದುರು ವಿಚಾರಣೆಗೆ ಹಾಜರಾಗುವಂತೆ ಈ ಮೂವರಿಗೆ ಸೂಚಿಸಿತ್ತು. ಅದರಂತೆ, ಬಿಜೆಪಿಯ ಮೂವರು ಸದಸ್ಯರು ಗುರುವಾರ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಪ್ರಾದೇಶಿಕ ಆಯುಕ್ತರು ಕೂಲಂಕಷವಾಗಿ ವಿಚಾರಣೆ ನಡೆಸಿ ಅವರ ಸದಸ್ಯತ್ವವನ್ನು ಮತ್ತೆ ರದ್ದುಗೊಳಿಸಿ, ಆದೇಶ ಹೊರಡಿಸಿದ್ದಾರೆ. ಇದರಿಂದಾಗಿ, ಎರಡನೇ ಅವಧಿಯಲ್ಲಿ ಗದ್ದುಗೆ ಹಿಡಿಯಬೇಕು ಎಂಬ ಬಿಜೆಪಿಯ ಆಸೆ ಕಮರಿ ಹೋಗಿದೆ.

ADVERTISEMENT

ಗದಗ ಬೆಟಗೇರಿ ನಗರಸಭೆಯಲ್ಲಿ ಬಿಜೆಪಿ ಮೊದಲು 18 ಸಂಖ್ಯಾಬಲ ಹೊಂದಿತ್ತು. ಕಾಂಗ್ರೆಸ್‌ಗೆ 17 ಮಂದಿಯ ಬಲವಿತ್ತು. ಈಗ ಮೂರು ಮಂದಿಯ ಸದಸ್ಯತ್ವ ಮತ್ತೆ ರದ್ದಾಗಿರುವುದರಿಂದ ಬಿಜೆಪಿಯ ಬಲ 15ಕ್ಕೆ ಕುಸಿದಿದೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರವೇ ಚುನಾವಣೆ ನಡೆಯಲಿದ್ದು, ಈ ವೇಳೆ ಮತ ಚಲಾಯಿಸುವ ಹಕ್ಕು ಕಳೆದುಕೊಂಡಿದ್ದಾರೆ.

ಆದೇಶದಲ್ಲಿ ಏನಿದೆ?:

ನಗರಸಭೆ ಸದಸ್ಯರಾಗಿದ್ದ ಉಷಾ ದಾಸರ, ಅನಿಲ್‌ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಅವರ ವಿರುದ್ಧ ನಕಲಿ ಠರಾವು ಸೃಷ್ಟಿ ಮತ್ತು ಸಹಿ ಫೋರ್ಜರಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ. ಜತೆಗೆ ಪೊಲೀಸರು ಗದಗ ಜೆಎಂಎಫ್‌ಸಿ 1ನೇ ಕೋರ್ಟ್‌ನಲ್ಲಿ ಆರೋಪ ಪಟ್ಟಿ ಕೂಡ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರೊಸೀಡಿಂಗ್ಸ್‌ ಕೂಡ ಆರಂಭಗೊಂಡಿದೆ. ವಸ್ತುಸ್ಥಿತಿ ಹೀಗಿರುವಾಗ ಆಪಾದಿತರ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿರುತ್ತವೆ. ಆದಕಾರಣ, ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 41(1), (2)ರಂತೆ ಮೂವರು ಸದಸ್ಯರನ್ನು ಸದಸ್ಯತ್ವದಿಂದ ತೆಗೆದುಹಾಕಿ ಆದೇಶಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್‌.ಬಿ. ಶೆಟ್ಟೆಣ್ಣವರ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.